ಕ್ಯಾಲಿಫೋರ್ನಿಯಾ : ಜಾಗತಿಕ ತಂತ್ರಾಂಶ ದಿಗ್ಗಜ ‘ಜೋಹೋ’ (Zoho) ಸಂಸ್ಥೆಯ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಮತ್ತು ಅವರ ಮಾಜಿ ಪತ್ನಿ ಪ್ರಮಿಳಾ ಶ್ರೀನಿವಾಸನ್ ನಡುವಿನ ವಿಚ್ಛೇದನ ಪ್ರಕರಣವು ಇದೀಗ ತೀವ್ರ ತಿರುವು ಪಡೆದುಕೊಂಡಿದೆ.

ಶ್ರೀಧರ್ ವೆಂಬು ಅವರು ತಮ್ಮ ಗಮನಕ್ಕೆ ತಾರದೆ, ಕಂಪನಿಯ ಬಹುಪಾಲು ಷೇರುಗಳನ್ನು ತಮ್ಮ ಕುಟುಂಬದ ಸದಸ್ಯರಿಗೆ ರಹಸ್ಯವಾಗಿ ವರ್ಗಾಯಿಸಿದ್ದಾರೆ ಎಂದು ಪ್ರಮಿಳಾ ಶ್ರೀನಿವಾಸನ್ ‘ಫೋರ್ಬ್ಸ್’ಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
2019ರಲ್ಲಿ ಶ್ರೀಧರ್ ವೆಂಬು ಅವರು ಭಾರತಕ್ಕೆ ತೆರಳಿದಾಗ, ಕಂಪನಿಯ ವಿಸ್ತರಣೆಗಾಗಿ ಮಾತ್ರ ಅವರು ತೆರಳುತ್ತಿದ್ದಾರೆ ಎಂದು ತಾವಂದುಕೊಂಡಿದ್ದೆವು ಎಂದು ಪ್ರಮಿಳಾ ತಿಳಿಸಿದ್ದಾರೆ.
ಆದರೆ, 2020ರ ಅಕ್ಟೋಬರ್‌ನಲ್ಲಿ ವಾಟ್ಸಾಪ್ (WhatsApp) ಸಂದೇಶದ ಮೂಲಕ ಅವರು ವಿಚ್ಛೇದನ ಕೋರಿದ್ದು ನನಗೆ ದೊಡ್ಡ ಆಘಾತ ತಂದಿತು ಎಂದು ಅವರು ಹೇಳಿದ್ದಾರೆ. ಸದ್ಯ ಆಟಿಸಂ ಪೀಡಿತ ತಮ್ಮ ಮಗನೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪ್ರಮಿಳಾ, ಆಸ್ತಿ ಹಂಚಿಕೆಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ರಹಸ್ಯ ಷೇರು ವರ್ಗಾವಣೆ ಆರೋಪ: ಕ್ಯಾಲಿಫೋರ್ನಿಯಾ ಕಾನೂನಿನ ಪ್ರಕಾರ ವೈವಾಹಿಕ ಜೀವನದಲ್ಲಿ ಗಳಿಸಿದ ಆಸ್ತಿಗಳು ಜಂಟಿ ಒಡೆತನಕ್ಕೆ ಒಳಪಡುತ್ತವೆ. ಆದರೆ ಶ್ರೀಧರ್ ವೆಂಬು ಅವರು ಯಾವುದೇ ಒಪ್ಪಿಗೆ ಪಡೆಯದೆ ತಮ್ಮ ಬಹುಪಾಲು ಷೇರುಗಳನ್ನು ಸಹೋದರಿ ರಾಧಾ ವೆಂಬು ಹಾಗೂ ಸಹೋದರ ಸೇಕರ್ ಅವರಿಗೆ ವರ್ಗಾಯಿಸಿದ್ದಾರೆ ಎಂದು ಪ್ರಮಿಳಾ ಆರೋಪಿಸಿದ್ದಾರೆ.
ಷೇರುದಾರರ ಮಾದರಿಯಲ್ಲಿ ವ್ಯತ್ಯಾಸ: ಜೋಹೋ ಸಂಸ್ಥೆಯ ಸಂಸ್ಥಾಪಕ ಹಾಗೂ ದೀರ್ಘಕಾಲಿಕ ಸಿಇಒ ಆಗಿರುವ ಶ್ರೀಧರ್ ವೆಂಬು ಕೇವಲ ಶೇ. 5ರಷ್ಟು ಷೇರುಗಳನ್ನು ಮಾತ್ರ ಹೊಂದಿದ್ದಾರೆ. ಆದರೆ ಅವರ ಸಹೋದರಿ ಶೇ. 47.8 ಹಾಗೂ ಸಹೋದರ ಶೇ. 35.2ರಷ್ಟು ಷೇರುಗಳನ್ನು ಹೊಂದಿದ್ದಾರೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಕುಟುಂಬದ ಸಂಬಂಧಿಕರ ಹೇಳಿಕೆಯಂತೆ ವೆಂಬು ವಾಸ್ತವವಾಗಿ ಶೇ. 88ರಷ್ಟು ಷೇರುಗಳ ಒಡೆಯರಾಗಿರಬಹುದು ಎಂದು ಶಂಕಿಸಲಾಗಿದೆ.
ವಿಶ್ವದ ಅತ್ಯಂತ ದುಬಾರಿ ವಿಚ್ಛೇದನಗಳಲ್ಲಿ ಒಂದು: ಈ ಕಾನೂನು ಸಮರಕ್ಕಾಗಿ ಪ್ರಮಿಳಾ ಅವರು 11 ಮಿಲಿಯನ್ ಡಾಲರ್ (ಸುಮಾರು 99 ಕೋಟಿ ರೂ.) ಖರ್ಚು ಮಾಡಿದ್ದು, ಇದರಲ್ಲಿ 5.75 ಮಿಲಿಯನ್ ಡಾಲರನ್ನು ವೆಂಬು ಭರಿಸಿದ್ದಾರೆ. 2025ರ ಜನವರಿಯಲ್ಲಿ ಅಮೆರಿಕದ ನ್ಯಾಯಾಲಯವು 1.7 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂ.) ಬಾಂಡ್ ಠೇವಣಿ ಇಡುವಂತೆ ವೆಂಬುಗೆ ಆದೇಶಿಸಿತ್ತು.
ಪ್ರಮಿಳಾ ಶ್ರೀನಿವಾಸನ್ ಅವರು ವಿಚ್ಛೇದನದಿಂದ ಬರುವ ಹಣವನ್ನು ಆಟಿಸಂ ಸಂಶೋಧನೆಗಾಗಿ ತಾವು ಸ್ಥಾಪಿಸಿರುವ ‘ದಿ ಬ್ರೈನ್ ಫೌಂಡೇಶನ್’ (The Brain Foundation) ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ತಾನು ಯಾವುದೇ ಆಸ್ತಿಯನ್ನು ಮರೆಮಾಚಿಲ್ಲ ಅಥವಾ ವಂಚಿಸುವ ಪ್ರಯತ್ನ ಮಾಡಿಲ್ಲ ಎಂದು ಶ್ರೀಧರ್ ವೆಂಬು ಈ ಹಿಂದೆ ಸ್ಪಷ್ಟಪಡಿಸಿದ್ದಾರೆ.




