ದಾವಣಗೆರೆ: ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು ನಾಗರಹಾವು ಕಾಣುತ್ತದೆ. ಮನೆಗಳಲ್ಲಿ ಓಡಾಡುತ್ತದೆ. ಯಾರ ಮನೆಗೂ ಹೋದರೂ ವಿಶೇಷ ಅತಿಥಿ ಬಂದ ಹಾಗೆ. ಶ್ರದ್ಧಾ ಭಕ್ತಿಯಿಂದ ಪ್ರತಿಯೊಂದು ಗ್ರಾಮದವರು ಪೂಜಿಸುತ್ತಾರೆ. ವಿಷಪೂರಿತ ಹಾವು ಬಂದರೂ ಭಯ ಪಡುವ ಪ್ರಶ್ನೆಯೇ ಇಲ್ಲ. ನಾಗರಪಂಚಮಿ ಹಬ್ಬದ ಸಂಭ್ರಮ, ಸಡಗರ ಎಲ್ಲೆಡೆ ಮನೆ ಮಾಡಿದೆ. ದೇಶಾದ್ಯಂತ ಹಬ್ಬವೂ ಜೋರಾಗಿದೆ. ಈ ಗ್ರಾಮದಲ್ಲಿ ಮಾತ್ರ ನಿತ್ಯವೂ ನಾಗಾರಾಧನೆ ಇರುತ್ತೆ. ಹಾಲಿನ ನೇವೇದ್ಯ ಇರುತ್ತದೆ. ಜೊತೆಗೆ ಪೂಜೆಯನ್ನೂ ಸಲ್ಲಿಸಲಾಗುತ್ತದೆ.
READ ALSO THIS STORY: ರೂ. 5,60,000 ಸಹಾಯಧನ: ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿ ತೆಂಗು ಸಸಿ ನಾಟಿ ಮಾಡಲು ಸಬ್ಸಿಡಿ
ಇಂಥದ್ದೊಂದು ವಿಶಿಷ್ಟ, ವಿಶೇಷ ಗ್ರಾಮ ಇರುವುದು ದಾವಣಗೆರೆ ಜಿಲ್ಲೆಯಲ್ಲಿ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಬಳಿಯ ನಾಗೇನಹಳ್ಳಿ ಗ್ರಾಮವು ನಾಗರಹಾವಿನಿಂದಲೇ ಪ್ರಖ್ಯಾತಿ ಪಡೆದಿದೆ. ಸಣ್ಣವರಿಂದ ಹಿಡಿದು ವಯೋವೃದ್ಧರೂ ಸಹ ನಾಗರಹಾವಿಗೆ ಭಯಪಡುವುದಿಲ್ಲ. ಆಧುನಿಕ ಯುಗದಲ್ಲಿ ಆಶ್ಚರ್ಯವಾದರೂ ಇದು ಸತ್ಯ.
ಹಾವು ಕಡಿಯಲ್ಲ, ಜನರು ಹೊಡೆಯಲ್ಲ:
ಅಂದ ಹಾಗೆ ಈ ಗ್ರಾಮದೊಳಗಿನ ಜನರಿಗೆ ಹಾವು ಕಡಿದ ನಿದರ್ಶನವೂ ಕಡಿಮೆ. ಸತ್ತಿದ್ದೂ ವಿರಳಾತಿವಿರಳ ಎನ್ನಬಹುದಾದರೂ ಗ್ರಾಮಸ್ಥರು ಹೇಳುವ ಪ್ರಕಾರ ಹಾವು ಕಚ್ಚಿದ್ದೇ ಇಲ್ಲ. ನಮಗೆ ತಿಳುವಳಿಕೆ ಬಂದಾಗಿನಿಂದಲೂ
ಆಗಿಲ್ಲ ಎನ್ನುತ್ತಾರೆ. ಹಾವು ಕಡಿಯುವುದೂ ಇಲ್ಲ, ಜನರು ಹೊಡೆಯುವುದೂ ಇಲ್ಲ. ಅಷ್ಟೇ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ.
ನಿತ್ಯವೂ ನಾಗಾರಾಧನೆ:
ನಾಗೇನಹಳ್ಳಿ ಗ್ರಾಮದಲ್ಲಿ ನಾಗರಪಂಚಮಿ ದಿನದಂದು ಮಾತ್ರವಲ್ಲ, ನಿತ್ಯವೂ ಹಾಲಿನ ನೇವೇದ್ಯ ಇರುತ್ತದೆ. ಮನೆಯೊಳಗೆ ಬಂದರೆ ಊದಿನ ಕಡ್ಡಿ ಬೆಳಗಿ, ಹಾಲಿಟ್ಟು ನಾಗಪ್ಪನನ್ನು ಪೂಜಿಸಲಾಗುತ್ತದೆ. ಜನರೂ ಸಹ ಅಷ್ಟೇ
ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಾಗಪ್ಪನೂ ಆಶೀರ್ವಾದ ಮಾಡುತ್ತಾನೆ ಎಂಬ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ.
ನಾಗರಹಾವಿನ ಜೊತೆ ಆಟ:
ಉತ್ತರ ಭಾರತದಲ್ಲಿ ಹಾವುಗಳ ಜೊತೆ ಆಟವಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಕರ್ನಾಟಕದ ಮಧ್ಯದಲ್ಲಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗೇನಹಳ್ಳಿಯಲ್ಲಿ ಇರುವುದು ಮತ್ತೊಂದು ವಿಶೇಷ.
READ ALSO THIS STORY: ಚನ್ನಗಿರಿಯಲ್ಲಿ ಗಂಡನಿಗೆ ಮಕ್ಕಳಾಗಲ್ಲವೆಂದು ಪ್ರಿಯಕರನ ಸಂಗ: ಪತಿ ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧಿಸಿದ್ದೇ ರೋಚಕ!
ಮಕ್ಕಳು, ವಯೋವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರು ಯಾವುದೇ ಭಯ ಇಲ್ಲದೇ, ಆತಂಕಪಡದೇ ಹಾವುಗಳ ಜೊತೆ ಆಟವಾಡುತ್ತಾರೆ. ನಾಗರಹಾವು ಕಚ್ಚಿದರೂ ಸಾಯುವುದಿಲ್ಲ. ಅದೂ ಗ್ರಾಮದೊಳಗೆ.
ನಾಗರಹಾವು ಕಚ್ಚಿದರೂ ಸಾಯುವುದಿಲ್ಲ ಏಕೆ?
ನಾಗೇನಹಳ್ಳಿಯ ಶ್ರೀ ಕ್ಷೇತ್ರ ಅಷ್ಟೊಂದು ಫೇಮಸ್. ಇಲ್ಲಿ ನೆಲೆಸಿರುವ ನಾಗಲಿಂಗೇಶ್ವರ ಸ್ವಾಮಿ ಇರುವುದರಿಂದ ಹಾವು ಕಚ್ಚಿದರೂ ವಿಷ ಏರುವುದಿಲ್ಲ. ಸತ್ತದ್ದೂ ಇಲ್ಲ. ಇದೆಲ್ಲಾ ನಾಗಲಿಂಗೇಶ್ವರನ ಪವಾಡ ಎನ್ನುತ್ತಾರೆ ಗ್ರಾಮಸ್ಥರು.
ನಾಲ್ಕು ಶತಮಾನಗಳ ಇತಿಹಾಸ ಏನು?
ಇನ್ನು ಈ ಗ್ರಾಮದಲ್ಲಿ ನಾಗರಹಾವು ಕಚ್ಚಿದರೂ ಸಾಯುವುದಿಲ್ಲ ಏಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಋಷಿಮುನಿಯೊಬ್ಬರು ನಾಲ್ಕು ನೂರು ವರ್ಷಗಳ ಹಿಂದೆ ನಾಗೇನಹಳ್ಳಿಯಲ್ಲಿ ವಾಸವಿದ್ದರು. ಬಸಲೆ ಮರ ಕಟ್ಟೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರಂತೆ. ಅವರು ಪ್ರತಿದಿನವೂ ನಾಗದೇವನ ಪೂಜೆ ಮಾಡಿದ ಬಳಿಕ ಭಿಕ್ಷೆಗೆ ಹೋಗುತ್ತಿದ್ದರಂತೆ. ಒಮ್ಮೆ ಭಿಕ್ಷೆಗೆ ಹೋದಾಗ ಒಂದು ಮಗು ಋಷಿಮುನಿಗೆ ದೊರೆತಿದೆ. ದೇವಸ್ಥಾನದ ಬಳಿ ಇಟ್ಟು ಎಂದಿನಂತೆ ಭಿಕ್ಷಾಟನೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ ನಾಗರಹಾವು ಕಚ್ಚಿದರಿಂದಾಗಿ ಮಗು ಮೃತಪಟ್ಟಿತ್ತಂತೆ.
ಮಗು ಸತ್ತಿರುವುದನ್ನು ನೋಡುತ್ತಲೇ ವ್ಯಾಘ್ರರಾದ ಋಷಿಮುನಿಗಳು ಮತ್ತೆ ಯಾರಿಗೂ ಇಂಥ ನೋವು ಬರಬಾರದು ಎಂಬ ಕಾರಣಕ್ಕೆ ನಾಗರಹಾವು ಈ ಗ್ರಾಮದ ಗಡಿ ಭಾಗದಲ್ಲಿ ಕಚ್ಚಬಾರದು, ಕಚ್ಚಿದರೂ ವಿಷ ಏರಬಾರದು ಎಂಬ
ಶಾಪ ಕೊಟ್ಟರಂತೆ. ಅಂದಿನಿಂದ ಇಂದಿನವರೆಗೂ ಯಾವುದೇ ಅವಘಡ ಸಂಭವಿಸಿಲ್ಲವಂತೆ. ಋಷಿಮುನಿ ಅವರು ಮೃತಪಟ್ಟ ಬಳಿಕ ಅವರು ಪೂಜೆ ಮಾಡುತ್ತಿದ್ದ ಸ್ಥಳವನ್ನು ಗ್ರಾಮಸ್ಥರು ಇಂದಿಗೂ ಪೂಜಿಸಿಕೊಡು ಬಂದಿದ್ದಾರೆ.
ಇಲ್ಲಿ ಸಿಗುತ್ತೆ ಸರ್ಪ ದೋಷ, ಸರ್ಪ ಹುಣ್ಣುಗೆ ಪರಿಹಾರ:
ಗ್ರಾಮದಲ್ಲಿರುವ ಜನರು ಹಾವು ಕಚ್ಚಿದರೆ ಆಸ್ಪತ್ರೆಗೆ ಹೋಗುವುದಿಲ್ಲ. ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿಯ ಗುಡಿಗೆ ಹೋಗಿ ತೀರ್ಥ ಹಾಕಿದಾಕ್ಷಣ ವಾಸಿ ಆಗುತ್ತದೆ ಎಂಬ ನಂಬಿಕೆ ಈಗಲೂ ಇದೆ. ರಕ್ತ ಸೋರುವ ಹಾಗೆ ನಾಗರಹಾವು ಕಚ್ಚಿದರೂ ಯಾರೂ ಮೃತಪಟ್ಟಿಲ್ಲ ಎನ್ನುತ್ತಾರೆ ಜನರು.
ಗ್ರಾಮದಲ್ಲಿ ಋಷಿಮುನಿ ಅವರಿಗೂ ಇಂದಿಗೂ ಪೂಜೆ ಸಲ್ಲಿಸಲಾಗುತ್ತದೆ. ಸರ್ಪ ದೋಷ, ಸರ್ಪ ಹುಣ್ಣು ಇದ್ದವರು ನಾಗೇನಹಳ್ಳಿಗೆ ಬಂದು ನಾಗಲಿಂಗೇಶ್ವರ ಸ್ವಾಮಿಗೆ ಪೂಜೆ ಮಾಡಿಸಿದರೆ ವಾಸಿಯಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ವಿಶೇಷ ಮರಗಳು:
ಒಂದೇ ಸ್ಥಳದಲ್ಲಿ ಅಂದರೆ ನಾಗಲಿಂಗೇಶ್ವರ ದೇವಾಸ್ಥಾನದ ಆವರಣದಲ್ಲಿ ಅಶ್ವತ್ಥ್ ವೃಕ್ಷ, ಬನ್ನಿಮರ, ಬಸಲಿ ಮರ, ಮತ್ತು ಬಿಲ್ವಾ ಪತ್ರ ಮರಗಳು ಇವೆ. ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ ಎನ್ನುವ ಗ್ರಾಮಸ್ಥರು, ನಾಗರಹಾವು ಒಂದು ವೇಳೆ ಸತ್ತು ಹೋದರೆ ಮನುಷ್ಯರನ್ನು ಯಾವ ರೀತಿ ದಫನ್ ಅಥವಾ ಅಂತ್ಯಸಂಸ್ಕಾರ ಮಾಡಲಾಗುತ್ತದೆಯೋ? ವಿಧಿವಿಧಾನಗಳನ್ನು ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ಮಾಡುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.