
ಬಿಹಾರ: ಬಿಹಾರದ ಸಹರ್ಸ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಶೌಚಾಲಯದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮೂರು ದಿನಗಳ ಹಿಂದೆ ವಶಕ್ಕೆ ಪಡೆದಿದ್ದ ಅನ್ಮೋಲ್ ಕುಮಾರ್ ಎಂಬಾತ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಪೊಲೀಸರ ಲಂಚದ ಬೇಡಿಕೆ ಹಾಗೂ ಚಿತ್ರಹಿಂಸೆಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಹಿಂದೆ ಅನ್ಮೋಲ್ ಕುಮಾರ್‌ನನ್ನು ಸಹರ್ ಬಜಾರ್ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಮಂಗಳವಾರ ಮುಂಜಾನೆ ಠಾಣೆಯ ಶೌಚಾಲಯಕ್ಕೆ ತೆರಳಿದ ಆತ ಅಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆ ಹಾಗೂ ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ, ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕುಟುಂಬದ ಗಂಭೀರ ಆರೋಪ: ಮೃತನ ಬಿಡುಗಡೆಗಾಗಿ ಠಾಣೆಯ ಕಾನ್‌ಸ್ಟೆಬಲ್ ಒಬ್ಬರು 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅನ್ಮೋಲ್ ತಾಯಿ ಹಾಗೂ ಪತ್ನಿ ದೂರಿದ್ದಾರೆ. ಅಲ್ಲದೆ, ಭೇಟಿಗೆ ಹೋದಾಗ ಹಿರಿಯ ಅಧಿಕಾರಿಗಳ ಭೇಟಿ ಹಾಗೂ ಸಭೆಯ ನೆಪ ಹೇಳಿ ಮಗನನ್ನು ಭೇಟಿ ಮಾಡಲು ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐವರು ಪೊಲೀಸ್ ಸಿಬ್ಬಂದಿ ಅಮಾನತು: ಕರ್ತವ್ಯ ಲೋಪ ಹಾಗೂ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಠಾಣಾಧಿಕಾರಿ (SHO) ಸಂಜಯ್ ಕುಮಾರ್ ಸತ್ಯಾರ್ಥಿ, ತನಿಖಾಧಿಕಾರಿ ಎಸ್‌ಐ ಶಿವಾನಿ ಕುಮಾರಿ, ಕರ್ತವ್ಯದಲ್ಲಿದ್ದ ಎಎಸ್‌ಐ ಅನಂತ್ ಕುಮಾರ್ ಸಿಂಗ್, ಕಾನ್‌ಸ್ಟೆಬಲ್ ಮುನ್ನಾ ಕುಮಾರ್ ಮತ್ತು ಗಾರ್ಡ್ ರಾಜ್‌ಕಿಶೋರ್ ಶರ್ಮಾ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಉನ್ನತ ಮಟ್ಟದ ತನಿಖೆ: ಈ ಸಂಪೂರ್ಣ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.




