
ಮುಂಬೈ / ನವದೆಹಲಿ: ಮುಂಬೈನ ಕುರ್ಲಾ ಪ್ರದೇಶದ ಸಾರ್ವಜನಿಕ ಉದ್ಯಾನವನದಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದ ದಂಪತಿ ಮೇಲೆ ಅಪ್ರಾಪ್ತರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತೀವ್ರ ಸಂಚಲನ ಮೂಡಿಸಿದ್ದು, ಈ ಘಟನೆಯು ರಾಜಕೀಯ ಮತ್ತು ಕೋಮು ಬಣ್ಣ ಪಡೆದುಕೊಂಡಿದೆ. ಬಿಜೆಪಿ ನಾಯಕರು ಇದಕ್ಕೆ ಕೋಮು ಸ್ವರೂಪ ನೀಡಿದ್ದರೆ, ವಿರೋಧ ಪಕ್ಷದ ನಾಯಕರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದು ಪಾಕಿಸ್ತಾನವಲ್ಲ, ಭಾರತ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಕುರ್ಲಾ ಪಶ್ಚಿಮದ ಫೀನಿಕ್ಸ್ ಮಾಲ್ ಬಳಿಯ ಉದ್ಯಾನವನದಲ್ಲಿ ಶುಕ್ರವಾರ ಮಧ್ಯಾಹ್ನ ದಂಪತಿ ಫೋಟೋ ತೆಗೆಸಿಕೊಳ್ಳುತ್ತಿದ್ದಾಗ 8 ರಿಂದ 10 ಬಾಲಕರ ಗುಂಪು ಅಸಭ್ಯವಾಗಿ ವರ್ತಿಸಿದ್ದು, ದಂಪತಿ ಅದನ್ನು ವಿರೋಧಿಸಿದಾಗ ದಂಡು ಬಂದು ಸ್ಟಿಕ್‌ಗಳು ಹಾಗೂ ಕೈಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ನಾಯಕರ ಆಕ್ರೋಶ ಹಾಗೂ ಕೋಮು ಬಣ್ಣ: ಬಿಜೆಪಿ ನಾಯಕ ನಿತೇಶ್ ರಾಣೆ ಈ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಕಠಿಣ ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಂಸದ ಕೀರಿಟ್ ಸೋಮಯ್ಯ ಹಾಗೂ ಮುಂಬೈ ಬಿಜೆಪಿ ಅಧ್ಯಕ್ಷ ಅಮಿತ್ ಸಾತಮ್ ಅವರು ಸ್ಥಳಕ್ಕೆ ಭೇಟಿ ನೀಡಿ, ಇದು ಜನಸಂಖ್ಯಾ ಬದಲಾವಣೆಯ ಯತ್ನ ಹಾಗೂ ಮುಸ್ಲಿಂ ಮತಾಂಧರ ಕೃತ್ಯ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷಗಳ ಪ್ರತಿಕ್ರಿಯೆ: ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಗೃಹ ಸಚಿವರು ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಬು ಅಸಿಮ್ ಅಜ್ಮಿ ಇದನ್ನು ಹಿಂದೂ-ಮುಸ್ಲಿಂ ವಿವಾದವನ್ನಾಗಿ ಮಾಡದಂತೆ ಎಚ್ಚರಿಕೆ ನೀಡಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಆದರೆ ಧರ್ಮ ನೋಡಿ ಶಿಕ್ಷೆಯಾಗಬಾರದು ಎಂದು ಹೇಳಿದ್ದಾರೆ.
ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ 8 ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜುವೆನೈಲ್ ಕೋರ್ಟ್ ಆದೇಶದಂತೆ 6 ಅಪ್ರಾಪ್ತರನ್ನು ಡಿಸೆಂಬರ್ 4ರವರೆಗೆ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಕ್ರಮ ಕೂಟ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




