ದಾವಣಗೆರೆ: ದಾವಣಗೆರೆ ನಗರದ ಆಸ್ತಿ ಮಾಲೀಕರಿಗೆ ಇ-ಖಾತಾ ಸೇವೆಯನ್ನು ಸರಳವಾಗಿ, ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಒದಗಿಸುವ ಉದ್ದೇಶದಿಂದ ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ನವೆಂಬರ್ 18ರಿಂದ ಬೃಹತ್ ಇ-ಆಸ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಮರ್ಥ್ ಶಾಮನೂರು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಮೂರು ವಲಯ ಕಚೇರಿಗಳಲ್ಲಿ ಪ್ರತಿದಿನ ಬೆಳಿಗ್ಗೆ 10:30ರಿಂದ ಸಂಜೆ 4 ಗಂಟೆಯವರೆಗೆ ಅಭಿಯಾನ ನಡೆಯಲಿದ್ದು, ಇ-ಖಾತಾ ಹೊಂದಿರದ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ ಹಾಗೂ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡು, ಯಾವುದೇ ಲೋಪದೋಷಗಳಿಲ್ಲದ ಅರ್ಹ ಅರ್ಜಿಗಳಿಗೆ ಸಂಪೂರ್ಣ ಅರ್ಜಿ ಸ್ವೀಕೃತಿಯಾದ ದಿನದಿಂದ 72 ಗಂಟೆಗಳೊಳಗೆ ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 96,143 ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗಿದ್ದು, ಒಂದು ಲಕ್ಷ ಇ-ಖಾತಾ ವಿತರಣೆಯ ಮಹತ್ವದ ಮೈಲಿಗಲ್ಲಿನತ್ತ ಹೆಜ್ಜೆ ಇಡಲಾಗುತ್ತಿದೆ ಎಂದರು.
ಸಾರ್ವಜನಿಕರು ತಮ್ಮ ಆಸ್ತಿಯ ಕರಡು ಇ-ಖಾತಾವನ್ನು https://eaasthi.karnataka.gov.in/ ವೆಬ್ಸೈಟ್ನಲ್ಲಿ ಪರಿಶೀಲಿಸಿಕೊಂಡು, ಅಗತ್ಯ ದಾಖಲೆಗಳು ಹಾಗೂ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಂಬಂಧಪಟ್ಟ ವಲಯ ಕಚೇರಿಗೆ ಭೇಟಿ ನೀಡಿ ಈ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಜನಸ್ನೇಹಿ ಆಡಳಿತಕ್ಕೆ ಆದ್ಯತೆ:
ದಾವಣಗೆರೆ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಕಾರ್ಯನಿರ್ವಹಣೆ, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳು ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತಂತೆ ಶಾಸಕ ಸಮರ್ಥ್ ಶಾಮನೂರು ಚರ್ಚಿಸಿದರು.
ಆಸ್ತಿ ತೆರಿಗೆ, ಇ-ಖಾತಾ ವಿತರಣೆ, ಆಸ್ತಿ ದಾಖಲೆಗಳ ನಿರ್ವಹಣೆ, ಖಾತಾ ವರ್ಗಾವಣೆ ಹಾಗೂ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಸಾರ್ವಜನಿಕರು ತಮ್ಮ ಆಸ್ತಿ ಮತ್ತು ಕಂದಾಯ ಸಂಬಂಧಿತ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ಉಂಟಾಗಬಾರದು. ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ಸರಳವಾಗಿದ್ದು, ಜನರಿಗೆ ನಿಗದಿತ ಅವಧಿಯಲ್ಲಿ ಸೇವೆಗಳು ದೊರೆಯುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ವಿಶೇಷವಾಗಿ ನವೆಂಬರ್ 18 ರಿಂದ ಇ-ಖಾತಾ ಅಭಿಯಾನ ಪ್ರಾರಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸೇವೆಗಳನ್ನು ಮತ್ತಷ್ಟು ಸುಗಮಗೊಳಿಸುವುದು, ದಾಖಲೆಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸುವ ಅಗತ್ಯದ ಕುರಿತು ಚರ್ಚಿಸಿದರು.
ಪಾರದರ್ಶಕ ಆಡಳಿತ, ಸಮಯೋಚಿತ ಸೇವೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆಯ ಮೂಲಕ ಜನಸ್ನೇಹಿ ಮಹಾನಗರಪಾಲಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳು ಹಾಜರಿದ್ದರು.





Leave a comment