SUDDIKSHANA KANNADA NEWS/ DAVANAGERE/ DATE_12-07_2025
ದಾವಣಗೆರೆ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು
ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ
ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ. ಈ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ
ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ ಎಂದರು.
ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಳನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.