SUDDIKSHANA KANNADA NEWS/ DAVANAGERE/DATE:14_08_2025
ದಾವಣಗೆರೆ: ನಗರದ ಹಳೇ ಕುಂದುವಾಡ ಮುಖ್ಯ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದು, ದಿನ ನಿತ್ಯ ನರಕಯಾತನೆ ಅನುಭವಿಸುವಂತೆ ಆಗಿದ್ದು ಅನೇಕ ಅವಘಡಗಳು ಸಂಭವಿಸುತ್ತಲೇ ಇವೆ, ದಯಮಾಡಿ ರಸ್ತೆ ಕಾಮಗಾರಿ ಪೂರ್ಣ ಮಾಡಿ ಜನರ ಜೀವ ಉಳಿಸುವಂತೆ ಹಳೇ ಕುಂದುವಾಡ ಗ್ರಾಮಸ್ಥರು ಮಹಾನಗರ ಪಾಲಿಕೆ ಕಚೇರಿಗೆ ಇಂದು ಆಗಮಿಸಿ ಪಾಲಿಕೆ ಆಯುಕ್ತರಾದ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.
READ ALSO THIS STORY: BIG BREAKING: ರೇಣುಕಾಸ್ವಾಮಿ ಹತ್ಯೆ ಕೇಸ್: ಮಾಧ್ಯಮಗಳಿಗೆ ಕಣ್ತಪ್ಪಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಬಂಧನ!
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು 44ನೇ ವಾರ್ಡ್ ವ್ಯಾಪ್ತಿಯ ಹಳೇ ಕುಂದುವಾಡದದವರು, ಈ ಹಿಂದೆ ಕುಂದುವಾಡ ಕೆರೆಯನ್ನ ದಾವಣಗೆರೆಗೆ ಕುಡಿಯುವ ನೀರಿಗಾಗಿ ಬಿಟ್ಟುಕೊಡುವಾಗ ಕುಂದುವಾಡಕ್ಕೆ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡುತ್ತೇವೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತು ಕೊಟ್ಟಿದ್ದರು, ಆದರೆ ದಾವಣಗೆರೆ ಸಿಟಿಯಿಂದ ಕುಂದುವಾಡಕ್ಕೆ ಹೋಗುವ ಮುಖ್ಯ ರಸ್ತೆಯೇ ಇದುವರೆಗೆ ಅಭಿವೃದ್ದಿ ಮಾಡಿಕೊಡಲು ಆಗಿಲ್ಲ, ತಾತ್ಕಾಲಿಕವಾಗಿ ಡಾಂಬರ್ ಹಾಕಿದ್ದು ಮೂರೇ ದಿನಕ್ಕೆ ಕಿತ್ತೋಗಿದೆ, ಹಲವು ವರ್ಷಗಳಿಂದ ರಸ್ತೆ ಮಾಡಿಕೊಡಿ ಮಾಡಿಕೊಡಿ ಎಂದು ಬೇಡುವ ಪರಿಸ್ಥಿತಿ ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಂದುವಾಡ ಕೆರೆ ಸಮೀಪ ಶಿವಗಂಗಾ ಕಲ್ಯಾಣ ಮಂಟಪ ಹಾಗೂ ಬಿಂದಾಸ್ ಬಾರ್ ಮುಂಭಾಗದ ಮುಖ್ಯ ರಸ್ತೆ ವಿವಾದಗಳಿಂದ ನಲುಗಿ ಹೋಗಿದೆ, ಈ ಹಿಂದೆ ರಸ್ತೆಗೆ ಅಡ್ಡವಾಗಿ ತಂತಿ ಬೇಲಿ ನಿರ್ಮಿಸಿ ಸಂಚಾರವನ್ನೆ ಬಂದ್ ಮಾಡಲಾಗಿತ್ತು, ಇದರ ಪರಿಣಾಮ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಆ ಜಾಗದಲ್ಲಿ ಮಳೆ ಬಂದರೆ ಎರಡ್ಮೂರು ಅಡಿಗಿಂತ ಹೆಚ್ಚು ನೀರು ಹರಿಯುತ್ತದೆ, ಇಲ್ಲಿ ಬೈಕ್ ಸವಾರರು ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ, ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಸಂಚರಿಸುವುದರಿಂದ ನೀರಿನಲ್ಲಿ, ಚರಂಡಿಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ, ಈ ವಿಚಾರವಾಗಿ ಮಹಾನಗರ ಪಾಲಿಕೆಗೆ ಪದೇ ಪದೇ ಮನವಿ ಮಾಡಿದ್ದರೂ ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು, ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಅವಘಡ ಆಗುವ ಮುನ್ನ ಎಚ್ಚೆತ್ತುಕೊಳ್ಳುವಂತೆ ವಿನಂತಿ ಮಾಡುತ್ತಿದ್ದೇವೆ, ಜೊತೆಗೆ ಕುಂದುವಾಡ ಕೆರೆ ಮೇಲ್ಭಾಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸಂಚಾರ ಮಾಡಲು ಅನಾನುಕೂಲವಾಗಿದೆ, ಮಳೆ ಬಂದರೆ ದೇವರೇ ಕಾಪಾಡಬೇಕಾದ ಸ್ಥಿತಿ ಎದುರಾಗಿದೆ, ಬಿಂದಾಸ್ ಬಾರ್ ಮುಂಭಾಗದಿಂದ ಕುಂದುವಾಡ ಕೆರೆ ಎರಡನೇ ಗೇಟ್ ವರೆಗೆ ಸುಸಜ್ಜಿತ ಸಿಸಿ ರಸ್ತೆ ನಿರ್ಮಿಸಿ ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ ಎಂದು ಹೇಳಿದರು.
ತಾತ್ಕಾಲಿಕವಾಗಿ ಕೆರೆ ರಸ್ತೆಯ ಗುಂಡಿಗಳನ್ನು ಮುಚ್ಚಿ ಜೊತೆಗೆ ಕೆರೆಯ ಒಳಭಾಗದಲ್ಲಿ ಬೀದಿ ದೀಪಗಳಿದ್ದು ಕೆಲವೆಡೆ ಕುಂದುವಾಡ ಕೆರೆ ರಸ್ತೆ ಕಡೇ ತಿರುಗಿಸಿದರೇ ರಾತ್ರಿ ಸಮಯದಲ್ಲಿ ಅನುಕೂಲವಾಗುತ್ತದೆ, ಈ ಕೆಲಸವನ್ನು
ಮಾಡಿಕೊಡಬೇಕಾಗಿ ವಿನಂತಿ. 15ದಿನಗಳ ಒಳಗಾಗಿ ಕುಂದುವಾಡ ಮುಖ್ಯ ರಸ್ತೆ ಅಭಿವೃದ್ದಿಗೆ ಕ್ರಮ ವಹಿಸದಿದ್ದಲ್ಲಿ ರಸ್ತೆಯ ಮಧ್ಯೆಯೇ ಗುಂಡಿಯಲ್ಲಿ ಕೂತು ರಸ್ತೆ ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುವುದು ಹಾಗೂ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಇಂಜಿನಿಯರ್ ಆದ ಜಯಲಕ್ಷ್ಮಿ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಜಿಮ್ಮಿ ಹನುಮಂತಪ್ಪ, ಡಿಎಸ್ ಎಸ್ ಮಂಜುನಾಥ್, ಮಾರುತಿ, ಯರಿಯಪ್ಪರ ಸಂಪತ್ ಕುಮಾರ್, ಮಧುನಾಗರಾಜ್, ನಬಿ, ಅಣ್ಣೇಶ್, ಚಂದ್ರಪ್ಪ, ಮಹಾಂತೇಶ್, ರಾಜೂ, ಸೇರಿದಂತೆ ಮತ್ತಿತರರಿದ್ದರು.