
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನೊಬ್ಬ ಪ್ರಿಯತಮೆ ನಡವಳಿಕೆಯ ಅನುಮಾನದಿಂದ ಆಕೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಕೇರಳದ ಅಡ್ಡೂರು ಮೂಲದ ಗಂಗಾ (22) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ನೀಲೇಶ್ವರ ಮೂಲದ ಗೋಕುಲ್ ಕೃಷ್ಣ (23) ಎಂದು ಗುರುತಿಸಲಾಗಿದೆ. ಇಬ್ಬರೂ ನೆಲಮಂಗಲದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಮುಗಿಸಿದ್ದರು. ಗಂಗಾ ಕಾಲೇಜಿನಲ್ಲಿ ಗೋಕುಲ್ನ ಜೂನಿಯರ್ ಆಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನರ್ಸಿಂಗ್ ಮುಗಿಸಿದ್ದ ಗಂಗಾ ಕೆಲಸದ ಹುಡುಕಾಟದಲ್ಲಿದ್ದರೆ, ಗೋಕುಲ್ ನರ್ಸಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕೊಡಿಸುವ ಕೆಲಸ ಮಾಡುತ್ತಿದ್ದ.
ಲಾಡ್ಜ್ನಲ್ಲಿ ವಾಸ್ತವ್ಯ: ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಇಬ್ಬರೂ ಕಾಟನ್ ಪೇಟೆಯ ಓಟಿಸಿ ರಸ್ತೆಯಲ್ಲಿರುವ ತವಕ್ಕಲ್ ಮಸ್ತಾನ್ ದರ್ಗಾ ಸಮೀಪದ ‘ರಿಜೆನ್ಸಿ ಲಾಡ್ಜ್’ಗೆ ಆಗಮಿಸಿ, ದಾಖಲೆಗಳನ್ನು ನೀಡಿ ಎರಡನೇ ಮಹಡಿಯಲ್ಲಿ ರೂಂ ಬುಕ್ ಮಾಡಿ ತಂಗಿದ್ದರು.
ಅನುಮಾನದಿಂದ ಗಲಾಟೆ: ಗಂಗಾ ಬೇರೊಬ್ಬ ಯುವಕನ ಜೊತೆ ಓಡಾಡುತ್ತಿದ್ದಾಳೆ ಎಂಬ ಅನುಮಾನ ಗೋಕುಲ್ ಕೃಷ್ಣನನ್ನು ಕಾಡುತ್ತಿತ್ತು. ಇದೇ ವಿಚಾರವಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿದ್ದು, ಮೊದಲೇ ಖರೀದಿಸಿ ತಂದಿದ್ದ ಚಾಕುವಿನಿಂದ ಬೆದರಿಸಲು ಹೋದ ಗೋಕುಲ್, ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಗಂಗಾಳ ಹೊಟ್ಟೆ ಭಾಗಕ್ಕೆ ಬಲವಾಗಿ ಇರಿದಿದ್ದಾನೆ.
ಮಾರ್ಗಮಧ್ಯೆ ಸಾವು: ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ಗಂಗಾಳನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆಯೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಗಾಂಧಿನಗರ ಡಿಸಿಪಿ ಲಕ್ಷ್ಮೀ ಗಣೇಶ್, “ಕೇರಳದಿಂದ ಕೆಲಸ ಹುಡುಕಿಕೊಂಡು ಬಂದಿದ್ದ ಯುವಕ-ಯುವತಿ ನಿನ್ನೆ ಲಾಡ್ಜ್ನಲ್ಲಿ ತಂಗಿದ್ದರು. ಬೆಳಗ್ಗೆ ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.




