SUDDIKSHANA KANNADA NEWS/ DAVANAGERE/DATE:16_08_2025
ದಾವಣಗೆರೆ: ಅಲ್ಲಿದ್ದದ್ದು ತುಂಟ, ತುಂಟ ಪುಟಾಣಿ ಪುಟ್ಟ ಪುಟ್ಟ ಮಕ್ಕಳು. ಒಬ್ಬರಿಗಿಂತ ಒಬ್ಬರನ್ನು ನೋಡಲು ಚೆಂದ. ಶ್ರೀಕೃಷ್ಣ, ರಾಧೆ, ರುಕ್ಮೀಣಿ, ಕಾಳಿಂಗ ಸರ್ಪ, ಬಲರಾಮ ಸೇರಿದಂತೆ ಶ್ರೀಕೃಷ್ಣ ಪರಮಾತ್ಮನ ಬದುಕಿನಲ್ಲಿ ಬರುವ ಪಾತ್ರಧಾರಿಗಳ ವೇಷಧಾರಿಗಳ ಕಂಡು ಪೋಷಕರು ಪುಳಕಿತರಾದರು. ಮಕ್ಕಳ ತುಂಟಾಟದ ಜೊತೆಗೆ ಡ್ಯಾನ್ಸ್ ಗೆ ಎಲ್ಲರೂ ಫಿದಾ ಆದರು. ಅಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸೊಬಗು ಧರೆಗಿಳಿದಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಪೂರ್ಣವಾಗಿತ್ತು.
ಹೌದು. ದಾವಣಗೆರೆ ನಗರದ ಕೆ. ಬಿ. ಬಡಾವಣೆಯಲ್ಲಿರುವ ವಿದ್ಯಾ ಸಾಗರ ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಅರ್ಥಪೂರ್ಣವಾಗಿತ್ತು. ಮಕ್ಕಳು ವಿವಿಧ ವೇಷ, ಪೋಷಾಕು ಧರಿಸಿ ಬಂದಿದ್ದರು. ಮಕ್ಕಳು ನೃತ್ಯ ಮಾಡುತ್ತಿದ್ದರೆ ಪೋಷಕರ ಮೊಗದಲ್ಲಿ ಮಂದಹಾಸ ಮನೆ ಮಾಡಿತ್ತು. ಶ್ರೀಕೃಷ್ಣ ಪರಮಾತ್ಮನ ಮೌಲ್ಯಗಳು, ಆದರ್ಶ, ಬದುಕಿನ ಚಿತ್ರಣ, ಪವಾಡ, ಧರ್ಮ ರಕ್ಷಣೆ, ಲೋಕೋದ್ಧಾರ ಸೇರಿದಂತೆ ವಿವಿಧ ಆದರ್ಶಮಯ ನೃತ್ಯಗಳು ಪ್ರದರ್ಶನಗೊಂಡವು.
ಪ್ರಿ ನರ್ಸರಿ, ಎಲ್ ಕೆ ಜಿ, ಯುಕೆಜಿ ಮಕ್ಕಳು ಪ್ರಸ್ತುತ ಪಡಿಸಿದ ಶ್ರೀಕೃಷ್ಣ ಕುರಿತಾದ ನೃತ್ಯಗಳು ಮನಮೋಹಕವಾಗಿದ್ದವು. ಒಂದಕ್ಕಿಂತ ಮತ್ತೊಂದು ನೃತ್ಯ ಆಕರ್ಷಣೀಯ. ಮಕ್ಕಳ ತುಂಟಾಟವೇ ಚೆಂದ. ಅಂಥಹುದರಲ್ಲಿ ಮಕ್ಕಳು ಶ್ರೀಕೃಷ್ಣ ಪರಮಾತ್ಮನ ವೇಷ, ರುಕ್ಮೀಣಿ, ರಾಧೆ, ದೇವಕಿ, ಕಾಳಿಂಗ ಸರ್ಪ ಸೇರಿದಂತೆ ವಿವಿಧ ಪಾತ್ರಗಳನ್ನು ತಮ್ಮ ಸಾಮರ್ಥ್ಯಕ್ಕೂ ಮೀರಿ ಅಭಿನಯಿಸಿದ್ದು ವಿಶೇಷವಾಗಿತ್ತು.
READ ALSO THIS STORY: ಅತ್ಯುತ್ತಮ ಆರು ಮ್ಯೂಚುವಲ್ ಫಂಡ್ಗಳು: ಶೇ. 20 ಕ್ಕಿಂತ ಹೆಚ್ಚು ವಾರ್ಷಿಕ ಆದಾಯ
ಯುಕೆಜಿ ಮಕ್ಕಳು ಪ್ರಸ್ತುತಪಡಿಸಿದ ಶ್ರೀಕೃಷ್ಣನ ಹಾಡಿನ ನೃತ್ಯ ಗಮನ ಸೆಳೆಯಿತು. ಯುಕೆಜಿ ಮಕ್ಕಳು ತಾವೇನೂ ಕಡಿಮೆ ಇಲ್ಲ ಎಂಬಂತೆ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡರು. ನೂರಾರು ಮಕ್ಕಳು ಒಂದೆಡೆ ವಿವಿಧ ಪೋಷಾಕು ಧರಿಸಿ ಬಂದಿದ್ದು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.
ಶ್ರೀಕೃಷ್ಣನ ತುಂಟಾಟಗಳು, ಬೆಣ್ಣೆ ಕದ್ದು ತಿನ್ನುವ ತುಂಟಾಟ, ಕಂಸ ವಧೆ ಮಾಡುವುದು, ಶ್ರೀಕೃಷ್ಣ ಹುಟ್ಟಿದಾಗ ಮಗನ ಉಳಿಸಿಕೊಳ್ಳಲು ಕಷ್ಟಪಡುವ ತಂದೆ ತಾಯಿ ಪಾತ್ರಗಳ ಎಲ್ಲರ ಮನಸೂರೆಗೊಂಡವು.
ಮಕ್ಕಳ ತುಂಟಾಟ, ಪೋಷಕರ ಕುಣಿದಾಟ!
ಮಕ್ಕಳ ನೃತ್ಯ ವೀಕ್ಷಿಸಲು ಪೋಷಕರು ಬಂದಿದ್ದರು. ಮಕ್ಕಳ ತುಂಟಾಟದ ಜೊತೆಗೆ ಅವರು ಅಭಿನಯಿಸುತ್ತಿದ್ದ ಬಗೆ, ಆಚಿಂದೀಚೆ ನೋಡುತ್ತಾ ಡ್ಯಾನ್ಸ್ ಮಾಡುತ್ತಾ ತಮ್ಮ ಲೋಕದಲ್ಲಿ ಮುಳುಗಿದ್ದರೂ ನೃತ್ಯಗಳಂತೂ ಕಣ್ಮನ ಸೆಳೆದವು. ಮಕ್ಕಳು ನೃತ್ಯ ಮಾಡುತ್ತಿದ್ದರೆ, ಪೋಷಕರು ತಮ್ಮ ಮೊಬೈಲ್ ಗಳಲ್ಲಿ ಮಕ್ಕಳ ನೃತ್ಯ ಸೆರೆ ಹಿಡಿಯುವ ಜೊತೆಗೆ ಖುಷಿಪಟ್ಟರು.
ಮಾನವೀಯ ಗುಣ ಬೆಳೆಸಿ: ಭಗತ್ ಸಿಂಗ್
ವಿದ್ಯಾಸಾಗರ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಶಾಲೆಯ ಮುಖ್ಯಸ್ಥರಾದ ಭಗತ್ ಸಿಂಗ್ ಅವರು ಶ್ರೀಕೃಷ್ಣ ಜನ್ಮಾಷ್ಠಮಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಕ್ಕಳು ಡಾಕ್ಟರ್, ಎಂಜಿನಿಯರ್, ಸಾಫ್ಟ್ ವೇರ್ ಎಂಜಿನಿಯರ್ ಸೇರಿದಂತೆ ಅತ್ಯುನ್ನತ ಹುದ್ದೆಗಳಿಗೆ ಮಕ್ಕಳು ಹೋಗಬೇಕೆಂಬುದು ಪೋಷಕರ ಬಯಕೆ. ಇದು ತಪ್ಪಲ್ಲ. ಆದ್ರೆ, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯ ಬೆಳೆಸುವುದು ಕಡಿಮೆಯಾಗುತ್ತಿದೆ.
ಮಕ್ಕಳಲ್ಲಿ ಮಾನವೀಯ ಗುಣಗಳು, ಭಗವದ್ಗೀತೆ, ಇತಿಹಾಸ ಪುರುಷರ ಆದರ್ಶ ಮೈಗೂಡಿಸುವ ಅವಶ್ಯಕತೆ ತುಂಬಾನೇ ಇದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಂಭ್ರಮದಲ್ಲಿರಬೇಕಾದ ಖ್ಯಾತ ಚಿತ್ರನಟ ಜೈಲಿಗೆ ಹೋದ. ಅದೇ ರೀತಿಯಲ್ಲಿ ಮತ್ತೊಬ್ಬ ರಾಜಕಾರಣಿ ಜೀವಾವಧಿ ಶಿಕ್ಷೆಗೆ ಗುರಿಯಾದ. ಹಣ, ಅಂತಸ್ತು, ಅಧಿಕಾರ ಇದ್ದಾಕ್ಷಣ ಮಕ್ಕಳಲ್ಲಿ ಒಳ್ಳೆಯ ಗುಣಗಳು ಬರುವುದಿಲ್ಲ. ಅವರಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಬೇಕು. ಇದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮ ವಹಿಸಬೇಕು. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಿದರೆ ಅವರು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.