ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಟ್ಟಾಗಿ ನಿಂತು ಗಟ್ಟಿಯಾಗಿ ‘ವೀರಶೈವ ಲಿಂಗಾಯತ’ ಅಸ್ಮಿತೆ ಪ್ರತಿಪಾದಿಸಬೇಕಿದೆ: ಡಾ. ಪ್ರಭಾ ಮಲ್ಲಿಕಾರ್ಜುನ್

On: July 21, 2025 8:23 PM
Follow Us:
ಪ್ರಭಾ ಮಲ್ಲಿಕಾರ್ಜುನ್
---Advertisement---

ದಾವಣಗೆರೆ: ಧಾರ್ಮಿಕ, ಸಾಮಾಜಿಕ ಮತ್ತು ಆಂತರಿಕ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ,ಸಮಾಜಕ್ಕೆ ಸಮಗ್ರತೆ‌,ಭಾವೈಕ್ಯತೆ,ವಿಶ್ವ ಬಂಧುತ್ವ ಸಂದೇಶ ನೀಡುವ ಉದ್ದೇಶದಿಂದ ಶೃಂಗ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸುತ್ತಿರುವುದು‌ ಈವತ್ತಿನ ಸಂದರ್ಭದಲ್ಲಿ ಅತ್ಯಂತ ತುರ್ತು ಅಗತ್ಯ, ಹಾಗೂ ನಮ್ಮೆಲ್ಲರಿಗೆ ಗುರುಹಿರಿಯರು ಮಾರ್ಗದರ್ಶನ ನೀಡುವ ಗುರುತರ ಕಾರ್ಯವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಪಂಚಪೀಠಾಧ್ಯಕ್ಷರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿಗೆ ಜ್ಞಾನದ ದಾರಿ ತೋರುತ್ತಾ ಸಮಾಜದ ಸಮಗ್ರ ಅಭಿವೃದ್ಧಿ ಹಾಗೂ ಸಮಾನತೆಯ ದೀಪದ ಬೆಳಕಿನತ್ತ ನಮ್ಮೆಲ್ಲರನ್ನೂ ಕರೆದೊಯ್ಯುತ್ತಾ ನಮ್ಮೆಲ್ಲರ ಬದುಕಿಗೆ ಕಳಶಪ್ರಾಯವಾಗುವಂತಹ ಈ ಎರಡು ದಿನದ ಶೃಂಗ ಸಮ್ಮೇಳನ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿರುವ ಶ್ರೀ ಪಂಚಪೀಠಾಚಾರ್ಯರು, ಶಿವಾಚಾರ್ಯರು, ಗುರುವರ್ಯರುಗಳೆಲ್ಲರಿಗೂ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇಂದು ನಡೆಯುತ್ತಿರುವ ಈ ಐತಿಹಾಸಿಕ ಶೃಂಗ ಸಮ್ಮೇಳನ ಹಾಗೂ ಮಠಾಧೀಶರುಗಳ ಅಗಮನದಿಂದ ನಮ್ಮ ದಾವಣಗೆರೆಯ  ನೆಲ ಸದ್ ಪಾವನವಾಗಿದೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು‌ ಹಾಗೂ ಅಪ್ಪಾಜಿಯವರಾದ ನಮ್ಮೆಲ್ಲರ ನೆಚ್ಚಿನ ಡಾ.ಶಾಮನೂರು ಶಿವಶಂಕರಪ್ಪಾಜಿ ಅವರ ನೇತೃತ್ವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಶ್ರಮದಿಂದ ದಾವಣಗೆರೆಯಲ್ಲಿ ಶೃಂಗ ಸಮ್ಮೇಳನ ನಡೆಯುತ್ತಿದೆ. ಧರ್ಮ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ನಮ್ಮ ಇಡೀ ಶಾಮನೂರು ಕುಟುಂಬ ಎಲ್ಲ ರೀತಿಯ ಭಕ್ತಿಪೂರ್ವಕ ಸಹಕಾರ ನೀಡುತ್ತಾ ಬಂದಿದೆ. ಈ ಕೈಂಕರ್ಯ ಮುಂದೆಯೂ ನಿರಂತರವಾಗಿ ಸಾಗಲಿದೆ ಎಂಬ ಭರವಸೆ ನನಗೆ ಇದೆ ಎಂದು ಹೇಳಿದರು.

ಹಿಂದೊಂದು ಸಂದರ್ಭದಲ್ಲಿ ಶ್ರೀಗಳು ನಮ್ಮ ಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ನಮ್ಮೆಲ್ಲರನ್ನು ಆಶೀರ್ವದಿಸಿದ ಸಂದರ್ಭದಲ್ಲಿ ಸಮಾಜದ ಒಳಿತಿಗಾಗಿ ಇಂತಹ ಒಂದು ಸಮ್ಮೇಳನದ ಬಗ್ಗೆ ತಮ್ಮ ಅಭಿಲಾಷೆಯನ್ನು ಸೂಚ್ಯವಾಗಿ ಹೊರಹಾಕಿದಾಗ ಅಪ್ಪಾಜಿಯವರು ತಕ್ಷಣವೇ ಸಮ್ಮತಿ ವ್ಯಕ್ತಪಡಿಸಿ ಅದನ್ನು ಕೈಗೂಡಿಸುವ ಎಲ್ಲಾ ಪ್ರಯತ್ನಗಳನ್ನು ಆಗಿನಿಂದಲೇ ಕೈಕೊಂಡಿದ್ದರು. ಗುರು ಹಿರಿಯರ ಆಕಾಂಕ್ಷೆಯ ಬಲದ ಮೇಲೆ ಮತ್ತು ನಮ್ಮೆಲ್ಲರ ಪುಣ್ಯದ ಫಲವಾಗಿ ಇಂದು ನಾವು ದಾವಣಗೆರೆಯಲ್ಲಿ ಮಹತ್ವದ ಶೃಂಗ ಸಮ್ಮೇಳನ ನಡೆಯುತ್ತಿರುವುದನ್ನು
ನೋಡುತ್ತಿದ್ದೇವೆ, ಮತ್ತು ಅದರ ಭಾಗವಾಗಿದ್ದೇವೆ. ಇದು ನಮ್ಮೆಲ್ಲರ ಅಪರೂಪದ ಅದೃಷ್ಟ, ಇದಕ್ಕೆ ಕಾರಣವಾದ ಎಲ್ಲರಿಗೂ ನಮ್ಮ ನಮನಗಳು ಎಂದರು.

ಈ ಭವ್ಯ ವೇದಿಕೆಯಲ್ಲಿ ಆಸೀನರಾಗಿರುವ ರಾಜ್ಯ, ಹೊರರಾಜ್ಯದ  ಶಿವಾಚಾರ್ಯರು, ಪಂಚಾಚಾರ್ಯರು, ಪೀಠಾಧೀಶರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು, ಗಣ್ಯ ಮಾನ್ಯರ ಉಪಸ್ಥಿತಿ ಇಲ್ಲಿ ಸಮಾಗಮಗೊಂಡಿರುವುದು ಒಂದು ಸಂಭ್ರಮದ ಐತಿಹಾಸಿಕ ಕ್ಷಣ. ಇದು ಎಲ್ಲರಲ್ಲೂ ಒಗ್ಗಟ್ಟಿನ ಭಾವನೆ ಮೂಡಿಸಿದೆ ಎಂಬುದು ನನ್ನ ನಂಬಿಕೆ ಎಂದು ತಿಳಿಸಿದರು.

ಇಡೀ ವಿಶ್ವವೇ ಈವತ್ತು ತಂತ್ರಜ್ಞಾನದ ಬಲೆಯ ಮೂಲಕ ಸಣ್ಣ ಹಳ್ಳಿ ಅಂದರೆ ‘ಗ್ಲೋಬಲ್ ವಿಲೇಜ್’ ಎನ್ನುವ ಅಭಿದಾನಕ್ಕೆ ಪಾತ್ರವಾಗಿರುವಾಗ ನಮ್ಮ ವೀರಶೈವ ಲಿಂಗಾಯತ ಧರ್ಮದ  ಒಳಪಂಗಡಗಳು, ಉಪಪಂಗಡಗಳು ಎಲ್ಲವೂ ನಮ್ಮ ಧರ್ಮಕ್ಕೆ ಬಲ ತುಂಬಲು, ನಮ್ಮ ಜನಗಳ ಏಳ್ಗೆಗಾಗಿ ಹಾಗೂ ಮುಂಬರುವ ಪೀಳಿಗೆಗಳ ಒಳಿತಿಗಾಗಿ ಒಂದಾಗಬೇಕಿದೆ. ಇದು ನಮ್ಮ ಎಲ್ಲಾ ಗುರು ಹಿರಿಯರ ಅಭಿಲಾಶೆ ಕೂಡ ಆಗಿದ್ದು ಅವರೆಲ್ಲರೂ ಇದರ ಸಲುವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ತಮ್ಮ ಆಶೀರ್ವಚನಗಳಲ್ಲಿ ಈ ಮಾತನ್ನು ಎತ್ತಿ ಹಿಡಿಯುತ್ತಲೇ ಇದ್ದಾರೆ. ಈ ಧ್ವನಿ ಹಾಗೂ ಸಂದೇಶವನ್ನ ಈ ಸಮ್ಮೇಳನದ ಮೂಲಕ ನಾವು ಹೊರ ಜಗತ್ತಿಗೆ ಹೆಚ್ಚು ಗಟ್ಟಿಯಾಗಿ ಹೇಳಬೇಕಿದೆ ಎಂದು ತಿಳಿಸಿದರು.

ಇವತ್ತು ನಾವು ಮುಖ್ಯವಾಗಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ಬೇರು ಗಟ್ಟಿಗೊಳಿಸುವ ಆಶಯದತ್ತ ಒಂದು ಮುಖ್ಯ ಹೆಜ್ಜೆ ಇಡುತ್ತದ್ದೇವೆ ಈಡೇರಲಿದೆ. ನಮ್ಮ ಸಮಾಜಕ್ಕೆ, ನಮ್ಮ ಧರ್ಮಕ್ಕೆ ಸ್ವ-ಬಲದ ಹಾಗೂ ಸ್ವ-ಪ್ರಯತ್ನದ ಫಲವಾಗಿ ಇರುವ ಒಂದು ಸಹಜ ಶಕ್ತಿಯನ್ನು ನಾವು ಎಂದೆಂದೂ ಸಕಲರ ಒಳಿತಿಗೆ ಬಳಸಿದ್ದೇವೆ ಎನ್ನುವುದನ್ನ ಎಲ್ಲರೂ ನೆನಪು ಮಾಡಿಕೊಳ್ಳಬೇಕಿದೆ. ಹೀಗಿರುವಾಗ ನಾವೂ ಒಗ್ಗಟ್ಟಾಗಿ ಒಮ್ಮೆ ನಮ್ಮ ಜನಗಳ ಒಳಿತಿಗಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದಿನ ದಾರಿ ಕಂಡುಕೊಳ್ಳುವ ಬಗ್ಗೆ ಗುರುಹಿರಿಯರ ಮಾರ್ಗದರ್ಶನದಲ್ಲಿ ಸಮುದಾಯವನ್ನ ಮುನ್ನಡೆಸುವ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸಮಾಜದ ಭಕ್ತರ ಬಹುಕಾಲದ ಆಶಯವಾದ ವೀರಶೈವ ಲಿಂಗಾಯತ ಸಮಾಜ ಸಂಘಟನೆಗೆ ಎಲ್ಲಾ ಮಠಾಧೀಶರುಗಳು ಒಂದುಗೂಡಿ ಸಾಗಬೇಕು ಎಂಬ ಬಯಕೆ ಈ ಶೃಂಗ ಸಮ್ಮೇಳನದ ಮೂಲಕ ಈಡೇರಲಿದೆ, ಹಾಗೂ ಆ ಐತಿಹಾಸಿಕ ಸಮಯ ನಮ್ಮ ಮುಂದೆ ಈಗ ನಡೆಯುತ್ತ ಇದೆ ಎನ್ನುವುದು ನಮ್ಮೆಲ್ಲರ ಅದೃಷ್ಟ.  ಪೀಠದ ಪರಂಪರೆಗೆ ಹೊಂದುವ ಮೇರು ನಡೆ, ನಮ್ಮೆಲ್ಲರ ಒಗ್ಗಟ್ಟು ಹಾಗೂ ಏಳ್ಗೆ, ಮತ್ತು ಈ ಸಮಾಜದಲ್ಲಿ ಬದುಕುತ್ತಿರುವ ನಮ್ಮೆಲ್ಲರ ಜವಾಬ್ದಾರಿ, ಅಂದರೆ ಗಣತಂತ್ರ ವ್ಯವಸ್ಥೆಯ ಭಾಗವಾಗಿ ಬದುಕುತ್ತಿರುವ ನಮ್ಮೆಲ್ಲರ ಒಂದು ಸಾಮಾಜಿಕ ಕರ್ತವ್ಯವಾದ ಜಾತಿಗಣತಿಯ ಸಂದರ್ಭದಲ್ಲಿ ನಮ್ಮನ್ನು ನಾವು ಪ್ರತಿನಿಧಿಸಬೇಕಿರುವ ಬಗೆ, ಹಾಗೂ ಸಮಾಜ ಸಂಘಟನೆಯ ಚರ್ಚೆ ನಡೆದು ಶ್ರೀಗಳು ಉತ್ತಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದು ಭಕ್ತರುಗಳ ನಿರೀಕ್ಷೆಯಾಗಿದೆ.

ಇದನ್ನು ನಾನು ಸಷ್ಟವಾಗಿ ಹೇಳಬೇಕಿದೆ. ಜಾತಿ ಗಣತಿಯ ಒಂದು ಮುಖ್ಯ ಸಂದರ್ಭದಲ್ಲಿ ನಾವು ಒಳಪಂಗಡಗಳ ಹೆಸರನ್ನು ನಮ್ಮೊಳಗೆ ಸೀಮಿತವಾಗಿರಿಸಿ ಒಟ್ಟಾಗಿ ನಿಂತು ಗಟ್ಟಿಯಾಗಿ ‘ವೀರಶೈವ ಲಿಂಗಾಯತ’ ಎನ್ನುವ ಅಸ್ಮಿತೆಯನ್ನು ಪ್ರತಿಪಾದಿಸಿದರೆ, ನಮ್ಮ ಸಮಾಜದ, ಹಾಗೂ ಧರ್ಮದ ಒಳಿತಿನ ಹಾದಿಯನ್ನು ಮುಂದಿನ ಎಲ್ಲಾ ಪೀಳಿಗಳಿಗೆ ಭದ್ರ ಪಡಿಸಿದ ಕರ್ತವ್ಯವನ್ನು ಪಾಲಿಸಿದ ಹಾಗೆ ಎನ್ನುವುದನ್ನು ನಿಮ್ಮೆಲರ ಗಮನಕ್ಕೆ ತರಬಯಸುತ್ತೇನೆ. ಈವತ್ತು ನಾವು
ಒಟ್ಟಾಗದೇ ಹೋದರೆ ಇಷ್ಟು ಶತಮಾನಗಳ ಕಾಲ ಸಾಧಿಸಿದ ಏಳ್ಗೆ, ಪ್ರಗತಿ ಎಲ್ಲವೂ ನಮ್ಮ ಮುಂದಿನ ಪೀಳಿಗೆಗಳಿಗೆ ದಾಟದೇ ಹೋದೀತು ಎನ್ನುವ ಎಚ್ಚರಿಕೆಯನ್ನು ನಾವು ಈಗಲೇ ನೋಡಬೇಕಿದೆ ಎಂದರು.

ಇದಕ್ಕೆ ಶಕ್ತಿ ನೀಡುವಂತೆ ಇಂದಿನ ದಿನ ಇಲ್ಲಿ ಸೇರಿರುವ ನಿಮ್ಮೆಲ್ಲರನ್ನೂ ನೋಡುತ್ತಿದ್ದರೆ ನಮ್ಮ ವೀರಶೈವ ಲಿಂಗಾಯತ ಉಪಪಂಗಡಗಳು ಮತ್ತು ಒಳಜಾತಿಗಳು ಹಾಗೂ ಗುರುವಿರಕ್ತ ಪರಂಪರೆ ಸೇರಿದಂತೆ ಎಲ್ಲರಲ್ಲಿ ಬಲವಾದ ಒಗ್ಗಟ್ಟನ್ನ ಕಾಣುತ್ತಿದ್ದೇನೆಯೇ ಹೊರತು ನಮ್ಮ ನಡುವೆ ಗೋಡೆಗಳಿಲ್ಲ ಎನ್ನುವ ಸತ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ. ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾದ ಕ್ಷಣಗಳಿವು. ನಮ್ಮ ನಡುವೆ ಸಾಮರಸ್ಯ ಇದೆ ಎನ್ನುವುದು ಇಲ್ಲಿ ಮತ್ತೆ ಮತ್ತೆ ಮನನವಾಗ್ತಿದೆ ಎಂದು ಹೇಳಿದರು.

ಈ ಶೃಂಗ ಸಮ್ಮೇಳನ ಕೇವಲ ನಮ್ಮೆಲ್ಲರ ಗುರುವಿರಕ್ತರನ್ನು ಒಟ್ಟಿಗೆ ಕಾಣುವುದಕ್ಕಷ್ಟೆ ಅಲ್ಲದೆ, ಸಮಾಜದ ಒಳಿತನ್ನು ಬಯಸುವ ನಮ್ಮೆಲ್ಲ ಗುರುಹಿರಿಯರ ನಡುವೆ ಸೇತುವೆಗಳು ಸಹಜವಾಗಿಯೇ ಇವೆ. ಅವರ ಮಾರ್ಗದರ್ಶನದಲ್ಲಿ ನಮ್ಮೆಲ್ಲರ ಉಪಪಂಗಡಗಳಲ್ಲಿ ಸಾಮರಸ್ಯ ಅಷ್ಟೇ ಅಲ್ಲ, ಜೊತೆಗೆ ಸಾಮಾಜಿಕ‌ ಮೌಢ್ಯವನ್ನು ತೊಡೆದು ಹಾಕುವುದು, ವೀರಶೈವ ಗ್ರಂಥ ಸಾಹಿತ್ಯದ ಅಭಿವ್ಯಕ್ತಿ, ವಚನಸಾಹಿತ್ಯವನ್ನು ಬಿತ್ತರಿಸುವುದು, ಜಗತ್ತಿನಲ್ಲಿ ಅತ್ಯುನ್ನತ ಆಧ್ಯಾತ್ಮಿಕ ನಿಲುವು ಹಾಗೂ ಉತ್ತಮ ಲೌಕಿಕ ಮೌಲ್ಯ ಎನ್ನಿಸಿಕೊಂಡ ಕಾಯಕತತ್ವದ ಪ್ರಚಾರ, ಅದರಲ್ಲೂ ಕೃಷಿ ಸೇರಿದಂತೆ ಎಲ್ಲಾ ಕಾಯಕಗಳಿಗೆ ಸಮಾನ‌ಗೌರವವನ್ನು ಸಮಾಜದಲ್ಲಿ‌ ತಂದುಕೊಡುವ ಉದ್ದೇಶವನ್ನು ಹೊಂದಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೇ ನಮ್ಮ ಧರ್ಮದ ಬಂಧುಗಳು ಇರುವ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುಮಾಡು,ಕೇರಳ ರಾಜ್ಯ ಸೇರಿದಂತೆ ಉತ್ತರ ರಾಜ್ಯಗಳಲ್ಲಿರುವ ಸಮಾಜದ ಒಳಪಂಗಡಗಳು ಒಗ್ಗಟ್ಟಾಗಬೇಕೆಂಬ ಗುರುವರ್ಯರ ಆಶಯ ಈಡೇರಲಿ ಎಂದು ಹೇಳಿದರು.

ಶಿವಶಂಕರಪ್ಪರ ಸಂಕಲ್ಪದ ಬಗ್ಗೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು?

  • ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷತೆಯನ್ನು ದಾವಣಗೆರೆಯ ಕೊಡುಗೈದಾನಿ ಎಂದೇ ಹೆಸರಾಗಿರುವ‌ ನಮ್ಮ ಹೆಮ್ಮೆಯ  ಡಾ.ಶಾಮನೂರು ಶಿವಶಂಕರಪ್ಪಾಜಿ ಅವರು ವಹಿಸಿಕೊಂಡ ನಂತರ ಸಮಾಜ ಹಾಗೂ ಸಾಮರಸ್ಯದ ಪರ್ವ ಆರಂಭವಾಯಿತು ಎಂದು ಈ ಸಂದರ್ಭದಲ್ಲಿ ಹೇಳಬೇಕಿದೆ. ಅವರ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಸಮಾಜಕ್ಕೆ ಒಳಿತಿನ ಹಾದಿ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿದೆ.
     
  • ಅದಕ್ಕೆ ಮುಖ್ಯ ಕಾರಣ ಶಾಮನೂರು ಶಿವಶಂಕರಪ್ಪಾಜಿ ಅವರ ಸಂಘಟನಾ ಚತುರತೆ ಮತ್ತು ಅವರು ರೂಢಿಸಿಕೊಂಡು ಬಂದಿರುವ ಸಮಭಾವ. ವೀರಶೈವ ‌ಲಿಂಗಾಯತರು ಎಲ್ಲರೂ ಒಂದೇ ಎಂಬುದು ಅವರ ದೃಢನಂಬಿಕೆ. ಅದನ್ನು ಎಲ್ಲ ಸಂದರ್ಭಗಳಲ್ಲೂ ಸಾಕ್ಷಾತ್ಕರಿಸಿ ತೋರಿಸಿದ ಬದ್ಧತೆಯ ಕೀರ್ತಿ ಡಾ.ಶಾಮನೂರು ಶಿವಶಂಕರಪ್ಪಾಜಿ ಅವರಿಗೆ ಸಲ್ಲುತ್ತದೆ.
  • ಶಿವಶಂಕರಪ್ಪಾಜಿಯವರು‌ ಅಧ್ಯಕ್ಷರಾದ ನಂತರದಲ್ಲಿ‌  ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ನಿರಂತರವಾಗಿ ಸಾಗಿದೆ.
     
  • ಅಲ್ಲದೇ ಅಖಿಲ ಭಾರತ ವೀರಶೈವ ‌ಮಹಾಸಭಾ ಇದ್ದ ಹೆಸರನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ಬದಲಾಯಿಸಿ‌ ಸಮನ್ವಯಗೊಳಿಸಿದ ಕೀರ್ತಿಯೂ ಶಾಮನೂರು ಶಿವಶಂಕರಪ್ಪಾಜಿ ಅವರಿಗೆ ಹಾಗೂ ಅವರ ಕಾರ್ಯಕಾರಿ ಮಂಡಳಿಗೆ ಸೇರುತ್ತದೆ.

ಈ ಐತಿಹಾಸಿಕ ಶೃಂಗ ಸಮ್ಮೇಳನವು ವೀರಶೈವ-ಲಿಂಗಾಯತ ಸಮಾಜದಲ್ಲಿ ಸಾಮರಸ್ಯ, ಭಾವೈಕ್ಯತೆ ಹಾಗೂ ವಿಶ್ವಬಂಧುತ್ವದ ಸಂದೇಶವನ್ನು ಹರಡುವ ದಿಕ್ಸೂಚಿಯಾಗಿದೆ. ಎಲ್ಲಾ ಮಠಾಧೀಶರು ಹಾಗೂ ಡಾ. ಶಾಮನೂರು ಶಿವಶಂಕರಪ್ಪಾಜಿಯವರ ಸಂಘಟನಾ ದೃಢತೆ, ಸಮರ್ಪಣೆ ಹಾಗೂ ದಿಟ್ಟನಿಲುವಿನಿಂದ ಸಮಾಜದ ಒಳಪಂಗಡಗಳ ಅಂತರಗಳು ಕರಗುತ್ತ, ಏಕತೆಯ ನೂತನ ಅಧ್ಯಾಯ ಆರಂಭವಾಗಿದೆ. ಈ ಸಮ್ಮೇಳನವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಮಾನವೀಯ ಮೌಲ್ಯಗಳ ಸಮಗ್ರ ಬೆಳವಣಿಗೆಗೆ ಒಂದು ಸ್ಫೂರ್ತಿದಾಯಕ ವೇದಿಕೆಯಾಗಲಿ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment