Home ದಾವಣಗೆರೆ ಸಿಜೆರಿಯನ್ ತಗ್ಗಿಸಲು ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್!
ದಾವಣಗೆರೆಬೆಂಗಳೂರು

ಸಿಜೆರಿಯನ್ ತಗ್ಗಿಸಲು ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್!

Share
ಪ್ರಭಾ ಮಲ್ಲಿಕಾರ್ಜುನ್
Share

​ದಾವಣಗೆರೆ: ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ನಡೆಯುವ ಸಿಜೆರಿಯನ್ ಹೆರಿಗೆಗಳನ್ನು ಗಣನೀಯವಾಗಿ ತಗ್ಗಿಸಲು ಮತ್ತು ವಿವಿಧ ಲ್ಯಾಬ್ ಗಳಲ್ಲಿನ ಪರೀಕ್ಷಾ ವರದಿಗಳ ವ್ಯತ್ಯಾಸಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಸರ್ಜನ್ ಜಂಟಿಯಾಗಿ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡುವಂತೆ ಸಂಸದೆ ಡಾ: ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದರು.

​ಸಭೆಯಲ್ಲಿ 2026-27ನೇ ಸಾಲಿನ ಅಕ್ಟೋಬರ್ ಅಂತ್ಯದವರೆಗೆ ವಿವಿಧ ಇಲಾಖೆಗಳು ಸಾಧಿಸಿರುವ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಪರಾಮರ್ಶಿಸಲಾಯಿತು.

ಸಿಜೆರಿಯನ್ ಅಂಕಿ ಅಂಶಗಳನ್ನು ಅವಲೋಕಿಸಿದಾಗ ದಿನದ ಅವಧಿಯಲ್ಲಿ ಹೆಚ್ಚು ಸಿಜೆರಿಯನ್ ಆಗಿದ್ದು ಇವು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆಚ್ಚಿವೆ. ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ಸಾಮಾನ್ಯ ಹೆರಿಗೆಗೆ ಒತ್ತು ನೀಡಬೇಕು, ಇದರಿಂದ ಮಹಿಳೆಯರ ಆರೋಗ್ಯವು ಉತ್ತಮವಾಗಿರಲಿದೆ ಎಂದ ಅವರು ಸಿಜಿ ಆಸ್ಪತ್ರೆ ಹಾಗೂ ಹೊರಗಿನ ಲ್ಯಾಬ್ ಗಳಲ್ಲಿನ ಟೆಸ್ಟಿಂಗ್ ವರದಿಗಳನಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು ಪರಿಶೀಲನೆ ನಡೆಸಲು ಜಿಲ್ಲಾ ಸರ್ಜನ್ ಗೆ ಸೂಚಿಸಿದರು.

ಶುದ್ದ ಕುಡಿಯುವ ನೀರು ಪೂರೖಕೆಗೆ ಸೂಚನೆ:

ಗ್ರಾಮ ಪಂಚಾಯಿತಿಗಳು ಸ್ವಚ್ಚತೆ ಕಾಪಾಡಿಕೊಂಡು ಶುದ್ದ ನೀರು ಪೂರೖಕೆಗೆ ಕ್ರಮ ಕೖಗೊಳ್ಳಬೇಕು. ಆರ್. ಓ ಘಟಕಗಳ ಬಳಿ ಮತ್ತು ಪೈಪ್ ಲೈನ್ ಗಳಲ್ಲಿ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಪೈಪ್ ಲೈನ್ ನಲ್ಲಿ ನೀರು ಲೀಕೇಜ್ ಆಗಿ, ಅದೇ ನೀರು ಪುನಃ ಪೈಪ್ ಲೈನ್ ಗೆ ಸೇರಿಕೊಳ್ಳುತ್ತದೆ. ಇತ್ತೀಚೆಗೆ ಕಲ್ಲೇದೇವಪುರ ಗ್ರಾಮಕ್ಕೆ ಚರಂಡಿ ಕಾಮಗಾರಿಗೆ ಚಾಲನೆ ನೀಡಲು ಹೋದಾಗ ಪೈಪ್ ಹೊಡೆದು ಸುತ್ತಲೂ ಕಲುಷಿತವಾಗಿರುವುದನ್ನು ಕಂಡಿದ್ದು ಪಂಚಾಯಿತಿ ಅಧಿಕಾರಿಗಳು ಇವೆಲ್ಲವನ್ನು ಪರಿಶೀಲಿಸಲು ತಾಕೀತು ಮಾಡಲು ಸಿಇಓಗೆ ತಿಳಿಸಿದರು. ಈವೇಳೆ ಸಿಇಓ ಅವರು ನೀರಿನ ಟೆಸ್ಟ್ ಮಾಡುತ್ತಿರುವ ಬಗ್ಗೆ ವಿವರಿಸಿದರು.

ಮನೆ ನಿರ್ಮಾಣ ಮೊತ್ತ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯ:

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ನೀಡಲಾಗುವ ಸಹಾಯಧನ ತೀರಾ ಕಡಿಮೆಯಾಗಿದೆ. ಇದಕ್ಕೆ ಪೂರಕವಾಗಿ ಸ್ವಚ್ಛ ಭಾರತ್ ಮಿಷನ್ ಹಾಗೂ ಬಿವಿಜಿ ರಾಮ್ ಜಿ ಯೋಜನೆಯಡಿ 90 ದಿನಗಳ ಸಹಾಯಧನ ನೀಡಲು ಲಿಂಕ್ ಮಾಡಿ ಎಂದ ಅವರು ಈ ಬಗ್ಗೆ ಸಂಸತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಗಮನ ಸೆಳೆಯಲಿದ್ದು ಅಂಕಿ ಅಂಶಗಳನ್ನು ಒದಗಿಸಲು ತಿಳಿಸಿದರು.

ಸಂಚಾರಿ ನಿಯಮಗಳ ಅನುಷ್ಟಾನಕ್ಕೆ ಸೂಚನೆ:

ಅಪ್ರಾಪ್ತ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಟ್ರಿಪ್ಪಲ್ ರೖಡಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲು ಜಾಗೖತಿ ಮೂಡಿಸಿ ನಂತರ ಕಾನೂನು ಕ್ರಮ ಕೖಗೊಳ್ಳಲು ಸಂಸದರು ಪೊಲೀಸ್ ಇಲಾಖೆಗೆ ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ ಅವರು ಎಸ್. ಪಿ ಅವರೊಂದಿಗೆ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೖತಿ ಮೂಡಿಸಿ, ನಂತರ ಸಂಚಾರಿ ನಿಯಮಗಳ ಅನುಷ್ಟಾನ ಮಾಡಲಾಗುತ್ತದೆ ಎಂದರು.
ಶಾಸಕರು ಈ ವೇಳೆ ಪ್ರಸಸ್ತಾಪಿಸಿ ತಾಲ್ಲೂಕಿನಲ್ಲಿ ಈ ಹಿಂದೆ ಬ್ಯಾಂಕ್ ನಿಂದ ಕಳ್ಳತನ ಮಾಡಿದ ಬಂಗಾರ, ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮ ಕೆಲಸ ಮಾಡಿದೆ. ಆದರೆ ಜೂಜು, ಗಾಂಜಾ ಹಾವಳಿ ಹೆಚ್ಚಿದ್ದು ಕೆಳ ಹಂತದ ಪೊಲೀಸ್ ಸಿಬ್ಬಂದಿಗಳು ಇದಕ್ಕೆ ಸಹಕಾರ ನೀಡುತ್ತಿದ್ದು ನಿಯಂತ್ರಿಸಬೇಕೆಂದು ಒತ್ತಾಯಿಸಿದರು.

ವಿಶೇಷಚೇತನರು ವಡ್ನಹಳ್ಳಿ ಸಿಆರ್ ಸಿಗೆ ಭೇಟಿ ನೀಡಿ:

ದಾವಣಗೆರೆ ತಾ. ವಡ್ನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಸಿಆರ್ ಸಿ ಕೇಂದ್ರಕ್ಕೆ ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಭೇಟಿ ನೀಡಬೇಕು. ಅಲ್ಲಿ ನುರಿತ ತಜ್ಞರು ಇದ್ದು ವಿಶೇಷಚೇತನರಿಗೆ ಅಗತ್ಯವಿರುವ ಚಿಕಿತ್ಸೆ ಮತ್ತು ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು, ಈ ವೇಳೆ ಹೊನ್ನಾಳಿ ಶಾಸಕರಾದ ಡಿ. ಜಿ. ಶಾಂತನಗೌಡರು ತಾಲ್ಲೂಕಿನ ಪಟ್ಟಿ ಸಿದ್ದಪಡಿಸಿ ಅರ್ಹರನ್ನು ಕಳುಹಿಸಿಕೊಡಲಾಗುತ್ತದೆ ಎಂದರು.

ಡಿಸೆಂಬರ್ ಅಂತ್ಯದೊಳಗೆ ಗುಂಡಿ ಮುಚ್ಚಿ:

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಹರಿಹರ- ಮಲೆಬೆನ್ನೂರು ರಸ್ತೆ ಅಂಡರ್ ಪಾಸ್ ಹತ್ತಿರ ಗುಂಡಿಗಳಿದ್ದು ಇದನ್ನು ಎನ್ ಹೆಚ್ ಎ. ಐ ಅಧಿಕಾರಿಗಳು ಕ್ರಮ ಕೖಗೊಳ್ಳಬೇಕೆಂದಾಗ ಅದನ್ನು ಪ್ರಾಧಿಕಾರದಿಂದಲೇ ರಸ್ತೆ ನಿರ್ಮಿಸಲಾಗುತ್ತದೆ ಎಂದರು.

​ಕೃಷಿ ಮತ್ತು ತೋಟಗಾರಿಕೆ ಇಲಾಖೆ:

​ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ 1,31,381 ರೈತ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು ₹698.98 ಕೋಟಿ ಪಾವತಿಸಲಾಗಿದೆ.

​ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಸೂಕ್ಷ್ಮ ನೀರಾವರಿ (PMKSY-MI) ಅಡಿಯಲ್ಲಿ 3,076 ಹೆಕ್ಟೇರ್ ಗುರಿಗೆ 3,009 ಹೆಕ್ಟೇರ್ (ಶೇ. 98) ಸಾಧನೆಯಾಗಿದ್ದು, ₹340.14 ಲಕ್ಷ ವೆಚ್ಚ ಮಾಡಲಾಗಿದೆ.

​ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಒಟ್ಟು 6,422 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಬಿಡುಗಡೆಯಾದ ₹1,352.37 ಲಕ್ಷ ಅನುದಾನದಲ್ಲಿ ₹1,231.25 ಲಕ್ಷ (ಶೇ. 91.04) ವೆಚ್ಚವಾಗಿದೆ.

​ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (JJM):

​ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಅನುಮೋದನೆಯಾದ ಒಟ್ಟು 876 ಕಾಮಗಾರಿಗಳ ಪೈಕಿ 735 ಕಾಮಗಾರಿಗಳು ಪೂರ್ಣಗೊಂಡಿವೆ (ಶೇ. 83.90).

​2,59,132 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿಯಲ್ಲಿ 2,40,336 ಮನೆಗಳಿಗೆ (ಶೇ. 92.75) ನೀರಿನ ಸಂಪರ್ಕ ನೀಡಲಾಗಿದ್ದು, ₹658.13 ಕೋಟಿ ಅನುದಾನದಲ್ಲಿ ₹460.85 ಕೋಟಿ ವೆಚ್ಚವಾಗಿದೆ.

​ಜಿಲ್ಲೆಯಲ್ಲಿರುವ 799 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 673 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬಾಕಿ 126 ಘಟಕಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ.

​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:

​ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಿಡುಗಡೆಯಾದ ₹2,419.82 ಲಕ್ಷ ಅನುದಾನದಲ್ಲಿ ₹1,603.46 ಲಕ್ಷ (ಶೇ. 66) ವೆಚ್ಚವಾಗಿದೆ.

​ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 12,249 ಹೆರಿಗೆಗಳಾಗಿದ್ದು, ನವಜಾತ ಶಿಶುಗಳಿಗೆ BCG (ಶೇ. 102) ಹಾಗೂ ಸಂಪೂರ್ಣ ಲಸಿಕಾಕರಣದಲ್ಲಿ ಶೇ. 111ರಷ್ಟು ಪ್ರಗತಿ ಸಾಧಿಸಲಾಗಿದೆ.
​ಶಾಲಾ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ 77,975 ಮಕ್ಕಳ ಪೈಕಿ 76,708 ಮಕ್ಕಳ ತಪಾಸಣೆ (ಶೇ. 98) ಪೂರ್ಣಗೊಂಡಿದೆ.

​ಶಾಲಾ ಶಿಕ್ಷಣ ಮತ್ತು ಅಕ್ಷರ ದಾಸೋಹ:

​ಜಿಲ್ಲೆಯಲ್ಲಿ 1,041 ಸರ್ಕಾರಿ ಪ್ರಾಥಮಿಕ ಮತ್ತು 135 ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 1,959 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

​ಪ್ರಧಾನ ಮಂತ್ರಿ ಪೋಷಣ್ (ಅಕ್ಷರ ದಾಸೋಹ) ಯೋಜನೆಯಡಿ ಜಿಲ್ಲೆಯ 1,476 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1,27,242 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ.

​ಶಾಲೆಯಿಂದ ಹೊರಗುಳಿದ 1,047 ಮಕ್ಕಳನ್ನು ಗುರುತಿಸಲಾಗಿದ್ದು, ಈ ಪೈಕಿ 93 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ.

​ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

​ಜಿಲ್ಲೆಯ 1,771 ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ 1,19,820 ಫಲಾನುಭವಿಗಳಿಗೆ (ಶೇ. 97) ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ.

​ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ 7,463 ಫಲಾನುಭವಿಗಳಿಗೆ ₹393.90 ಲಕ್ಷ ಅನುದಾನವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಿ ಶೇ. 100ರಷ್ಟು ಗುರಿ ಸಾಧಿಸಲಾಗಿದೆ.

​ಮಹಾತ್ಮ ಗಾಂಧಿ ನರೇಗಾ ಮತ್ತು ವಸತಿ ಯೋಜನೆಗಳು:

​ನರೇಗಾ ಯೋಜನೆಯಡಿ ಅಕ್ಟೋಬರ್ ಅಂತ್ಯದವರೆಗೆ 10.91 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, 26,660 ಕುಟುಂಬಗಳ 41,419 ಕೂಲಿಕಾರರಿಗೆ ಉದ್ಯೋಗ ನೀಡಲಾಗಿದೆ. ಇದಕ್ಕಾಗಿ ಒಟ್ಟು ₹5,412.62 ಲಕ್ಷ (₹54.12 ಕೋಟಿ) ವೆಚ್ಚ ಭರಿಸಲಾಗಿದೆ.
​ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ಮಂಜೂರಾದ 3,376 ಮನೆಗಳ ಪೈಕಿ 2,472 ಮನೆಗಳು ಪೂರ್ಣಗೊಂಡಿವೆ. ಗ್ರಾಮೀಣ ವಸತಿ ಯೋಜನೆಗಳಡಿ (PMAY-G, ಅಂಬೇಡ್ಕರ್ ಮತ್ತು ಬಸವ ವಸತಿ) ಒಟ್ಟು 2,371 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ.

​ಬೆಸ್ಕಾಂ ದಾವಣಗೆರೆ ಮತ್ತು ಹರಿಹರ ವಿಭಾಗಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 727 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

​ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 27,349 ಸಾಲ ಮಂಜೂರಾಗಿದ್ದು, 26,623 ಫಲಾನುಭವಿಗಳಿಗೆ (ಶೇ. 97.35) ಸಾಲ ವಿತರಿಸಲಾಗಿದೆ.

​ಕೆ.ಎಸ್.ಆರ್.ಟಿ.ಸಿ ಶಕ್ತಿ ಯೋಜನೆಯಡಿ ಜೂನ್ 2023 ರಿಂದ ಅಕ್ಟೋಬರ್ 2026 ರವರೆಗೆ ಜಿಲ್ಲೆಯಲ್ಲಿ ಒಟ್ಟು 17.48 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಒಟ್ಟು ಪ್ರಯಾಣ ದರ ₹523.28 ಕೋಟಿಗಳಾಗಿವೆ.

​ಬಸ್ ನಲ್ಲಿ ಸೀಟುಕೊಡಿ: ನಿಗಮದ ಬಸ್ ಗಳಲ್ಲಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಮಿಸಲಾದ ಆಸನಗಳಲ್ಲಿ ಮೀಸಲು ವರ್ಗದವರು ಬಸ್ ನಲ್ಲಿ ಇದ್ದಾಗ ಆಸನಗಳನ್ನು ಕೊಡಿಸುವ ಕೆಲಸವನ್ನು ಕೆಎಸ್ ಆರ್ ಟಿಸಿ ಅಧಿಕಾರಿಗಳು ಮಾಡಬೇಕು, ಮಾಡದಿದ್ದಲ್ಲಿ ಕ್ರಮ ಕೖಗೊಳ್ಳಲು ಈ ಬಗ್ಗೆ ನಿಗಮದಿಂದ ಸುತ್ತೋಲೆ ಹೊರಡಿಸಲು ತಿಳಿಸಿದ ಸಂಸದರು ಕೖಗೊಂಡ ಕ್ರಮದ ಬಗ್ಗೆ ಮುಂದಿನ ಸಭೆಯಲ್ಲಿ ತಿಳಿಸಲು ಸಾರಿಗೆ ನಿಗಮದ ಅಧಿಕಾರಿಗಳಿಗೆ ತಿಳಿಸಿದರು.

ಇ ಸ್ವತ್ತು ಅನ್ನು ಸರ್ಕಾರಿ ಶಾಲಾ ಕಾಲೇಜು ಗಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಆದುದರಿಂದ ದಾನವಾಗಿ ಬಂದಂತಹ ಸ್ವತ್ತನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಡಿಸೆಂಬರ್ 15 ರೊಳಗೆ ಇ ಸ್ವತ್ತು ನೀಡಲು ಕ್ರಮವಹಿ ಸಬೇಕು.

ಕೆಲವರು ಇ ಸ್ವತ್ತು ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿರುತ್ತಾರೆ ಅಂತಹ ಪ್ರಕರಣಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಾಗುವುದು ಎಂದರು.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬಳಿ ಮೊದಲೇ ಮನೆಗಳು ನಿರ್ಮಿಸಿದ್ದಲ್ಲಿ ಅಂತಹ ಮನೆಗಳಿಗೆ ಇ ಸ್ವತ್ತನ್ನು ನೀಡಬಹುದು ಹೊಸದಾಗಿ ನಿರ್ಮಿಸುವ ಮನೆಗಳಿಗೆ ಸ್ಥಳ ಬಿಟ್ಟು ನಿರ್ಮಿಸಲು ಷರತ್ತು ವಿಧಿಸಿ ಈ ಸ್ವತ್ತು ನೀಡಬೇಕು ಸರ್ಕಾರವು ಎಲ್ಲರಿಗೂ ಇ ಸ್ವತ್ತು ನೀಡಲು ವಿಶೇಷ ಅಭಿಯಾನ ಆರಂಭಿಸಿದೆ ಎಂದರು.

ವಿದ್ಯಾರ್ಥಿಗಳಿಗೆ ಶಿಕ್ಷಣದ ಸಾಲ ನೀಡಲು ಕೆಲವು ಬ್ಯಾಂಕುಗಳು ನಿರ್ಲಕ್ಷ ವಹಿಸುತ್ತಿರುವುದು ದೂರುಗಳು ಬರುತ್ತವೆ ಆದುದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣದ ಸಾಲ ನೀಡಲು ಎಲ್ಲಾ ಬ್ಯಾಂಕುಗಳು ಕ್ರಮವಹಿಸಬೇಕು. ಸಣ್ಣ ವ್ಯಾಪಾರ ಸ್ಟಾರ್ಟ್ ಅಪ್ ಹಾಗೂ ಎಸ್ ಎಸ್ ಜಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಹಿಂದೇಟು ಹಾಕಬಾರದು ಇಂತಹ ಸಂಸ್ಥೆಗಳಿಗೆ ಸಾಲ ನೀಡಿದಲ್ಲಿ ಆರ್ಥಿಕವಾಗಿ ಸಬಲರಾಗಲು ಕಾರಣವಾಗುತ್ತೀರಾ? ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡುವಂತೆ ತಿಳಿಸಿದರು

ಸಭೆಯಲ್ಲಿ ಶಾಸಕರಾದ ಡಿ. ಜಿ. ಶಾಂತನಗೌಡ, ಡಿ. ಸಿ. ಗಂಗಾಧರಸ್ವಾಮಿ ಜಿ. ಎಂ, ಸಿ. ಇ. ಓ ಸಾಹಿತ್ಯ ಎಂ. ಆಲದಕಟ್ಟಿ, ಹೆಚ್ಚುವರಿ ರಕ್ಷಣಾಧಿಕಾರಿ ಪರಮೇಶ್ವರ ಹೆಗಡೆ, ಡಿಎಫ್ಓ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ದಿಶಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles