SUDDIKSHANA KANNADA NEWS/ DAVANAGERE/DATE:17_09_2025
ದಾವಣಗೆರೆ: ಸತ್ಯ, ಪಾರದರ್ಶಕತೆ ಮತ್ತು ಪ್ರಾಮಾಣಿಕೆತೆಗೆ ಬೆಲೆ ಕೊಡುವುದಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: ಪ್ರಾಥಮಿಕ ಶಿಕ್ಷಕರ ಹುದ್ದೆ 2025: 1180 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಸಂಬಳ ರೂ.35,400-1,12,400
ನಗರದ ಹಳೇ ದಾವಣಗೆರೆಯ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿ ದೇಶಾದ್ಯಂತ ರಾಷ್ಟ್ರೀಯ ನಿರುದ್ಯೋಗಿ ದಿನಾಚರಣೆಯಾಗಿ ನೌಕರಿ ಚೋರ್ ಗದ್ದಿ ಛೋಡ್ ಎಂಬ ಘೋಷವಾಕ್ಯದಡಿ ಭಾರತೀಯ ರಾಷ್ಟ್ರೀಯ ಯುವ
ಕಾಂಗ್ರೆಸ್ ಆಯೋಜಿಸಿದ್ದ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ಪ್ರತಿಭಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 11 ವರ್ಷಗಳಾದರೂ ದೇಶದ ಕೋಟ್ಯಂತರ ಯುವಕರಿಗೆ ಇದುವರೆಗೆ ಉದ್ಯೋಗ ಸಿಕ್ಕಿಲ್ಲ. ಕೇವಲ ಭರವಸೆಯನ್ನೂ ಮಾತ್ರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿಲ್ಲ. 75ನೇ ವರ್ಷದ ಜನುಮದಿನವನ್ನು ಆಚರಿಸಿಕೊಳ್ಳುತ್ತಿರುವ ಮೋದಿ ಅವರು ಸಂಭ್ರಮದಲ್ಲಿದ್ದರೆ, ದೇಶದ ಯುವಕರು ಉದ್ಯೋಗ ಸಿಗದೇ ಜೀವನ ನಡೆಸುವುದು ಕಷ್ಟವಾಗಿದೆ. ಲಕ್ಷಾಂತರ ಪದವೀಧರರು ಕೆಲಸ ಸಿಗದೇ ಮನೆಯಲ್ಲಿ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣೆಗಳು ಬಂದಾಗ ಮಾತ್ರ ಜನಸಾಮಾನ್ಯರು, ಯುವಕರು ನೆನಪಾಗುತ್ತಾರೆ. ಕೋಮು ದ್ವೇಷ ಯುವಕರಲ್ಲಿ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಧಾನಿ ಅವರು ಯುವಕರ ಉಜ್ವಲ ಭವಿಷ್ಯಕ್ಕಾಗಿ ಕಾರ್ಯಕ್ರಮಗಳನ್ನು
ರೂಪಿಸುತ್ತಿಲ್ಲ. ವಿಪಕ್ಷಗಳ ಆರೋಪಗಳನ್ನು ಲಘುವಾಗಿ ಪರಿಗಣಿಸುವ ಮೋದಿ ಅವರು ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಜನರಿಗೆ ಮಾತಿನಲ್ಲಿ ಮರಳು ಮಾಡುತ್ತಾರೆ. ಇದು ಬಹಳ ದಿನಗಳ ಕಾಲ ನಡೆಯುವುದಿಲ್ಲ. ದೇಶದ ಯುವಕರು ಮುಂಬರುವ ದಿನಗಳಲ್ಲಿ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಜನುಮದಿನದ ಪ್ರಯುಕ್ತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಅಂಚೆ ಇಲಾಖೆ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಇನ್ನು ಮುಂದಾದರೂ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸಲಿ. ಕೊರೊನಾ, ಜಿಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಸಣ್ಮ ಕೈಗಾರಿಕೆಗಳು ಮುಚ್ಚಿ ಹೋಗಿವೆ. ನಿರುದ್ಯೋಗಿಗಳ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಜನಪರ, ಯುವಕರ ಪರ, ರೈತಪರ, ಜೀವಪರ, ಪಾರದರ್ಶಕ ಆಡಳಿತ ನಡೆಸಲಿ. ಇಲ್ಲದಿದ್ದರೆ ಬಿಟ್ಟು ತೊಲಗಲಿ ಎಂದು ಹೇಳಿದರು.
ಎನ್ ಡಿಎ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಿರುವುದೇ ಮತ ಕಳವು ಮಾಡಿ. ಇದನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ದೇಶದ ಜನರ ಮುಂದೆ ತೆರೆದಿಟ್ಟಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಪ್ರಧಾನಿ ಹುಟ್ಟುಹಬ್ಬದ ದಿನದಂದೇ ಮತಗಳ್ಳರೇ ಅಧಿಕಾರ ಬಿಡಿ ಎನ್ನುವ ಘೋಷಣೆಯೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಪಣಿ, ವರುಣ್, ನವೀನ್, ಮೆಹಬೂಬ್ ಬಾಷಾ, ಬಿಲಾಲ್, ಚಿರಂಜೀವಿ, ಸಮೀರ್, ಶಿವಶಂಕರ್, ಎಸ್. ಎಂ. ಕರೀಂ, ಕಿಟ್ಟಿ, ಸಂತೋಷ್, ಅಭಿ, ಸೈಯದ್ ತಾಜ್, ಫಾಜ್ಲ್ ರಹೇಮಾನ್, ಮುಸ್ತಾಕ್, ಹಾರುನ್, ಎನ್. ಕೆ. ಆಶೀಕ್, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.