
ನವದೆಹಲಿ: ದೆಹಲಿಯ ಪ್ರೀತ್ ವಿಹಾರ್ ಪ್ರದೇಶದ ಕೆಫೆಯೊಂದರಲ್ಲಿ ನಡೆದ ತಡರಾತ್ರಿಯ ಪಾರ್ಟಿಯ ನಂತರ 22 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಇಬ್ಬರು ಪುರುಷ ಸಹೋದ್ಯೋಗಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಸಂತ್ರಸ್ತ ಯುವತಿ ಮತ್ತು ಆರೋಪಿಗಳೆಲ್ಲರೂ ಕಾರ್ಕರ್ಡೂಮಾದ ಕ್ರಾಸ್ ರಿವರ್ ಮಾಲ್ನಲ್ಲಿರುವ ‘ಕೆಫೆ 8’ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಸಂತ್ರಸ್ತೆ ಸೇರಿದಂತೆ ಒಟ್ಟು ಎಂಟು ಮಂದಿ ಸಹೋದ್ಯೋಗಿಗಳು ಪಾರ್ಟಿ ಮಾಡಲೆಂದು ಪ್ರೀತ್ ವಿಹಾರ್ನಲ್ಲಿರುವ ‘ಸಲ್ತನತ್ ಕೆಫೆ’ಯಲ್ಲಿ ಸೇರಿದ್ದರು.
ಸಾಮಾನ್ಯವಾಗಿ ರಾತ್ರಿ 11.30ಕ್ಕೆ ಕೆಫೆ ಮುಚ್ಚಲಾಗುತ್ತದೆಯಾದರೂ, ಉದ್ಯೋಗಿಯೊಬ್ಬರ ಬಳಿ ಕೀಲಿ ಕೈ ಇದ್ದ ಕಾರಣ ತಡರಾತ್ರಿ ಕೆಫೆಯನ್ನು ಮತ್ತೆ ತೆರೆದು ಮದ್ಯಪಾನದೊಂದಿಗೆ ಪಾರ್ಟಿ ಮುಂದುವರಿಸಿದ್ದರು ಎನ್ನಲಾಗಿದೆ.
ಘಟನೆಯ ವಿವರ: ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಗುಂಪು ಕೆಫೆಯಿಂದ ಹೊರಬಂದಿದ್ದು, ಈ ವೇಳೆ ಇಬ್ಬರು ಪುರುಷ ಸಹೋದ್ಯೋಗಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಉಳಿದವರು ಅವರಿಗೆ ಸಹಕರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಎಫ್ಐಆರ್ ಮತ್ತು ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಒಟ್ಟು ಆರು ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು ಸೇರಿ ಮೂವರನ್ನು ಬಂಧಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಮತ್ತು ದೂರು: ಘಟನೆಯ ನಂತರ ಸಂತ್ರಸ್ತೆ ಒಬ್ಬ ಪುರುಷ ಸ್ನೇಹಿತ ಮತ್ತು ಇಬ್ಬರು ಮಹಿಳೆಯರೊಂದಿಗೆ ವಾಹನವೊಂದರಲ್ಲಿ ತೆರಳುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಮಂಗಳವಾರ ಬೆಳಗ್ಗೆ 5.45ರ ಸುಮಾರಿಗೆ ಆಕೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪ್ರಸ್ತುತ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ಮ್ಯಾಜಿಸ್ಟ್ರೇಟ್ ಮುಂದೆಯೂ ಆಕೆಯ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.




