Home ಕ್ರೈಂ ನ್ಯೂಸ್ ಕೃಷಿ ತ್ಯಾಜ್ಯ ಮತ್ತು ದಾರಿ ವಿಚಾರದ ಜಗಳ: ಯೂಟ್ಯೂಬರ್ ಮೀನು ರಾಜ್ ಮನೆಗೆ ನುಗ್ಗಿ 20 ಜನರ ಗುಂಪಿನಿಂದ ಮಾರಣಾಂತಿಕ ಹಲ್ಲೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೃಷಿ ತ್ಯಾಜ್ಯ ಮತ್ತು ದಾರಿ ವಿಚಾರದ ಜಗಳ: ಯೂಟ್ಯೂಬರ್ ಮೀನು ರಾಜ್ ಮನೆಗೆ ನುಗ್ಗಿ 20 ಜನರ ಗುಂಪಿನಿಂದ ಮಾರಣಾಂತಿಕ ಹಲ್ಲೆ!

Share
ಯೂಟ್ಯೂಬರ್
Share

ಜೈಪುರ: ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯಲ್ಲಿ ಕೃಷಿ ತ್ಯಾಜ್ಯ ಹಾಗೂ ದಾರಿಯ ಹಕ್ಕಿನ ವಿಚಾರವಾಗಿ ಉಂಟಾದ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಸಾಮಾಜಿಕ ಜಾಲತಾಣದ ಪ್ರಸಿದ್ಧ ಯೂಟ್ಯೂಬರ್ ಮೀನು ರಾಜ್ ಪ್ರಜಾಪತ್ ಅವರ ಮನೆಗೆ ಸುಮಾರು 20 ಶಸ್ತ್ರಸಜ್ಜಿತ ವ್ಯಕ್ತಿಗಳು ನುಗ್ಗಿ ಕುಟುಂಬದವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಮೀನು ರಾಜ್ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರದಂತೆ, ಸರಣವಾಸ್ ಗ್ರಾಮದಲ್ಲಿರುವ ಯೂಟ್ಯೂಬರ್ ಮೀನು ರಾಜ್ ಅವರ ಮನೆಯ ಸಮೀಪದ ಜಮೀನಿನಲ್ಲಿ ಥ್ರೇಷರ್ ಬಳಸಿ ಸಜ್ಜೆ ದಂಟುಗಳನ್ನು ಕತ್ತರಿಸಲಾಗುತ್ತಿತ್ತು. ಥ್ರೇಷರ್‌ನಿಂದ ಹಾರುತ್ತಿದ್ದ ಧೂಳು ಮತ್ತು ಕೃಷಿ ತ್ಯಾಜ್ಯ ನೇರವಾಗಿ ತಮ್ಮ ಮನೆಯ ಕಡೆಗೆ ಬರುತ್ತಿದೆ ಎಂದು ಮೀನು ರಾಜ್ ಅವರ ಪತಿ ಕುಲದೀಪ್ ಅಲಿಯಾಸ್ ಕೆ.ಡಿ ಅಡ್ಡಿಪಡಿಸಿ, ಥ್ರೇಷರ್ ಬಾಯಿಯನ್ನು ಬೇರೆ ದಿಕ್ಕಿಗೆ ತಿರುಗಿಸುವಂತೆ ವಿನಂತಿಸಿದ್ದರು. ಇದೇ ವಿಚಾರವಾಗಿ ನೆರೆಹೊರೆಯವರೊಂದಿಗೆ ಮಾತಿನ ಚಕಮಕಿ ನಡೆದಿತ್ತು.

ಅದೇ ದಿನ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಕುಡಗೋಲು, ಕತ್ತಿಗಳು, ಹ್ಯಾಮರ್ ಹಾಗೂ ಲಾಠಿಗಳನ್ನು ಹಿಡಿದುಕೊಂಡು ಬಂದ ಸುಮಾರು 20 ಜನರ ದುಷ್ಕರ್ಮಿಗಳ ಗುಂಪು ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿದೆ. ಮನೆಯ ಗೇಟನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕುಟುಂಬದ ಸದಸ್ಯರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ನಾಲ್ವರಿಗೆ ಗಂಭೀರ ಗಾಯ: ಈ ಭೀಕರ ಹಲ್ಲೆಯಲ್ಲಿ ಯೂಟ್ಯೂಬರ್ ಮೀನು ರಾಜ್, ಅವರ ಪತಿ ಕುಲದೀಪ್, ತಂದೆ ಬಾಬುಲಾಲ್ ಪ್ರಜಾಪತ್ ಹಾಗೂ ಬಾವ ಧನ್‌ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ಕಿಶನ್‌ಗಢಬಾಸ್ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಲ್ವಾರ್‌ನ ರಾಜೀವ್ ಗಾಂಧಿ ಸಾಮಾನ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೆ: ಹಲ್ಲೆಯ ಬಳಿಕ ಮೀನು ರಾಜ್ ಹಾಗೂ ಅವರ ಕುಟುಂಬದವರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.

ಪೊಲೀಸ್ ತನಿಖೆ ಆರಂಭ: ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles