ದಾವಣಗೆರೆ: ಸಮೀಕ್ಷೆ ಕೈಗೊಳ್ಳದ ಮತ್ತು ತಾತ್ಸಾರ ಮಾಡಿದ ಒಟ್ಟು 4 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು. ಇದರಲ್ಲಿ ಸಕಾರಣ ನೀಡಿದ ಕಾರ್ಯದರ್ಶಿಯ ಅಮಾನತು ವಾಪಸ್ ಪಡೆಯಲಾಗಿದೆ. ಉಳಿದ ಮೂರು ಸಿಬ್ಬಂದಿಗಳನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿ ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಒನ್ ಡೇ ಟೀಂಗೆ ಕ್ಯಾಪ್ಟನ್ ಆಗಿ ಶುಭಮನ್ ಗಿಲ್ ಆಯ್ಕೆ ಮಾಡಲು ಇದೇ ಕಾರಣ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರು ಒಂದೇ ದಿನದಲ್ಲಿ 76 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಈಗೆ ಚುರುಕಾಗಿ ಸಮೀಕ್ಷೆ ನಡೆಸಿದ ಟಾಪ್ 10 ಒಳಗಿನ ಗಣತಿದಾರರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಗುರಿ; ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸುವ ಸಂಬಂಧ 7 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು 2 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಇದರ ಸಂದೇಶ ರವಾನಿಸಲಾಗಿದೆ. ಈ ಜಾಗೃತಿ ಕಾರ್ಯಕ್ರಮದಿಂದ ಶಾಲೆಯ ಮಕ್ಕಳು ತಮ್ಮ ಮನೆಯಲ್ಲಿ ಉಪಯೋಗಿಸಿದ 3.5 ಟನ್ ರಷ್ಟು ಪ್ಲಾಸ್ಟಿಕ್ ಸಂಗ್ರಹಿಸಿ ನೀಡಿದ್ದು ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯಗಳನ್ನು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಎಸೆಯುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಆನಗೊಡು ಬಳಿ 30 ಎಕರೆ ಸ್ಥಳ ಗುರುತಿಸಿ ಇದಕ್ಕೆ ಫಿಲ್ಲಿಂಗ್ ಮಾಡಲಾಗುತ್ತದೆ. ಸಂಗ್ರಹಕ್ಕಾಗಿ ನಗರದಲ್ಲಿ ಮೂರು ಕಡೆ ತ್ಯಾಜ್ಯ ಸಂಗ್ರಹ ಘಟಕಗಳನ್ನು ಗುರುತಿಸಿದ್ದು ನಿರ್ಮಾಣದ ಘನತ್ಯಾಜ್ಯವನ್ನು ರವಾನಿಸಲು ಸಂಪರ್ಕಿಸಿದಲ್ಲಿ ಪಾಲಿಕೆಯಿಂದಲೇ ನಿಗದಿತ ಬಾಡಿಗೆಯೊಂದಿಗೆ ಸಾಗಣೆಗೆ ಕ್ರಮ ಕೈಗೊಳ್ಳುವ ಮೂಲಕ ನಗರದ ಸ್ವಚ್ಚತೆಗೆ ಕ್ರಮವಹಿಸಲಾಗಿದ್ದು ನಾಗರಿಕರು ಸಹಕರಿಸುವಂತೆ ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.