
ಚೆನ್ನೈ: ತಮಿಳುನಾಡು ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇರೆಗೆ ತಮಿಳಗ ವೆಟ್ರಿ ಕಳಗಂ ಪಕ್ಷದ ಶಾಸಕ ಸಿ. ಅರುಳ್ ವಿಕ್ರೇಶ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಮೂರೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿಗೆ ವಾಟ್ಸಾಪ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸುವುದು, ಅನುಚಿತ ವರ್ತನೆ ತೋರುವುದು ಮತ್ತು ಕುಡಿದ ಮತ್ತಿನಲ್ಲಿ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ ಎಂದು ಶಾಸಕ ಅರುಳ್ ವಿಕ್ರೇಶ್ ವಿರುದ್ಧ ಆರೋಪಿಸಲಾಗಿತ್ತು.
ಆದರೆ, ಈ ಎಲ್ಲಾ ಆರೋಪಗಳನ್ನು ಶಾಸಕರು ತಳ್ಳಿಹಾಕಿದ್ದು, ಇದು ರಾಜಕೀಯ ಪ್ರೇರಿತ ಎಂದು ಹೇಳಿಕೊಂಡಿದ್ದಾರೆ. ಈ ವಿಳಂಬ ಧೋರಣೆ ಕುರಿತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸೇರಿದಂತೆ ಪ್ರಮುಖರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ಚಾಟಿ: ಜುಲೈ 31ರಂದೇ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದ ಸರ್ಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ನವೆಂಬರ್ 23ರಂದು ಅಧಿಕೃತವಾಗಿ ಎಫ್ಐಆರ್ ದಾಖಲಾಗಿತ್ತು.
ಪ್ರಮುಖ ಆರೋಪಗಳು: ಐಎಎಸ್ ಅಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಾಗೂ ನಿವಾಸಕ್ಕೆ ನುಗ್ಗಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ರಾಜಕೀಯ ವಲಯದಲ್ಲಿ ಸಂಚಲನ: ಶಾಸಕರ ಬಂಧನ ತಡವಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದು, ತಿರುಪ್ಪೂರು ಎಸ್ಪಿ ಸೃಷ್ಟಿ ಸಿಂಗ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.




