
ಭರೂಚ್: ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಸ್ನೇಹಿತನ ಅಕ್ರಮ ಸಂಬಂಧದ ಪ್ರಸ್ತಾಪವನ್ನು ಪದೇ ಪದೇ ತಿರಸ್ಕರಿಸಿದ್ದಕ್ಕೆ ಆಕೆಯ ಮುಗ್ಧ 2 ವರ್ಷದ ಮಗಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಅತ್ಯಂತ ಕ್ರೂರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಚಾಕೊಲೇಟ್ ಆಮಿಷ ಒಡ್ಡಿ ಮಗುವನ್ನು ಅಪಹರಿಸಿ ಈ ಕೃತ್ಯ ಎಸಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಯನ್ನು 28 ವರ್ಷದ ಸುರೇಂದ್ರಕುಮಾರ್ ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆಯ ಪತಿಯ ಸ್ನೇಹಿತನಾಗಿದ್ದು, ಮಹಿಳೆಯ ಮೇಲೆ ನಿರಂತರವಾಗಿ ಅಕ್ರಮ ಸಂಬಂಧಕ್ಕೆ ಒತ್ತಡ ಹೇರುತ್ತಿದ್ದ. ಮಹಿಳೆ ಈ ಪ್ರಸ್ತಾಪವನ್ನು ತೀವ್ರವಾಗಿ ತಿರಸ್ಕರಿಸಿದ್ದಲ್ಲದೆ, ಆತನ ಕಿರುಕುಳವನ್ನು ವಿರೋಧಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಮಹಿಳೆಗೆ ದೂರವಾಣಿ ಮೂಲಕ ಬೆದರಿಕೆ ಹಾಕಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಕಂದಮ್ಮನನ್ನು ಗುರಿಯಾಗಿಸಿಕೊಂಡಿದ್ದಾನೆ.
ಘಟನೆಯ ವಿವರ: ಸಂತ್ರಸ್ತೆಯ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಕಂದಮ್ಮನಿಗೆ ಚಾಕೊಲೇಟ್ ಕೊಡುವುದಾಗಿ ಆಮಿಷ ಒಡ್ಡಿ ತನ್ನ ಕೊಠಡಿಗೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ. ಈ ಹೇಯ ಕೃತ್ಯದಿಂದ ಮಗುವಿನ ಖಾಸಗಿ ಅಂಗಗಳಿಗೆ ತೀವ್ರ ಗಾಯಗಳಾಗಿವೆ.
ದೂರು ಹಾಗೂ ಬಂಧನ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬಸ್ಥರು ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಪೋಕ್ಸೊ (POCSO) ಕಾಯ್ದೆ ಹಾಗೂ ಗಂಭೀರ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ನ್ಯಾಯಾಂಗ ಬಂಧನ ಮತ್ತು ತನಿಖೆ: ಬಂಧಿತ ಆರೋಪಿಯನ್ನು ಭರೂಚ್‌ನಲ್ಲಿರುವ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ (Remand) ಪಡೆದು ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯೊಬ್ಬಳ ಮೇಲಿನ ದ್ವೇಷಕ್ಕೆ ಹಸುಗೂಸಿನ ಮೇಲೆ ಇಂತಹ ಹೇಯ ಕೃತ್ಯ ಎಸೆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.




