
ಗೋಪಾಲಗಂಜ್ (ಬಿಹಾರ): ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೆ ಸರ್ಕಾರಿ ಶಾಲೆಯ 6 ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಹಾರದ ಗೋಪಾಲಗಂಜ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಮುಖ್ಯಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ವಿಷಯ ತಿಳಿದ ಗ್ರಾಮಸ್ಥರು ಶಾಲೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೃಂದಾವನ ಗ್ರಾಮದ ಉನ್ನತ ಮಾಧ್ಯಮಿಕ ಶಾಲೆಯ ಶಿಕ್ಷಕ ಎಹ್ಸಾನ್ ಅಖ್ತರ್ ಅಕ್ಟೋಬರ್ 2 ರಿಂದ 5 ರವರೆಗೆ 11ನೇ ತರಗತಿಯ ಆರು ವಿದ್ಯಾರ್ಥಿನಿಯರನ್ನು ರಾಜಗೀರ್ ಪ್ರವಾಸಕ್ಕೆ ಕರೆದೊಯ್ದಿದ್ದರು. ಸರ್ಕಾರಿ ಯೋಜನೆಯಡಿ ಈ ಪ್ರವಾಸ ಆಯೋಜಿಸಲಾಗಿದೆ ಎಂದು ಸುಳ್ಳು ಹೇಳಿ ಪೋಷಕರಿಂದ ಒಪ್ಪಿಗೆ ಪಡೆದಿದ್ದರು. ಆದರೆ, ಶಿಕ್ಷಕ ತನ್ನ ಸ್ವಂತ ಖರ್ಚಿನಲ್ಲಿ ಈ ಪ್ರವಾಸ ಕೈಗೊಂಡಿದ್ದು, ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುದು ತನಿಖೆಯಿಂದ ಬಯಲಾಗಿದೆ.
ಗ್ರಾಮಸ್ಥರ ಆಕ್ರೋಶ: ಪ್ರವಾಸದ ಸತ್ಯಾಂಶ ಹಾಗೂ ಅನುಚಿತ ವರ್ತನೆಯ ಆರೋಪ ತಿಳಿಯುತ್ತಿದ್ದಂತೆ ಶಾಲಾ ಆವರಣಕ್ಕೆ ನುಗ್ಗಿದ ಗ್ರಾಮಸ್ಥರು ಶಿಕ್ಷಕನನ್ನು ನಿಂದಿಸಿ ಥಳಿಸಿದ್ದು, ಶಾಲೆಯ ಕುರ್ಚಿ-ಮೇಜುಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ.
ಮುಖ್ಯಶಿಕ್ಷಕರ ನಿರ್ಲಕ್ಷ್ಯ: ಅನಧಿಕೃತ ಪ್ರವಾಸದ ಬಗ್ಗೆ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಶಾಲೆಯ ಮುಖ್ಯಶಿಕ್ಷಕ ಕೃಷ್ಣ ಭಗವಾನ್ ಯಾದವ್ ಅವರ ಪಾತ್ರವೂ ತನಿಖೆಯಲ್ಲಿ ಸಾಬೀತಾಗಿದೆ.
ಶಾಲಾ ಆಡಳಿತದಲ್ಲಿ ಅಕ್ರಮ: ತನಿಖೆಯ ವೇಳೆ ಶಾಲೆಯ ಹಾಜರಾತಿ ಪುಸ್ತಕ, ಪರೀಕ್ಷಾ ಪ್ರಕ್ರಿಯೆಗಳಲ್ಲಿನ ಅಕ್ರಮಗಳು ಹಾಗೂ ಶಾಲಾ ನಿರ್ವಹಣೆಗೆ ಸಂಬಂಧಿಸಿದ ಇತರ ದೂರುಗಳು ಬೆಳಕಿಗೆ ಬಂದಿವೆ.
ತನಿಖಾ ವರದಿಯ ಆಧಾರದ ಮೇಲೆ ಹಾಗೂ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ (DEO) ಅಮರೇಂದ್ರ ಕುಮಾರ್ ಪಾಂಡೆ ಅವರು ಮುಖ್ಯಶಿಕ್ಷಕ ಕೃಷ್ಣ ಭಗವಾನ್ ಯಾದವ್ ಮತ್ತು ಶಿಕ್ಷಕ ಎಹ್ಸಾನ್ ಅಖ್ತರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಬ್ಬರ ವಿರುದ್ಧವೂ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.




