Home ಕ್ರೈಂ ನ್ಯೂಸ್ ಕಾರು ಸಿಗಲಿಲ್ಲವೆಂದು ಮಂಟಪದಲ್ಲೇ ಮದುವೆ ರದ್ದುಗೊಳಿಸಿದ ಪೊಲೀಸ್ ಕಾನ್‌ಸ್ಟೆಬಲ್: ಮದುವೆ ಮಂಟಪದಲ್ಲಿ ಕಣ್ಣೀರಿಟ್ಟ ವಧು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಾರು ಸಿಗಲಿಲ್ಲವೆಂದು ಮಂಟಪದಲ್ಲೇ ಮದುವೆ ರದ್ದುಗೊಳಿಸಿದ ಪೊಲೀಸ್ ಕಾನ್‌ಸ್ಟೆಬಲ್: ಮದುವೆ ಮಂಟಪದಲ್ಲಿ ಕಣ್ಣೀರಿಟ್ಟ ವಧು!

Share
ಮದುವೆ
Share

ಸೋನಿಪತ್, ಹರಿಯಾಣ: ಮದುವೆ ಸಮಾರಂಭದ ವೇಳೆ ವರದಕ್ಷಿಕೆಗಾಗಿ ಹಠ ಹಿಡಿದು, ತಾವು ಬಯಸಿದ ಕಾರು ಸಿಗಲಿಲ್ಲ ಎಂಬ ಕಾರಣಕ್ಕೆ ಮಂಟಪದಲ್ಲೇ ಮದುವೆ ರದ್ದುಗೊಳಿಸಿ ವಾಪಸ್ ತೆರಳಿರುವ ಆಘಾತಕಾರಿ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ.

ವಧುವಿನ ಕುಟುಂಬದವರು ನೀಡಿದ್ದ ರೂ. 9.5 ಲಕ್ಷ ಮೌಲ್ಯದ ಹ್ಯುಂಡೈ ಔರಾ ಕಾರಿನ ಬದಲಿಗೆ ರೂ. 13 ಲಕ್ಷ ಮೌಲ್ಯದ ಮಾರುತಿ ಬ್ರೆಝಾ ಕಾರು ಬೇಕೆಂದು ವರ ಪಟ್ಟುಹಿಡಿದ ಹಿನ್ನೆಲೆಯಲ್ಲಿ ಈ ವಿವಾದ ಸೃಷ್ಟಿಯಾಗಿದೆ.

ಸೋನಿಪತ್‌ನ ಮಾಮ್‌ಚಂದ್ ವಾಟಿಕಾದಲ್ಲಿ ನವೆಂಬರ್ 20ರಂದು ನಿಗದಿಯಾಗಿದ್ದ ಮದುವೆಗೆ ದೆಹಲಿ ಪೊಲೀಸ್  ಕಾನ್‌ಸ್ಟೆಬಲ್ ಆಗಿರುವ ಕುಲದೀಪ್ ಎಂಬಾತ ಸಾಮಾನ್ಯ ಉಡುಪಿನಲ್ಲಿ ತಾಯಿಯೊಂದಿಗೆ ಆಗಮಿಸಿದ್ದು, ಕಾರು ಸಿಗದ ಕಾರಣ ಜಗಳವಾಡಿ ಮದುವೆ ಮಾಡಿಕೊಳ್ಳದೆ ಹೊರಟುಹೋಗಿದ್ದಾನೆ.

ವಧು ಹೀನಾಳ ತಂದೆ ಸುಭಾಷ್ ಕುಮಾರ್ ಅವರು ಮದುವೆ ಸಿದ್ಧತೆಗಾಗಿ ಬರೋಬ್ಬರಿ 25 ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ವರ ಹಾಗೂ ಆತನ ಕುಟುಂಬದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಚ್ಚುವರಿ ವರದಕ್ಷಿಣೆ ಬೇಡಿಕೆ: ಈಗಾಗಲೇ ರೂ. 9.5 ಲಕ್ಷ ಮೌಲ್ಯದ ಕಾರು ಬುಕ್ ಮಾಡಲಾಗಿದ್ದರೂ, ಮದುವೆಗೆ ಕೆಲವೇ ದಿನಗಳ ಮೊದಲು ವರ ಕುಲದೀಪ್ ರೂ. 13 ಲಕ್ಷದ ಬ್ರೆಝಾ ಕಾರಿಗೆ ಬೇಡಿಕೆ ಇಟ್ಟಿದ್ದನು. ಕೊನೆಯ ಕ್ಷಣದಲ್ಲಿ ಕಾರು ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ ಈ ಮದುವೆ ರದ್ದಾಗಿದೆ.

ಆಭರಣಗಳು ಹಾಗೂ ಗೃಹೋಪಯೋಗಿ ವಸ್ತುಗಳು: ಕಾರು ಮಾತ್ರವಲ್ಲದೆ ವರನಿಗೆ 2 ತೊಲೆಯ ಚಿನ್ನದ ಸರ, ತಾಯಿಗೆ 4 ತೊಲೆಯ ಕಿವಿಯೋಲೆಗಳು, ಅಣ್ಣ ಹಾಗೂ ಅತ್ತಿಗೆಗೂ ಒಡವೆಗಳನ್ನು ಕೇಳಲಾಗಿತ್ತು. ಅಲ್ಲದೆ ರೂ. 1.32 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಸಹ ವಧುವಿನ ಕಡೆಯವರು ಸಿದ್ಧಪಡಿಸಿದ್ದರು.

ಮಂಟಪದಲ್ಲೇ ಕಣ್ಣೀರು ಹಾಕಿದ ವಧು: ಸುಮಾರು 1,200 ಅತಿಥಿಗಳಿಗಾಗಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ವರನ ಕಡೆಯಿಂದ ಕೇವಲ 20-30 ಮಂದಿ ಮಾತ್ರ ಬಂದು, ವಧುವಿನ ಕಡೆಯವರೊಂದಿಗೆ ವಾಗ್ವಾದ ನಡೆಸಿ ಮದುವೆ ನಿರಾಕರಿಸಿದರು. ಮಂಟಪದಲ್ಲಿ ಕುಳಿತಿದ್ದ ವಧು ಹೀನಾ ಕಣ್ಣೀರು ಹಾಕುವಂತಾಯಿತು.

ಈ ಘಟನೆಯ ಕುರಿತು ವಧುವಿನ ತಂದೆ ಸುಭಾಷ್ ಕುಮಾರ್ ಅವರು ‘ಡಯಲ್ 112’ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ, ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share