
ಮೊರಾದಾಬಾದ್: ಚಲಿಸುವ ರೈಲಿನಲ್ಲಿ ಇಬ್ಬರು ಪುತ್ರಿಯರ ಎದುರೇ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಹಾರ ಮೂಲದ ರೂಬಿ ಎಂಬುವವರೇ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಘಟನೆಯಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿದೆ.
ದರ್ಭಂಗಾ ಮತ್ತು ಅಮೃತಸರ ನಡುವೆ ಸಂಚರಿಸುವ ಜನ ನಾಯಕ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 15211) ರೈಲಿನಲ್ಲಿ ಸೀಟಿನ ವಿಚಾರವಾಗಿ ಈ ಗಲಾಟೆ ನಡೆದಿದೆ. ತಾಯಿಯನ್ನು ರಕ್ಷಿಸಲು ಅವರ ಇಬ್ಬರು ಪುತ್ರಿಯರಾದ ಲಕ್ಷ್ಮಿ ಮತ್ತು ಖುಷಿ ಅಂಗಲಾಚುತ್ತಾ ಪೊಲೀಸರಿಗೆ ಅಡ್ಡ ನಿಂತು ತಬ್ಬಿಕೊಂಡರೂ, ಸಿಬ್ಬಂದಿ ಕರುಣೆ ತೋರದೆ ಮಹಿಳೆಯ ಮುಖಕ್ಕೆ ಪದೇ ಪದೇ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಲಲಿತ್ ಮತ್ತು ಅಜಯ್ ಎಂಬ ಇಬ್ಬರು ಕಾನ್ಸ್ಟೆಬಲ್ಗಳ ವಿರುದ್ಧ ಈ ಹಲ್ಲೆಯ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ: ಜನರಲ್ ಬೋಗಿಗಳನ್ನು ಮಾತ್ರ ಹೊಂದಿರುವ ಜನ ನಾಯಕ್ ಎಕ್ಸ್ಪ್ರೆಸ್ ರೈಲು ಮೊರಾದಾಬಾದ್ ನಿಲ್ದಾಣದಿಂದ ಹೊರಟ ಬಳಿಕ, ರೂಬಿ ಅವರು ಇಡೀ ಸೀಟಿನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ವಾಗ್ವಾದ ಶುರುವಾಗಿದೆ.
ಪೊಲೀಸರ ಪ್ರತಿದೂರು: ಜಗಳ ಬಿಡಿಸಲು ಹೋದಾಗ ರೂಬಿ ಮತ್ತು ಅವರ ಪುತ್ರಿಯರು ತಮ್ಮನ್ನು ನಿಂದಿಸಿ, ಹಲ್ಲೆ ನಡೆಸಿ ಸಮವಸ್ತ್ರ ಹರಿದಿದ್ದಾರೆ ಎಂದು ಮೊರಾದಾಬಾದ್ ಜಿಆರ್ಪಿ ಸಿಬ್ಬಂದಿ ಲಿಖಿತ ದೂರು ನೀಡಿದ್ದು, ನಾಲ್ವರು ಮಹಿಳೆಯರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಹಾಯಕ್ಕೆ ಬಂದವರ ಬಂಧನ: ಮಹಿಳೆಯ ರಕ್ಷಣೆಗೆ ಧಾವಿಸಿದ ಇಬ್ಬರು ಪುರುಷ ಸಹ ಪ್ರಯಾಣಿಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಳಿಕ ಹಲ್ಲೆ ನಡೆಸಿದ ಜಿಆರ್ಪಿ ಸಿಬ್ಬಂದಿ ಹಾಗೂ ಇಬ್ಬರು ಪ್ರಯಾಣಿಕರನ್ನು ನಜೀಬಾಬಾದ್ ನಿಲ್ದಾಣದಲ್ಲಿ ರೈಲಿನಿಂದ ಇಳಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇತ್ತ ಗಾಯಗೊಂಡ ರೂಬಿ ಅವರು ಸಹ ತಮ್ಮ ಪುತ್ರಿಯರೊಂದಿಗೆ ರೈಲಿನಿಂದ ಇಳಿದು, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ದೂರು ದಾಖಲಿಸಲು ನಜೀಬಾಬಾದ್ ಜಿಆರ್ಪಿ ಠಾಣೆಗೆ ತೆರಳಿದ್ದಾರೆ.
- Indian Railways News
- Jan Nayak Express viral video
- Moradabad GRP assault
- Najibabad GRP station
- railway police brutality
- Ruby Bihar woman assault
- woman beaten by railway police
- ಜನ ನಾಯಕ್ ಎಕ್ಸ್ಪ್ರೆಸ್ ಘಟನೆ
- ಜಿಆರ್ಪಿ ಪೊಲೀಸ್ ದರ್ಪ
- ನಜೀಬಾಬಾದ್ ಪೊಲೀಸ್ ಠಾಣೆ
- ಬಿಹಾರ ಮಹಿಳೆ ರೂಬಿ ಹಲ್ಲೆ
- ಮಹಿಳೆಯ ಮೇಲೆ ಹಲ್ಲೆ ವಿಡಿಯೋ
- ಮೊರಾದಾಬಾದ್ ರೈಲ್ವೆ ಪೊಲೀಸ್ ಹಲ್ಲೆ
- ರೈಲು ಸೀಟು ವಿವಾದ




