SUDDIKSHANA KANNADA NEWS/ DAVANAGERE/DATE:22_09_2025
ದಾವಣಗೆರೆ: ಹಿಂದೆ ಸಂಸದರಿದ್ದರು. ಕೆಲಸವನ್ನೂ ಮಾಡಲಿಲ್ಲ. ಸಂಸತ್ ನಲ್ಲಿ ಪ್ರಶ್ನೆಯನ್ನೂ ಕೇಳಲಿಲ್ಲ. ದಾವಣಗೆರೆಯಲ್ಲಿ ಎಲ್ಲಾ ಅಭಿವೃದ್ಧಿ ನಾವೇ ಮಾಡಿದ್ದೇವೆಂದು ಹೇಳುತ್ತಾ ಕುಳಿತುಕೊಂಡಿದ್ದು ಅಷ್ಟೇ. ಮಾಜಿ ಸಂಸದರ ಚೇಲಾಗಳು ಈಗ ಅದಾಗಿಲ್ಲ, ಇದಾಗಿಲ್ಲವೆಂದು ಮಾತನಾಡುತ್ತಿರುತ್ತಾರೆ. ಇದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಹೆಸರು ಪ್ರಸ್ತಾಪಿಸದೇ ಗುಟುರು ಹಾಕಿದರು.
ಈ ಸುದ್ದಿಯನ್ನೂ ಓದಿ: ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿ: ಎಸ್. ಎಸ್. ಮಲ್ಲಿಕಾರ್ಜುನ್
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 58ನೇ ಜನುಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಸಿಎಂ ಗೇಟ್ ಬಗ್ಗೆ ನಾನೇ ಈ ಹಿಂದೆ ಭಾಷಣದಲ್ಲಿ ಹೇಳಿದ್ದೆ. ಹಾವು ಹೋದಂಗೆ ಹೋಗಿದೆ ಎಂದು. ಅದನ್ನು ರೆಡಿ ಮಾಡಿಸಲು ಎರಡು ವರ್ಷ ಬೇಕಾಯಿತು ಎಂದು ತಿಳಿಸಿದರು.
ಬೀರಲಿಂಗೇಶ್ವರ ದೇವಸ್ಥಾನದ ಮುಂದೆ ಬ್ರಿಡ್ಜ್ ಮಾಡಲಾಗಿದೆ. ಅಚ್ಚುಕಟ್ಟಾಗಿ ಪ್ಲಾನಿಂಗ್ ಮಾಡಬೇಕಿತ್ತು. ಆಗಿನ ಸಂಸದರಿಗೆ ಕೇಳಿದರೆ ಎಂಜನಿಯರ್ ಅಲ್ಲ ನನಗೆ ಏನು ಗೊತ್ತಾಗಬೇಕು ಎಂದರೆ ಹೇಗೆ? ಮನೆಗೆ ಹೋಗುವ ದಾರಿಯಾದರೂ ಸರಿಯಾಗಿರಬೇಕಲ್ವಾ. ಇಷ್ಟು ಸಾಮಾನ್ಯ ಜ್ಞಾನ, ಪರಿಜ್ಞಾನ ಇಲ್ಲವೆಂದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.
ಸಣ್ಣಪುಟ್ಟವರು ಮಾತನಾಡುತ್ತಿದ್ದಾರೆ. ಅದಾಗಿಲ್ಲ, ಇದಾಗಿಲ್ಲ ಎನ್ನುತ್ತಾರೆ. ಅದಕ್ಕೆಲ್ಲ ಹೆಚ್ಚು ಉತ್ತರ ಕೊಡಲ್ಲ. ಅಭಿವೃದ್ಧಿ ಪಥದಿಂದ ನಡೆಯುತ್ತಿದ್ದೇವೆ. ಪ್ರತಿಯೊಬ್ಬ ಪ್ರಜೆಗೂ ಸವಲತ್ತು ಒದಗಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಮುಟ್ಟಿಸುವ ಕೆಲಸ ಮಾಡಲಾಗುವುದು. ಬಡವರು, ಶ್ರೀಮಂತರು ಇರಲಿ, ಸರ್ಕಾರದ ಸೌಲಭ್ಯ ಒದಗಿಸಲು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡೋಣ. ದಾವಣಗೆರೆ ಮಾದರಿ ಜಿಲ್ಲೆಯಾಗಬೇಕು ಎಂಬ ಕನಸಿದೆ. ದಾವಣಗೆರೆ ಉತ್ತರ, ದಕ್ಷಿಣದಲ್ಲಿ ರಸ್ತೆಗಳು ಹೇಗಿದ್ದವು? ಈಗ ಹೇಗಿವೆ? ಬಹಳ ಕೆಲಸ ಕಾರ್ಯಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ರಾಜಕೀಯ ಇರುತ್ತೆ ಹೋಗುತ್ತೆ ವಿಶ್ವಾಸ ಮುಖ್ಯ. ವೈಯಕ್ತಿಕವಾಗಿ ಜನರ ಕೆಲಸ ಕಾರ್ಯ ಆಗಬೇಕು, ಅನುಕೂಲ ಆಗಬೇಕು. ಯಾವ ರೀತಿ ಕೆಲಸ ಮುಟ್ಟಿಸಬೇಕೆಂಬುದು ಮುಖ್ಯ. ಕೋವಿಡ್ ಸಮಯದಲ್ಲಿ ಅಧಿಕಾರ ಇರಲಿಲ್ಲ. ಆಗ ನಾನು ನೋಡಿದ್ದೇನೆ. ನನ್ನ ಪಕ್ಷದ ಕಾಂಗ್ರೆಸ್ ನವರು ನನ್ನ ಬಳಿ ಬಂದು ಹೇಳುತ್ತಿದ್ದರು. ವಿರೋಧಪಕ್ಷದಲ್ಲಿದ್ದೇವೆ, ನಮ್ಮ ವಾರ್ಡ್ ಗಳು, ಪಂಚಾಯತ್ ನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮನೆಗಳಿಗೆ ವ್ಯಾಕ್ಸಿನ್ ನೀಡುತ್ತಿಲ್ಲ. ಕೇವಲ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದ್ದರು. ಆಗ ನಾವು ನೋಡಿ ಆರೂವರೆಯಿಂದ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯಾಕ್ಸಿನ್ ನೀಡಿದೆವು. ಜಾತಿ, ಧರ್ಮ ಪಕ್ಷ ಬೇಧ ಮಾಡಲಿಲ್ಲ. ಮನುಷ್ಯತ್ವ ನೋಡಿ ಕೆಲಸ ಮಾಡಿದೆವು. ಈ ನಿಟ್ಟಿನಲ್ಲಿ ಇಂದಿಗೂ ಪಾಲಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
32 ಕೋಟಿ ರೂಪಾಯಿ ಪರಿಹಾರ ಕೊಟ್ಟು ರೈತರ ಜಮೀನು ಸ್ವಾಧೀನಪಡಿಸಿಕೊಂಡಿದ್ದೇವೆ. ರಾಜಕೀಯ ಮಾಡುವುದು ಬೇಡ, ಕೆಲಸ ಮಾಡಿ ಜನರಿಗೆ ತೋರಿಸೋಣ. ಜಿಲ್ಲೆಯಾದ್ಯಂತ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡೋಣ. ರೈತರು, ಬಡವರಿಗೆ ಹೆಚ್ಚು ಕೆಲಸ ಕಾರ್ಯಗಳನ್ನು ಮಾಡಿ ಧೈರ್ಯ ತುಂಬೋಣ ಎಂದು ಹೇಳಿದರು.
ವೇದಿಕೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ದಿನೇಶ್ ಶೆಟ್ಟಿ, ಕೆ. ಜಿ. ಶಿವಕುಮಾರ್, ಬೂದಾಳ್ ಬಾಬು, ನಾಗರಾಜ್, ಆಯೂಬ್, ಶಾಮನೂರು ಬಸವರಾಜ್, ಮಾಗನೂರು ಪರಶುರಾಮ್, ಮುದ್ದೇಗೌಡ್ರು ಗಿರೀಶ್ ಮತ್ತಿತರರು ಹಾಜರಿದ್ದರು.