Home ಕ್ರೈಂ ನ್ಯೂಸ್ ಪ್ರಿಯಕರ ಎಎಸ್‌ಐನನ್ನೇ ಕೊಂದು ಕಾರಿನಲ್ಲಿ ಸುಟ್ಟುಹಾಕಿದ ಮಹಿಳಾ ಹೆಡ್ ಕಾನ್‌ಸ್ಟೇಬಲ್; ಸಹೋದರ ಸೇರಿ ನಾಲ್ವರ ಬಂಧನ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯಕರ ಎಎಸ್‌ಐನನ್ನೇ ಕೊಂದು ಕಾರಿನಲ್ಲಿ ಸುಟ್ಟುಹಾಕಿದ ಮಹಿಳಾ ಹೆಡ್ ಕಾನ್‌ಸ್ಟೇಬಲ್; ಸಹೋದರ ಸೇರಿ ನಾಲ್ವರ ಬಂಧನ

Share
ಪ್ರಿಯಕರ
Share

ಅರಾವಳಿ (ಗುಜರಾತ್): ಸಹೋದ್ಯೋಗಿ ಹಾಗೂ ಪ್ರಿಯಕರನಾಗಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಮಹಿಳಾ ಹೆಡ್ ಕಾನ್‌ಸ್ಟೇಬಲ್ ಮತ್ತು ಆಕೆಯ ಮೂವರು ಸಹಚರರು ಸೇರಿ ಬರ್ಬರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಕಾರಿನೊಳಗೆ ಇಟ್ಟು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಗುಜರಾತ್‌ನ ಅರಾವಳಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳಾ ಹೆಡ್ ಕಾನ್‌ಸ್ಟೇಬಲ್ ಅಲ್ಪಾಬೆನ್ ಕಲಸ್ವಾ (37) ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಅಧಿಕಾರಿಯನ್ನು 45 ವರ್ಷದ ಎಎಸ್‌ಐ ಅಶ್ವಿನ್‌ಭಾಯ್ ತಬಿಯಾದ್ ಎಂದು ಗುರುತಿಸಲಾಗಿದೆ. ಅಲ್ಪಾಬೆನ್ ಮತ್ತು ಅಶ್ವಿನ್ ಇಬ್ಬರೂ ನೆರೆಯ ಸಬರಕಾಂತ ಜಿಲ್ಲೆಯ ಚಿಥೋಡಾ ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದ್ದು, ಇತ್ತೀಚೆಗೆ ಅಲ್ಪಾಬೆನ್ ಈ ಸಂಬಂಧವನ್ನು ಕಡಿದುಕೊಳ್ಳಲು ಬಯಸಿದ್ದರು. ಆದರೆ ಅಶ್ವಿನ್ ಸಂಬಂಧ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದ ಕಾರಣ ವೈಯಕ್ತಿಕ ದ್ವೇಷ ಉಂಟಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಹತ್ಯೆಯ ಸಂಚು: ನವೆಂಬರ್ 8ರ ರಾತ್ರಿ ಅಲ್ಪಾಬೆನ್ ಚಿಥೋಡಾದಲ್ಲಿರುವ ತನ್ನ ಬಾಡಿಗೆ ಮನೆಗೆ ಅಶ್ವಿನ್ ಅವರನ್ನು ಕರೆಸಿಕೊಂಡಿದ್ದು, ಅಲ್ಲಿಯೇ ಅವರನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.

ಸಾಕ್ಷ್ಯ ನಾಶಕ್ಕೆ ಯತ್ನ: ಮರುದಿನ ಬೆಳಿಗ್ಗೆ ಅಲ್ಪಾಬೆನ್ ತನ್ನ ಸಹೋದರ ಕಲ್ಪೇಶ್‌ಭಾಯ್ ಕಲಸ್ವಾ (36) ಮತ್ತು ಸೋದರಸಂಬಂಧಿ ಪಂಕಜ್‌ಕುಮಾರ್ ಕಲಸ್ವಾ (28) ಅವರ ಸಹಾಯದಿಂದ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಮನೆಯಲ್ಲಿ ಬಚ್ಚಿಟ್ಟಿದ್ದರು. ಬಳಿಕ ಅಶ್ವಿನ್ ಅವರ ಮಾರುತಿ ಎರ್ಟಿಗಾ ಕಾರನ್ನು ಹತ್ಮತಿ ನದಿಯ ಬಳಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು, ಕಲ್ಪೇಶ್ ಸ್ನೇಹಿತ ಮನೋಜ್‌ಕುಮಾರ್ ನಿನಾಮಾ (33) ಜೊತೆಗೂಡಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ.

ಆರೋಪಿಗೆ ಸುಟ್ಟ ಗಾಯ: ಕಾರಿಗೆ ಬೆಂಕಿ ಹಚ್ಚುವ ವೇಳೆ ಜ್ವಾಲೆ ಏಕಾಏಕಿ ವ್ಯಾಪಿಸಿದ ಪರಿಣಾಮ ಪ್ರಮುಖ ಆರೋಪಿ ಅಲ್ಪಾಬೆನ್ ಮುಖ, ಕೈ ಮತ್ತು ದೇಹಕ್ಕೆ ಸುಟ್ಟ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?: ನವೆಂಬರ್ 10ರಂದು ಭಿಲೋಡಾ ಪ್ರದೇಶದಲ್ಲಿ ಸುಟ್ಟು ಕರಕಲಾದ ಎರ್ಟಿಗಾ ಕಾರಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿತ್ತಾದರೂ, ಮೃತರ ಸಹೋದರ ಸಿದ್ಧರಾಜ್ ತಬಿಯಾದ್ ನೀಡಿದ ದೂರಿನ ಮೇರೆಗೆ ನವೆಂಬರ್ 16ರಂದು ಕೊಲೆ ಪ್ರಕರಣ ದಾಖಲಿಸಲಾಯಿತು.

ಅರಾವಳಿ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿಂಹ ಜಡೇಜಾ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪೊಲೀಸರು, ಸುತ್ತಮುತ್ತಲಿನ ಪಟ್ಟಣಗಳ ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಮಾಹಿತಿ ಮತ್ತು ಸ್ಥಳೀಯರ ಸುಳಿವಿನ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿದ್ದಾರೆ. ಮೃತದೇಹದ ಗುರುತು ದೃಢಪಡಿಸಲು ಡಿಎನ್‌ಎ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವಿಚಾರಣೆ ವೇಳೆ ನಾಲ್ವರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಇಕೋ ಕಾರನ್ನು ಜಪ್ತಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Share
Related Articles