SUDDIKSHANA KANNADA NEWS/ DAVANAGERE/ DATE:15_07_2025
ದಾವಣಗೆರೆ: ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಮುಂಗಾರು ಬೆಳೆಗೆ ಭದ್ರಾ ಡ್ಯಾಂನಿಂದ ನೀರು ಹರಿಸುವ ಕುರಿತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯು ಜುಲೈ 21ರಂದು ನಡೆಯಲಿದೆ.
READ ALSO THIS STORY: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!
87ನೇ ನೀರಾವರಿ ಸಲಹಾ ಸಮಿತಿಯ ಸಭೆಯು ಅಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಮುಂಗಾರು ವೇಳೆಗೆ ನೀರು ಹರಿಸಲು ದಿನಾಂಕವನ್ನು ನಿರ್ಧರಿಸುವ ಕುರಿತಂತೆ ಅಗತ್ಯ ಸಲಹೆಗಳನ್ನು ನೀಡುವಂತೆ ಕೋರಲಾಗಿದೆ.
ಸಭೆಯಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟಿನ 2025-25ನೇ ಸಾಲಿನಮುಂಗಾರು ಬೆಳೆಗೆ ಪ್ರಸ್ತುತ ಜಲಾಶಯದ ನೀರಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀರು ಹರಿಸುವ ಕುರಿತಂತೆ ವಿಸ್ತೃತವಾಗಿ ಚರ್ಚೆಯಾಗಲಿದೆ. ಅಧ್ಯಕ್ಷರ ಅಪ್ಪಣೆಯ
ಮೇರೆಗೆ ಇತರೆ ವಿಷಯಗಳ ಕುರಿತಂತೆಯೂ ಚರ್ಚೆಯಾಗಲಿದೆ.
READ ALSO THIS STORY: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ
ಭದ್ರಾ ಡ್ಯಾಂ ಬಳಿ ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ. ಅಜ್ಜಂಪುರ, ಕಡೂರು, ಹೊಸದುರ್ಗ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿರುವುದಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಆಕ್ರೋಶ ಹೊರ ಹಾಕಿದ್ದು, ಪ್ರತಿಭಟನೆ ಜೋರುಗೊಳಿಸಿದ್ದಾರೆ.
ದಾವಣಗೆರೆ ನಗರ ಬಂದ್, ಪ್ರತಿಭಟನೆ, ಮುತ್ತಿಗೆ, ಸಿಎಂ, ಡಿಸಿಎಂ ನಿವಾಸಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ನಡೆಸಲಾಗಿದೆ. ಹಾಗಾಗಿ, ದಾವಣಗೆರೆ ಜಿಲ್ಲೆಯ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದರೆ ಭದ್ರಾ ಬಲದಂಡೆ ನಾಲೆ ಸೀಳಿ ನೀರು ಕೊಂಡೊಯ್ಯುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಲಿದೆ. ಅದೇ ರೀತಿಯಲ್ಲಿ ಮುಂಗಾರು ಬೆಳೆಗೆ ಆದಷ್ಟು ಬೇಗ ನೀರು ಒದಗಿಸುವಂತೆ ಒತ್ತಾಯ ಮಾಡುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಭದ್ರಾ ಹಿನ್ನೀರಿನ ಮೂಲಕ ನೀರು ಒದಗಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದರೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದು ಯಾಕೆ ಎಂಬ ಪ್ರಶ್ನೆ ಕೇಳಿ ಬರಲಿದ್ದು, ಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಜಿಲ್ಲೆಯ ಶಾಸಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.