SUDDIKSHANA KANNADA NEWS/ DAVANAGERE/DATE:20_08_2025
ದಾವಣಗೆರೆ: ಕಳೆದ ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಎಂ. ಡಿ. ಸಮೀರ್ ಸೇರಿದಂತೆ ಯುಟ್ಯೂಬರ್ ಗಳನ್ನು ಒದ್ದು ಒಳಹಾಕಿ ಎಂದು ಧರ್ಮಸ್ಥಳದ ಸಾವಿರಾರು ಸದ್ಭಕ್ತರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಧರ್ಮಸ್ಥಳದ ಬಗ್ಗೆಅಪಪ್ರಚಾರ ಶುರುವಾಗಿದ್ದು ಯಾವಾಗಿನಿಂದ? ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಎಂದಿದ್ಯಾಕೆ ಡಾ. ವೀರೇಂದ್ರ ಹೆಗ್ಗಡೆ?
ನಗರದ ಜಯದೇವ ವೃತ್ತದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಭಕ್ತರು ಹಮ್ಮಿಕೊಂಡಿದ್ದ ಜನಾಗ್ರಹ ಜಾಥ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಕೇಳಿ ಬಂದ ಕೂಗು.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ದೇವಾಲಯದ ಬಗ್ಗೆ ಸಂಚು, ಒಳಸಂಚು ಮತ್ತು ಅಪಪ್ರಚಾರ ನಡೆಸುತ್ತಿರುವ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಾಗ್ರಹ ಜಾಥ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು, ವಿವಿಧ ಸಂಘಟನೆಗಳ ಪ್ರಮುಖರು, ಹೋರಾಟಗಾರರು, ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರವು ಯುಟ್ಯೂಬರ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಎಡಪಂಥೀಯ ಸಂಘಟನೆಗಳ ಮುಖಂಡರ ಮಾತಿಗೆ ಕಿವಿಗೊಡಬಾರದು. ಧರ್ಮಸ್ಥಳದ ವಿಚಾರದಲ್ಲಿ ಯಾರೇ ಅಪಪ್ರಚಾರ ನಡೆಸಿದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಹದಿನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿನಿ ಸೌಜನ್ಯಾ ಕೊಲೆಯಾಗಿದೆ. ಈಕೆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತೇವೆಂದು ಹೇಳಿಕೊಂಡು ಧರ್ಮಸ್ಥಳದ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ್, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ ಟಿ. ಅಜಯ್ ಅಂಚನ್ ಇವರುಗಳು ಷಡ್ಯಂತ್ರ ಮತ್ತು ಅಪಪ್ರಚಾರ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಮೌನವಾಗಿದೆ. ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವುದು ಯಾರು, ಹಣಕಾಸಿನ ನೆರವು ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಗುರ, ಏಕವಚನ, ಸುಳ್ಳು ಆರೋಪ ಮಾಡುವ ಮೂಲಕ ನಿಂದನೆ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಕೂಡಲೇ ಬಂಧಿಸಬೇಕು. ಈತನ ಹಿಂದಿರುವ ಕಾಣದ ಕೈ ಯಾವುದು ಎಂದು ಪತ್ತೆ ಹಚ್ಚಬೇಕು. ಸಾಮಾಜಿಕ ಜಾಲತಾಣಗಳು ಮತ್ತು ವೇದಿಕೆಗಳಲ್ಲಿಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ., ಜಯಂತ್ ಟಿ., ಸಂತೋಷ್ ಶೆಟ್ಟಿ, ಅಜಯ್ ಅಂಚನ್ ಅವರು ನಿರಂತರವಾಗಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಲೇ ಇದ್ದು, ಕೂಡಲೇ ಇವರನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕು. ಎಸ್‌ಐಟಿ ತಂಡ ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತಕ್ಷಣ ಸತ್ಯ ಹೊರ ತರಬೇಕು ಎಂದು ಆಗ್ರಹಿಸಿದರು.