ಮೋರ್ಬಿ: ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ 22 ವರ್ಷದ ವಿವಾಹಿತನೊಬ್ಬನನ್ನು ಇನ್‌ಸ್ಟಾಗ್ರಾಮ್ ಮೂಲಕ ಹನಿಟ್ರ್ಯಾಪ್‌ಗೆ ಕೆಡವಿ, ಆರಂಭದಲ್ಲಿ 50 ಲಕ್ಷ ರೂ. ಮತ್ತು ನಂತರ 12 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಾಜಲ್‌ಬೆನ್ ಪರ್ಮಾರ್ ಎಂಬಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಾಷ ಕೋರಿ ಪರಿಚಯ ಬೆಳೆಸಿ, ಈ ಕೃತ್ಯ ಎಸೆಗಿದ್ದಾಳೆ.
ಮದುವೆ ವಾರ್ಷಿಕೋತ್ಸವದ ದಿನದಂದು ಕಾಜಲ್ ಪರ್ಮಾರ್ ಯುವಕನಿಗೆ ಸಂದೇಶ ಕಳುಹಿಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಕ್ರಮೇಣ ಮಾತುಕತೆ ನಡೆಸಿ ಪ್ರೇಮದ ಬಲೆಗೆ ಕೆಡವಿದ್ದಾಳೆ. ನಂತರ ವೀಡಿಯೊ ಕಾಲ್ ಮಾಡಿ, ಮಹತ್ವದ ವಿಷಯ ಮಾತನಾಡಬೇಕಿದೆ ಎಂದು ನವೆಂಬರ್ 4 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫನ್ ಹೋಟೆಲ್‌ನಲ್ಲಿ ಭೇಟಿಯಾಗುವಂತೆ ಆಹ್ವಾನಿಸಿದ್ದಾಳೆ. ಮರುದಿನ ಯುವಕನಿಗೆ ಕರೆ ಮಾಡಿದ ಆಕೆ, ನಮ್ಮ ಭೇಟಿಯ ಬಗ್ಗೆ ತನ್ನ ಸಹೋದರನಿಗೆ ತಿಳಿದಿದೆ ಎಂದು ಹೇಳಿ ಹೆದರಿಸಿದ್ದಾಳೆ.
ಹನಿಟ್ರ್ಯಾಪ್ ಸಂಚು: ಕಾಜಲ್ ಸಹೋದರನೆಂದು ಪರಿಚಯಿಸಿಕೊಂಡ ಕಿಸನ್ ಅಲಿಯಾಸ್ ರಾಜುಭಾಯ್ ಮುಚ್ಚಾಡಿಯಾ ಎಂಬಾತ ಯುವಕನನ್ನು ಬೆದರಿಸಿ ರಾಜಿ ಮಾಡಿಕೊಳ್ಳಲು ಬಲವಂತಪಡಿಸಿದ್ದಾನೆ.
ಹಣಕ್ಕೆ ಬೇಡಿಕೆ: ಆರಂಭದಲ್ಲಿ 50 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದ್ದು, ನಂತರ ಅದನ್ನು 12 ಲಕ್ಷ ರೂ.ಗೆ ಇಳಿಸಲಾಗಿತ್ತು. ಹಣ ನೀಡದಿದ್ದಾಗ ಆರೋಪಿಗಳು ಯುವಕನ ಮನೆಗೆ ತೆರಳಿ ಬೆದರಿಕೆ ಹಾಕಿದ್ದಾರೆ.
ಆರೋಪಿಗಳ ಬಂಧನ: ಯುವಕನ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ರಾಜುಭಾಯ್ ಅಲಿಯಾಸ್ ಕಿಸನ್ ಮುಚ್ಚಾಡಿಯಾ, ತೇಜಸ್‌ಭಾಯ್ ಅಲಿಯಾಸ್ ತೇಜೋ ಪಧಾರಿಯಾ, ಭೀಮ್‌ಜಿಭಾಯ್ ಪರ್ಮಾರ್ ಮತ್ತು ಕಾಜಲ್‌ಬೆನ್ ಪರ್ಮಾರ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಐದನೇ ಆರೋಪಿ ಭಾವೇಶ್ ಕಂಜಾರಿಯಾ ಪತ್ತೆಗೆ ಶೋಧ ಮುಂದುವರಿದಿದೆ.
ಸಂತ್ರಸ್ತ ಯುವಕನ ದೂರಿನ ಆಧಾರದ ಮೇಲೆ ಮೋರ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





Leave a comment