
ಮಲಪ್ಪುರಂ (ಕೇರಳ): ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೋಡಿ ಖರೀದಿಸಿದ ಫೇರ್ನೆಸ್ ಕ್ರೀಮ್ ಅನ್ನು ಸತತವಾಗಿ ಬಳಸಿದ ಪರಿಣಾಮ 17 ವರ್ಷದ ಬಾಲಕಿಯ ಕಿಡ್ನಿಗೆ ಗಂಭೀರ ಹಾನಿಯಾಗಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.
ಕಲಬೆರಕೆ ಪದಾರ್ಥಗಳು ಹಾಗೂ ಅತಿಯಾದ ಪಾದರಸ ಹೊಂದಿರುವ ಕ್ರೀಮ್ ತಯಾರಿಸಿ ಮಾರಾಟ ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರು ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪ್ರಭಾವಿಗಳು ಪ್ರಚಾರ ಮಾಡಿದ್ದ ಈ ಕ್ರೀಮ್, ಮುಖದ ಕಲೆಗಳು ಮತ್ತು ಕಪ್ಪು ಚುಕ್ಕೆಗಳನ್ನು ನಿವಾರಿಸುತ್ತದೆ ಎಂದು ನಂಬಿಸಲಾಗಿತ್ತು. ಸುಮಾರು ಒಂದು ವರ್ಷದ ಕಾಲ ಈ ಕ್ರೀಮ್ ಬಳಸಿದ ಬಾಲಕಿಯ ಕಾಲಿನಲ್ಲಿ ಊತ ಕಾಣಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಮೂತ್ರದ ಮೂಲಕ ಅಪಾಯಕಾರಿ ಅಲ್ಬುಮಿನ್ ಅಂಶ ಹೊರಹೋಗುತ್ತಿರುವುದು ಹಾಗೂ ಕಿಡ್ನಿ ಸಮಸ್ಯೆ ಉಂಟಾಗಿರುವುದು ದೃಢಪಟ್ಟಿದೆ.
ಕ್ರೀಮ್ನ ಪ್ರಯೋಗಾಲಯ ಪರೀಕ್ಷೆಯಲ್ಲಿ ಅನುಮತಿಸಲಾದ ಮಿತಿಗಿಂತ (1 ppm ಗಿಂತ ಕಡಿಮೆ) ಸಾವಿರಾರು ಪಟ್ಟು ಹೆಚ್ಚು ಅಂದರೆ 12,500 ppm ಪ್ರಮಾಣದ ಪಾದರಸ ಪತ್ತೆಯಾಗಿದೆ. ಕ್ರೀಮ್ ಪ್ಯಾಕೆಟ್ ಮೇಲೆ ಕೇವಲ ದುಬೈ ವಿಳಾಸ ಹಾಗೂ ಅರಿಶಿನ ಮತ್ತು ನೈಸರ್ಗಿಕ ಪದಾರ್ಥಗಳಿವೆ ಎಂದು ನಮೂದಿಸಲಾಗಿತ್ತೇ ಹೊರತು ಪಾದರಸದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ.
ಕ್ರೀಮ್ನಲ್ಲಿ ಅಪಾಯಕಾರಿ ಪಾದರಸ: ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಫೇರ್ನೆಸ್ ಕ್ರೀಮ್ನಲ್ಲಿ 12,500 ppm ನಷ್ಟು ಮಾರಕ ಪಾದರಸದ ಅಂಶ ಪತ್ತೆಯಾಗಿದ್ದು, ಇದು ಬಾಲಕಿಯ ಕಿಡ್ನಿ ಮತ್ತು ಚರ್ಮಕ್ಕೆ ತೀವ್ರ ಹಾನಿ ಮಾಡಿದೆ.
ವಿವಿಧ ಕಾಯ್ದೆಗಳಡಿ ಎಫ್ಐಆರ್ ದಾಖಲು: ಮಾನವ ಜೀವಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ ಕಲಬೆರಕೆ ಉತ್ಪನ್ನ ಮಾರಾಟ ಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS), ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ ಹಾಗೂ ಕೇರಳ ಪೊಲೀಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ಮನವಿ ಮತ್ತು ಚಿಕಿತ್ಸೆ: ಚಿಕಿತ್ಸೆಗಾಗಿ ಕುಟುಂಬ ಈಗಾಗಲೇ ಸುಮಾರು 1 ಲಕ್ಷ ರೂ. ಖರ್ಚು ಮಾಡಿದ್ದು, ಇನ್ನೂ 1-2 ವರ್ಷ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಕ್ರೀಮ್ಗಳನ್ನು ಬಳಸುವವರು ತಕ್ಷಣವೇ ನಿಲ್ಲಿಸಬೇಕು ಎಂದು ಬಾಲಕಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾಳೆ.




