SUDDIKSHANA KANNADA NEWS/ DAVANAGERE/ DATE:31-10-2023
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ 47247 ರೈತರ ನೋಂದಣಿ ಮಾಡಿದ್ದಾರೆ. ಆದರೆ ಇನ್ನೂ ಸಾಕಷ್ಟು ರೈತರು ನೊಂದಣಿ ಮಾಡಬೇಕಾಗಿತ್ತು. ಈ ವರ್ಷ ಶೇ 100 ರಷ್ಟು ಬೆಳೆ ಪರಿಹಾರ ರೈತರಿಗೆ ಸಿಗಬೇಕು, ಆದರೆ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಹೆಚ್ಚು ರೈತರನ್ನು ಒಳಪಡಿಸಲು ಕೃಷಿ ಇಲಾಖೆ ಮುಂದಾಗಿಲ್ಲ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಅಸಮಧಾನ ವ್ಯಕ್ತಪಡಿಸಿದರು.
ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಸಂಸದರು ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರ ಸಿಗುವಂತೆ ನೋಡಿಕೊಳ್ಳಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 49 ವೆಂಟಿಲೇಟರ್ ಗಳಿದ್ದು, ಅದರಲ್ಲಿ 21 ವೆಂಟಿಲೇಟರ್ ಗಳು ಯಾವುದೇ ತೊಂದರೆ ಇಲ್ಲದಂತೆ ಉಪಯೋಗಕ್ಕೆ ಬರುತ್ತಿವೆ. ಬಾಕಿ ಉಳಿದ ವೆಂಟಿಲೇಟರ್ಗಳ ಸಣ್ಣ ಪುಟ್ಟ ತೊಂದರೆ ಇದ್ದಲ್ಲಿ, ರಿಪೇರಿ ಮಾಡಿಸಿ ಉಪಯೋಗಿಸಿ, ರಿಪೇರಿ ಆಗದೇ ಇರುವಂತಹ ವೆಂಟಿಲೇಟರ್ ಗಳನ್ನು ಕಂಪನಿಗಳಿಗೆ ಹಿಂದಿರುಗಿಸುವಂತೆ ಸೂಚಿಸಿದರು.
ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಸರ್ಜನ್ಗೆ ತಿಳಿಸಿದರು.
ಈ ಬಾರಿ ಮಳೆಯ ಕೊರತೆ ಉಂಟಾಗಿದ್ದು, ಕಡಿಮೆ ನೀರನ್ನು ಉಪಯೋಗಿಸಿ ಉತ್ತಮ ಫಸಲಿನ ಭತ್ತ ಬೆಳೆಯಲು ಪ್ರಾಯೋಗಿಕವಾಗಿ 5000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 10 ದಿನಗಳ ಅಂತರದಲ್ಲಿ ನೀರು ನಿಲ್ಲಿಸುವ ಮೂಲಕ ಭತ್ತ ಬೆಳೆಯಲಾಗಿದ್ದು ಉತ್ತಮ ಇಳುವರಿ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದಾಗ ಈ ಕುರಿತು ಹರಿಹರ ತಾಲೂಕಿನ ಹೊಳೆ ಸಿರಿಗೆರೆ ಹಾಗೂ ಕಡರನಾಯಕನಹಳ್ಳಿ ರೈತರಿಗೆ ಬೆಳೆ ಬೆಳೆಯುವ ಬಗ್ಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಡಾ.; ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಹಾಗೂ ದಿಶಾ ಸಮಿತಿ ಸದಸ್ಯರು,
ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.