SUDDIKSHANA KANNADA NEWS/ DAVANAGERE/DATE:20_09_2025
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಅದ್ಧೂರಿಯಿಂದ ನೆರವೇರಿತು. ಸಾಂಪ್ರಾದಾಯಿಕ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಈ ಬಾರಿ ಡಿಜೆ ಇಲ್ಲದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಸೇರಿದ್ದ ಜನಸ್ತೋಮ ಕಡಿಮೆ ಇತ್ತು.
READ ALSO THIS STORY: ದಾವಣಗೆರೆ ಕೌಟುಂಬಿಕ ನ್ಯಾಯಾಲಯ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿಯಿಂದ ಆತ್ಮಹತ್ಯೆ ಯತ್ನ!
ಮುಖ್ಯಾಂಶಗಳು
- – ಜಾನಪದ ಕಲಾತಂಡಗಳ ಮೆರಗು
- – ಡಿಜೆ ಬಳಕೆ ಸಂಪೂರ್ಣ ನಿಷೇಧ
- – ಆರ್ಕೆಸ್ಟ್ರಾ ಬಳಸಿ ಹಾಡು ಹಾಕಿ ನೃತ್ಯ
- – ಯುವಕ, ಯುವತಿಯರ ಬಿಂದಾಸ್ ಸ್ಟೆಪ್
- – ಕೇಳಿ ಬಂತು ಡಿಜೆ ಬೇಕೇ ಬೇಕು ಘೋಷಣೆ
- – ಟ್ರ್ಯಾಕ್ಟರ್ ಚಲಾಯಿಸಿದ ಎಸ್ಪಿ ಉಮಾ ಪ್ರಶಾಂತ್
- – ಜಯದೇವ ವೃತ್ತದಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರು
ಹೈಸ್ಕೂಲ್ ಮೈದಾನದಿಂದ ಮಧ್ಯಾಹ್ನದ ಹೊತ್ತಿಗೆ ಹೊರಟ ಮೆರವಣಿಗೆಯು ಎವಿಕೆ ರಸ್ತೆ, ಚೇತನ ಹೊಟೇಲ್ ಬಳಿಯ ರಸ್ತೆ, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಲಾಯರ್ ರಸ್ತೆ, ಪಿ. ಬಿ. ರಸ್ತೆ, ಅರುಣಾ ಚಿತ್ರಮಂದಿರದವರೆಗೆ
ತಲುಪಿತು.
ಇದಕ್ಕೂ ಮುನ್ನ ನಡೆದ ಮೆರವಣಿಗೆಯು ಗಮನ ಸೆಳೆಯಿತು. ಡೋಲು, ಕಂಸಾಳೆ, ನಾಸಿಕ್ ಡೋಲು, ವಾಹನಗಳಲ್ಲಿ ಆರ್ಕೆಸ್ಟ್ರಾ ಸಿಸ್ಟಂ ಅಳವಡಿಸಿ ಹಾಡುಗಳನ್ನು ಹಾಕಿ ಯುವಕ ಮತ್ತು ಯುವತಿಯರು ಕುಣಿದು ಕುಪ್ಪಳಿಸಿದರು.
ಪುಟಾಣಿ ಮಕ್ಕಳು, ಹಿರಿಯರು, ವಿದ್ಯಾರ್ಥಿಗಳು ಸಹ ಬಿಂದಾಸ್ ಆಗಿಯೇ ಸ್ಟೆಪ್ ಹಾಕಿದರು.
ಡಿಜೆ ಸಂಪೂರ್ಣ ನಿಷೇಧ:
ಡಿಜೆ ಸಿಸ್ಟಂ ಅಳವಡಿಕೆಗೆ ಮೊದಲಿನಿಂದಲೂ ಒತ್ತಾಯ ಕೇಳಿ ಬಂದಿತ್ತು. ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಂ ಅಳವಡಿಕೆಗೆ ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ,
ಡಿಜೆ ಬಳಸಲಿಲ್ಲ. ಕಳೆದ ವರ್ಷ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಆದ್ರೆ, ಈ ವರ್ಷ ಜನಸ್ತೋಮ ಕಡಿಮೆ ಇತ್ತು.
ಕೇಳಿ ಬಂತು ಡಿಜೆ ಬೇಕು ಘೋಷಣೆ:
ಗಣೇಶ ಮೂರ್ತಿ ಇದ್ದ ಟ್ರ್ಯಾಕ್ಟರ್ ಮುಂದೆ ಕುಣಿದು ಕುಪ್ಪಳಿಸುತ್ತಿದ್ದ ಯುವಕರ ಗುಂಪು ಡಿಜೆ ಬೇಕೇ ಬೇಕು. ನಮಗೆ ಡಿಜೆ ಬೇಕೇ ಬೇಕು ಎಂದು ಕುಣಿಯುತ್ತಿದ್ದ ಯುವಕರ ಗುಂಪು ಘೋಷಣೆ ಹಾಕಿತು. ಡಿಜೆ, ಡಿಜೆ, ಡಿಜೆ ಎಂಬ ಕೂಗು ಆಗಾಗ್ಗೆ
ಮಾರ್ದನಿಸುತ್ತಲೇ ಇತ್ತು.
ಟ್ರ್ಯಾಕ್ಟರ್ ಚಲಾಯಿಸಿದ ಎಸ್ಪಿ:
ಇನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರು. ಟ್ರ್ಯಾಕ್ಟರ್ ನಲ್ಲಿ ಕುಳಿತು ಚಲಾಯಿಸಿದ ಉಮಾ ಪ್ರಶಾಂತ್ ಅವರು ಶಾಂತಿಯುತವಾಗಿ ಮೆರವಣಿಗೆ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶ್ರದ್ಧಾ ಭಕ್ತಿಯಿಂದ ಮೆರವಣಿಗೆ ಸಾಗಲಿ ಎಂದು ಕಿವಿಮಾತು ಹೇಳಿದರು.
ಜಾನಪದ ಕಲಾ ತಂಡಗಳ ಸೊಬಗು:
ಡಿಜೆ ಬಳಕೆ ಇಲ್ಲದ ಕಾರಣ ಜಾನಪದ ಕಲಾ ತಂಡಗಳು ಹೆಚ್ಚಾಗಿ ಪಾಲ್ಗೊಂಡಿದ್ದವು. ಕಲಾ ತಂಡಗಳ ಶಬ್ಧಕ್ಕೆ ಕುಣಿಯುತ್ತಾ ಕುಣಿದು ಕುಪ್ಪಳಿಸಿದ ಯುವಕರು ಮತ್ತು ಯುವತಿಯರು ನಕ್ಕು ನಲಿದರು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದ ದಾರಿಯಲ್ಲಿನ ಕಟ್ಟಡಗಳ ಮೇಲೆ ನಿಂತು ಜನರು ಗಣೇಶನ ದರ್ಶನ ಪಡೆದರು.
ಜಯದೇವ ವೃತ್ತದಲ್ಲಿ ಲಾಠಿ ರುಚಿ:
ಇನ್ನು ಮೆರವಣಿಗೆಯು ಶಾಂತಿಯುತವಾಗಿ ನಡೆಯುತಿತ್ತು. ಆದ್ರೆ, ಜಯದೇವ ವೃತ್ತದಲ್ಲಿ ನಾಲ್ಕೈದು ಯುವಕರು ಕಿರಿಕಿರಿಯಾಗುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಲಾಠಿ ರುಚಿ ತೋರಿದ ಪ್ರಸಂಗವೂ ನಡೆಯಿತು. ಸ್ಥಳದಲ್ಲಿ ಕಿರಿಕಿರಿ ಮಾಡಿದ ಇಬ್ಬರು ಯುವಕರನ್ನು ಕರೆದುಕೊಂಡು ಹೋದರು.
ರೇಣುಕಾಚಾರ್ಯ ಡ್ಯಾನ್ಸ್:
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಮೆರವಣಿಗೆ ಮಾರ್ಗ ಮಧ್ಯೆ ಬಂದರು. ಈ ವೇಳೆ ವಾಹನದ ಮೇಲೆ ನಿಂತು ಕುಣಿಯುವ ಮೂಲಕ ಯುವಕರ ಹುರಿದುಂಬಿಸಿದರು. ಈ ವೇಳೆ ರೇಣುಕಾಚಾರ್ಯ ಅವರಿಗೆ ಹಸ್ತಲಾಘವ ಮಾಡಲು ಯುವಕರು ಮುಗಿ ಬಿದ್ದ ದೃಶ್ಯವೂ ಕಂಡು ಬಂತು.