ದಾವಣಗೆರೆ: ಪ್ರಸಕ್ತ ವರ್ಷದ ಮುಂಗಾರು ಮಳೆಯಿಂದ ಹಾನಿಯಾದ ಬೆಳೆಪ್ರದೇಶ, ಕಟ್ಟಡ, ಇನ್ನಿತರೆ ನಷ್ಟದ ಕುರಿತು ಸಂಪೂರ್ಣ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
READ ALSO THIS STORY: ಅಡಿಕೆಗೆ ಬಂಪರ್ ಬೆಲೆ: ರೂ. 61,000 ಗಡಿ ದಾಟಿದ ಕ್ವಿಂಟಲ್ ಧಾರಣೆ, ಬೆಳೆಗಾರರಿಗೆ ಮಹತ್ವದ ಮಾಹಿತಿ!
ಶನಿವಾರ ಮಳೆಯಿಂದ ಹಾನಿಗೊಳಗಾದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಗಂಗಾಧರ ಸ್ವಾಮಿ ಅವರು ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ನಿಂದ ಕಳೆದ ಬಾರಿ ಜಿಲ್ಲೆಯಲ್ಲಿ ಆದ ಅನಾವೃಷ್ಠಿಗೆ ಬಿಡುಗಡೆಯಾದ ಅನುದಾನಕ್ಕೆ ತಕ್ಕ ನಿಖರ ಮಾಹಿತಿಯನ್ನು ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಹಣ ಸದ್ಬಳಕೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಕೃಷಿ, ತೋಟಗಾರಿಕೆ, ಅಂಗನವಾಡಿ, ಶಾಲಾ ಕೊಠಡಿಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ, ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ, ರಸ್ತೆ, ಕೆರೆ, ಸೇತುವೆಗಳು ಸೇರಿದಂತೆ ಕುಡಿಯುವ ನೀರಿನ ಪೈಪ್ ಲೈನ್‍ಗಳು ಹಾನಿಯಾಗಿವೆ. ಈ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಡಗಳನ್ನು ರಚಿಸಿ, ಪ್ರತಿ ತಂಡದಲ್ಲಿ ಒಬ್ಬ ತಂತ್ರಜ್ಞರನ್ನು ನಿಯೋಜಿಸಿ, ಹಾನಿಯಾದ ವಿವರವನ್ನು ಜಿ.ಪಿ.ಎಸ್ ಆಧಾರಿತ ಪೋಟೋದೊಂದಿಗೆ ನಿಖರವಾದ ವರದಿಯನ್ನು 3 ದಿನಗಳೊಳಗಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.
ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷದಲ್ಲಿ ಸುರಿದ ಅಕಾಲಿಕ ಮಳೆಗೆ ವಿವಿಧ ಇಲಾಖೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 50 ರಿಂದ 100 ಕೋಟಿ ಪ್ರಸ್ತಾವನೆ ಸಲ್ಲಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಆದ್ದರಿಂದ ತಾವೆಲ್ಲರು ಕಟ್ಟಡ, ಹಾನಿ ಆಗಿರುವ ಬಗ್ಗೆ ಎನ್.ಡಿ.ಆರ್.ಎಫ್ ಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುವುದರಿಂದ ಮೂರು ದಿನಗಳೊಳಗಾಗಿ ಮಳೆಯಿಂದ ಆದ ಹಾನಿಯ ಬಗ್ಗೆ ಪ್ರಸ್ತಾವನೆಯನ್ನು ಇಲಾಖೆಯ ಮುಖ್ಯಸ್ಥರು ಸಲ್ಲಿಸಬೇಕು. ವಿಳಂಬವಾದಲ್ಲಿ ಅಥವಾ ಕರ್ತವ್ಯ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ , ಜಿಲ್ಲಾ ಪಂಚಾಯಿತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.