SUDDIKSHANA KANNADA NEWS/ DAVANAGERE/ DATE:31-10-2023
ದಾವಣಗೆರೆ: ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಜಿಲ್ಲೆಯ ನಗರ, ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳ ಆಯ್ಕೆ ಮಾಡಿ ಮಂಜೂರಾತಿ ಪತ್ರ ಮತ್ತು ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಾಣ ಮಾಡಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸಂಸದ ಡಾ. ಜಿ.ಎಂ.ಸಿದ್ದೇಶ್ವರ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿ.ಎಂ ಅವಾಸ್ ಯೋಜನೆಯಡಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 966 ವಸತಿ ರಹಿತರಿಗೆ ಶೀಘ್ರವೇ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಲು ಅಧಿಕಾರಿಗಳು ಕ್ರಮ ವಹಿಸಬೇಕು. ನಿವೇಶನ ಹಂಚಿಕೆ ಕುರಿತಂತೆ ಕೆಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಪಾಲಿಕೆ ಆಯುಕ್ತರು ಇದರ ಬಗ್ಗೆ ಸಂಪೂರ್ಣ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ವಾರದಲ್ಲಿ ವರದಿ ಸಿದ್ದಪಡಿಸಲು ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ 2021-22 ನೇ ಸಾಲಿನಲ್ಲಿ ನೀಡಲಾದ 2884 ಗುರಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿ.ಪಂ.ಸಿಇಓ ಸಭೆಗೆ ತಿಳಿಸಿದಾಗ ಆದಷ್ಟು ಬೇಗ ಮನೆ ನಿರ್ಮಾಣ ಮಾಡಿಕೊಳ್ಳಲು ಉಳಿದ ಕಂತುಗಳ ಅನುದಾನ ಬಿಡುಗಡೆ ಮಾಡಿಸಲು ಮತ್ತು ಇದನ್ನು ಅಭಿಯಾನದ ರೂಪದಲ್ಲಿ ಮನೆ ನಿರ್ಮಾಣಕ್ಕೆ ಕಾಲ ಕಾಲಕ್ಕೆ
ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪ್ರಗತಿಯ ಹಂತವನ್ನು ಪರಿಶೀಲನೆ ಮಾಡಬೇಕೆಂದು ತಿಳಿಸಿದಾಗ ಜಿಲ್ಲಾಧಿಕಾರಿಯವರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ಪ್ರತಿ ಹಂತದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಿ ಪ್ರಗತಿಯಾಗುವಂತೆ ನೋಡಿಕೊಳ್ಳಬೇಕೆಂದಾಗ ಈರೀತಿ ಮಾಡಿದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಸಂಸದರು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್: ಸಾರ್ವಜನಿಕವಾದ ಶೌಚಾಲಯಗಳನ್ನು ನಿರ್ಮಿಸುವಾಗ ನೀರಿನ ವ್ಯವಸ್ಥೆ ಮಾಡಿಕೊಂಡು ನಿರ್ಮಿಸಬೇಕು, ಇಲ್ಲದಿದ್ದಲ್ಲಿ ಇದ್ದು ಇಲ್ಲದಂತಾಗುತ್ತದೆ. ಜೊತೆಗೆ ಶೌಚಾಲಯದ ನಿರ್ವಹಣೆ ಬಹಳ ಪ್ರಮುಖವಾಗಿರುತ್ತದೆ ಎಂದರು.
ಜೆಜೆಎಂ: ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 870 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದುವರೆಗೆ 500 ಕಾಮಗಾರಿಗಳು ಮುಕ್ತಾಯವಾಗಿವೆ. ಈ ಯೋಜನೆಯಡಿ ಕೇಂದ್ರ ಶೇ 45, ರಾಜ್ಯ ಸರ್ಕಾರ ಶೇ 45 ಮತ್ತು ಶೇ 10 ರಷ್ಟು ಸಮುದಾಯದ ವಂತಿಗೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ 361 ಕಾಮಗಾರಿಗಳನ್ನು ಪಂಚಾಯಿತಿಗಳಿಗೆ ವಹಿಸಿಕೊಡಲಾಗಿದೆ. ಈ ವರ್ಷ ಮಳೆಯ ಕೊರತೆಯಿಂದ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದು. ಆದ್ದರಿಂದ ಆದಷ್ಟು ಬೇಗ ಕಾಮಗಾರಿಗಳನ್ನು ಮುಕ್ತಾಯ ಮಾಡಿ ಬೇಸಿಗೆಗೆ ನೀರುಕೊಡಲು ಸಿದ್ದವಾಗಿರಬೇಕು ಎಂದರು.