ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೃದಯಾಘಾತಕ್ಕೆ ಬಲಿ: ಸ್ನೇಹಪರ ಜೀವಿಯ ಯಶೋಗಾಥೆ ಕಂಪ್ಲೀಟ್ ಡೀಟೈಲ್ಸ್

On: September 25, 2025 9:21 AM
Follow Us:
ಶೋಷಿತ
---Advertisement---

SUDDIKSHANA KANNADA NEWS/DAVANAGERE/DATE:25_09_2025

ದಾವಣಗೆರೆ: ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ, ಸ್ನೇಹಪರ ಜೀವಿ, ಆನಂದಣ್ಣ ಎಂದೇ ಎಲ್ಲರೂ ಕರೆಯುತ್ತಿದ್ದ ಬಾಡದ ಆನಂದರಾಜು ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತರಿಗೆ 54 ವರ್ಷ ವಯಸ್ಸಾಗಿತ್ತು.

ಈ ಸುದ್ದಿಯನ್ನೂ ಓದಿ: ಸಚಿವ ಬೈರತಿ ಸುರೇಶ್ ಹೆಸರಿನಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗೆ ವಂಚಿಸಿದ್ದ ಕಾರವಾರದ ವಿದ್ಯಾರ್ಥಿ ಬಂಧನ!

ಪತ್ನಿ ಶೋಭಾ ಆನಂದರಾಜು, ಮಕ್ಕಳಾದ ಕವಿರಾಜ್ ಪ್ರಸಾದ್ ಯಾದವ್ ಹಾಗೂ ಧನುಷ್ ಪ್ರಸಾದ್ ಯಾದವ್ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಸ್ನೇಹಿತರು ಕಂಬಿನಿ ಮಿಡಿದಿದ್ದಾರೆ. ಗುರುವಾರ ಬೆಳಿಗ್ಗೆ 2 ಗಂಟೆ ಸುಮಾರಿಗೆ ಹೃದಯಾಘಾತ ಕಾಣಿಸಿಕೊಂಡಿದೆ. ಆಗ ಮನೆಯವರು ಆಸ್ಪತ್ರೆಗೆ ಸಾಗಿಸಲು ಮುಂದಾದರು. ನಾಲ್ಕು ಗಂಟೆ ಹೊತ್ತಿಗೆ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು. ಬಾಡದ ಆನಂದರಾಜು ನಿಧನಕ್ಕೆ ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ಆಘಾತ ವ್ಯಕ್ತಪಡಿಸಿದ್ದಾರೆ.

ಶೋಷಿತರ ಪಾಲಿನ ಗಟ್ಟಿ ಧ್ವನಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಹೃದಯವಂತ. ಕೊರೊನಾ ಸಂಕಷ್ಟದ ವೇಳೆಯಲ್ಲಿ ನೊಂದವರಿಗೆ ನೆರವಾದ ಕರುಣಾಮಯಿ. ಎಲ್ಲರೊಟ್ಟಿಗೂ ಅನೋನ್ಯ ಬಾಂಧವ್ಯ ಹೊಂದಿರುವ, ಸೃಜನಶೀಲ ಹಾಗೂ ಮಮತೆಯ ಮಮಕಾರದ ಸಹೃದಯಿ, ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ, ಜನಪ್ರಿಯತೆಗೆ ಪಾತ್ರವಾಗಿದ್ದರು ಬಾಡದ ಆನಂದರಾಜು.

ಸ್ನೇಹಜೀವಿ ಆನಂದರಾಜು:

ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ರಾಮಣ್ಣ ಮತ್ತು ಸಾಕಮ್ಮ ದಂಪತಿಯ ಪುತ್ರ ಆನಂದರಾಜು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ಸಾಧನೆ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳೆಯುವ ಹಾದಿ ಹೂವಿನದ್ದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿ
ಕ್ರಮಿಸಿ ಬೆಳೆದವರು.

ತಂದೆ ತಾಯಿ ಮಾತಿನಂತೆ ನಡೆದವರು:

ತಂದೆ ರಾಮಣ್ಣ ಅವರು ಕೆಇಬಿಯಲ್ಲಿ ನೌಕರರಾಗಿದ್ದವರು. ಮನೆಯಲ್ಲಿ ತುಂಬು ಕುಟುಂಬ. ಈ ಕುಟುಂಬವನ್ನು ಸುಂದರವಾಗಿ ಕಟ್ಟಿ ಪೋಷಿಸಿದವರು. ಇದರಲ್ಲಿ ತಾಯಿ ಸಾಕಮ್ಮರ ಪಾತ್ರವೂ ಬಹಳ ದೊಡ್ಡದಿದೆ. ತಂದೆ – ತಾಯಿಯ ಮಾತಿನಂತೆ ನಡೆದುಕೊಂಡವರು.

ಅನ್ಯಾಯ ವಿರುದ್ಧದ ಸಿಡಿಗುಂಡು:

ಆನಂದರಾಜು ಅವರು ಚಿಕ್ಕವರಾಗಿದ್ದಾಗಿನಿಂದಲೂ ಹೋರಾಟದಲ್ಲಿ ಪಾಲ್ಗೊಂಡವರು. ವಿದ್ಯಾರ್ಥಿ ಜೀವನದಲ್ಲಿ ಅನ್ಯಾಯ, ಮೋಸ, ವಂಚನೆ ವಿರುದ್ಧ ಧ್ವನಿ ಎತ್ತಿದವರು. ಇದರ ಪ್ರತಿಫಲವೇ 1993ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯ ಸ್ಥಾನ ಹುಡುಕಿಕೊಂಡು ಬಂದಿತ್ತು. ತನಗೆ ಕೊಟ್ಟ ಜವಾಬ್ದಾರಿ ನಿಭಾಯಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದವರು.

ಜೊತೆಗೆ ಎಬಿವಿಪಿಯಲ್ಲಿ ಆನಂದರಾಜು ಅವರ ಜೊತೆಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಶಾಸಕ ಅರವಿಂದ ಲಿಂಬಾವಳಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯ
ಎಸ್. ಟಿ. ವೀರೇಶ್, ಸಿ. ವಿ. ನರೇಂದ್ರಕುಮಾರ್ ಅವರೆಲ್ಲಾ ಉನ್ನತ ಮಟ್ಟಕ್ಕೇರಿದ್ದಾರೆ. ಹಾಗಂತ ಎಲ್ಲಿಯೂ ಅವರ ಹೆಸರು ಬಳಸಿಕೊಂಡವರಲ್ಲ. ಎಲ್ಲರೊಟ್ಟಿಗೂ ಆತ್ಮೀಯತೆಯ ಜೊತೆಗೆ ಸ್ನೇಹ ಸಂಬಂಧ ಹಾಗೆ ಉಳಿಸಿಕೊಂಡು ಬಂದಿದ್ದ ನಿಸ್ವಾರ್ಥಿ ಅವರು.

ಎಲ್ಲಾ ಪಕ್ಷಗಳ ರಾಜಕಾರಣಿಗಳು, ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲಾ ಸಮುದಾಯದವರಿಗೆ ಬಾಡದ ಆನಂದರಾಜು ಅಂದ್ರೆ ಪ್ರೀತಿ ಜೊತೆಗೆ ಗೌರವ ನೀಡುತ್ತಾರೆ. ಮಠಾಧೀಶರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಆನಂದರಾಜು ಅಂದರೆ ಅವರಿಗೂ ತುಂಬಾನೇ ಪ್ರೀತಿ.

ದಾವಣಗೆರೆ ನಗರದ ತರಳುಬಾಳು ಬಡಾವಣೆಯಲ್ಲಿ ವಾಸವಿದ್ದ ಆನಂದರಾಜು ಅವರ ಸಹಾಯ ಗುಣ, ಸೇವೆ, ಬಡವರ ಕಷ್ಟಕ್ಕೆ ಸ್ಪಂದಿಸುವಂಥ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಜೀವನದಲ್ಲಿ ದುಡ್ಡು ತುಂಬಾ ಜನರು ಮಾಡಿರಬಹುದು. ಆದ್ರೆ, ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಇಂಥದ್ದನ್ನು ಸಾಧಿಸಿದ್ದರು ಆನಂದರಾಜು.

ಕರಾಟೆ ಕಿಂಗ್, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಶಂಕರ್ ನಾಗ್ 1990ರ ಸೆಪ್ಟಂಬರ್ 30ರಂದು ದಾವಣಗೆರೆ ತಾಲೂಕಿನ ಆನಗೋಡಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವೇಳೆ ಮಾನವೀಯತೆ ಮೆರೆದಿದ್ದರು ಬಾಡದ ಆನಂದರಾಜು. ಶಂಕರ್ ನಾಗ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಓಡಿ ಬಂದಿದ್ದರು. ಆಗ ಶಂಕರ್ ನಾಗ್ ಮೃತದೇಹ ಸ್ಥಳಾಂತರಿಸುವ ವೇಳೆ ಮಾಡಿದ ಕಾರ್ಯ ಇಂದಿಗೂ ನೆನಪಿನಲ್ಲಿ ಉಳಿಯುವಂಥದ್ದು.

ಶಂಕರ್ ನಾಗ್ ಮೃತದೇಹವನ್ನು ವಾಹನದಿಂದ ವಾಹನಕ್ಕೆ ಹಾಕಲು ಹೆಗಲು ಕೊಟ್ಟಿದ್ದರು. ಅರುಂಧತಿ ನಾಗ್ ರಕ್ತಸಿಕ್ತವಾಗಿದ್ದರು. ಈ ದಂಪತಿ ಪುತ್ರಿ ಕಾವ್ಯಳನ್ನು ಬಾಡದ ಆನಂದರಾಜು ಎತ್ತಿಕೊಂಡು ಸಂತೈಸಿದ್ದರು. ಶಂಕರ್ ನಾಗ್ ನೋಡಿದರೆ ಸಾಕು ಎಂದುಕೊಳ್ಳುತ್ತಿದ್ದ ಕಾಲದಲ್ಲಿ ಅವರ ಕಳೆಬರಹ ನೋಡಿದ್ದ ಆನಂದರಾಜು ಈಗಲೂ ಕಣ್ಣುಕಟ್ಟಿದಂತಿದೆ. ಶಂಕರ್ ನಾಗ್ ರ ದೇಹ ನೋಡಿದಾಕ್ಷಣ ನೋವು ತಡೆದುಕೊಳ್ಳಲು ಆಗಲಿಲ್ಲ. ಅಂಥ ಮೇರು ಕಲಾವಿದನ ದೇಹ ವಾಹನಕ್ಕೆ ಹಾಕುವಾಗ ಹೃದಯವೇ ಕಲುಕಿತ್ತು. ನೆರೆದಿದ್ದವರ ಕಣ್ಣೀರ ಕೋಡಿ ಇಂದಿಗೂ ನೆನಪಿದೆ ಎಂದು ಶಂಕರ್ ನಾಗ್ ಅವರ ಪುಣ್ಯಸ್ಮರಣೆ ದಿನದಂದು ನೆನಪು ಮಾಡಿಕೊಳ್ಳುತ್ತಲೇ ಇದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment