Home ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಫ್ರೆಶರ್ಸ್ ಡೇ – 2026 ಸಂಭ್ರಮ: ‘ವಿಜ್ಞಾನ ಪದವಿಯು ಹೊಸ ಅಧ್ಯಾಯದ ಆರಂಭ’ ಎಂದ್ರು ಕುಲಪತಿ ಡಾ. ಎಚ್. ಆರ್. ಮಹಾದೇವಸ್ವಾಮಿ
ದಾವಣಗೆರೆನವದೆಹಲಿಬೆಂಗಳೂರು

ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಫ್ರೆಶರ್ಸ್ ಡೇ – 2026 ಸಂಭ್ರಮ: ‘ವಿಜ್ಞಾನ ಪದವಿಯು ಹೊಸ ಅಧ್ಯಾಯದ ಆರಂಭ’ ಎಂದ್ರು ಕುಲಪತಿ ಡಾ. ಎಚ್. ಆರ್. ಮಹಾದೇವಸ್ವಾಮಿ

Share
ವಿಶ್ವವಿದ್ಯಾಲಯ
Share

ದಾವಣಗೆರೆ : ನಗರದ ಪಿ.ಬಿ. ರಸ್ತೆಯಲ್ಲಿರುವ ಶ್ರೀಶೈಲ ಎಜುಕೇಷನಲ್ ಟ್ರಸ್ಟ್‌ನ ಜಿ.ಎಂ. ವಿಶ್ವವಿದ್ಯಾಲಯದ ‘ಮೂಲ ಮತ್ತು ಅನ್ವಯಿಕ ವಿಜ್ಞಾನಗಳ ವಿಭಾಗ’ದ (Faculty of Basic and Applied Sciences) ವತಿಯಿಂದ ನವೆಂಬರ್ 2026-27ನೇ ಸಾಲಿನ ನೂತನ ಬಿ.ಎಸ್ಸಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬಿ.ಎಸ್ಸಿ ಫ್ರೆಶರ್ಸ್ ಡೇ – 2026’ ಸ್ವಾಗತ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿದ್ದ ಜಿ.ಎಂ. ವಿಶ್ವವಿದ್ಯಾಲಯದ ನೂತನ ಕುಲಪತಿಳಾದ ಡಾ. ಎಚ್. ಆರ್. ಮಹಾದೇವಸ್ವಾಮಿ ಅವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, “ಬಿ.ಎಸ್ಸಿ ಪದವಿಯು ಕೇವಲ ಶೈಕ್ಷಣಿಕ ಕಾರ್ಯಕ್ರಮವಲ್ಲ, ಬದಲಾಗಿ ಅದು ಕಲಿಕೆ, ಸಂಶೋಧನೆ ಮತ್ತು ವ್ಯಕ್ತಿತ್ವ ವಿಕಸನದ ಹೊಸ ಅಧ್ಯಾಯವಾಗಿದೆ. ವಿಜ್ಞಾನ ಪದವಿಯನ್ನು ಅಂತಿಮ ಗುರಿಯೆಂದು ಭಾವಿಸದೆ, ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಅದೊಂದು ಭದ್ರ ಬುನಾದಿಯೆಂದು ಪರಿಗಣಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಸ್ಥಾಪಕರಾದ ದಿವಂಗತ ಶ್ರೀ ಜಿ. ಮಲ್ಲಿಕಾರ್ಜುನಪ್ಪ ಅವರ ದೂರದೃಷ್ಟಿಯನ್ನು ಸ್ಮರಿಸಿದ ಕುಲಪತಿಗಳು, “ಗುಣಮಟ್ಟದ ಉನ್ನತ ಶಿಕ್ಷಣವು ಕೇವಲ ಮಹಾನಗರಗಳಿಗೆ ಸೀಮಿತವಾಗಬಾರದು, ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಗ್ರಾಮೀಣ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತಹ ಶಿಕ್ಷಣ ದೊರೆಯಬೇಕೆಂಬುದು ಅವರ ಆಶಯವಾಗಿತ್ತು. 2023ರಲ್ಲಿ ಸ್ಥಾಪನೆಯಾದ ಜಿ.ಎಂ. ವಿಶ್ವವಿದ್ಯಾಲಯವು ಆ ಕನಸನ್ನು ನನಸಾಗಿಸುತ್ತಿದ್ದು, ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೆ ಕೌಶಲ್ಯ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡುತ್ತಿದೆ” ಎಂದರು.

ವಿದ್ಯಾರ್ಥಿಗಳು ಮುಂದಿನ ಮೂರು ವರ್ಷಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ಕುಲಪತಿಗಳು ವಿವರಿಸಿದ್ದು ಹೀಗೆ.

ಮೂಲಭೂತ ಜ್ಞಾನ ಮತ್ತು ಪ್ರಾಯೋಗಿಕ ಕಲಿಕೆ:

ಕೇವಲ ಪರೀಕ್ಷೆಗಾಗಿ ಓದದೆ, ಪಠ್ಯಪುಸ್ತಕದ ಆಚೆಗಿನ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಮತ್ತು ಪ್ರಯೋಗಾಲಯಗಳಲ್ಲಿ ಹೆಚ್ಚು ಸಮಯ ಕಳೆಯಬೇಕು.

ಸಂಶೋಧನೆ ಮತ್ತು ಇಂಟರ್ನ್‌ಶಿಪ್: ಪದವಿ ಮುಗಿಯುವವರೆಗೆ ಕಾಯದೆ, ಮೊದಲ ವರ್ಷದಿಂದಲೇ ಇಂಟರ್ನ್‌ಶಿಪ್, ಪ್ರಾಜೆಕ್ಟ್‌ಗಳು ಮತ್ತು ವಿಜ್ಞಾನಿಗಳೊಂದಿಗಿನ ಸಂವಾದದಲ್ಲಿ ತೊಡಗಿಸಿಕೊಳ್ಳಬೇಕು.

ಸಂವಹನ ಕೌಶಲ್ಯ ಮತ್ತು ಆತ್ಮವಿಶ್ವಾಸ: ಮಾತೃಭಾಷೆಯ ಮೇಲಿನ ಗೌರವದೊಂದಿಗೆ ಇಂಗ್ಲಿಷ್ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಹಿಂಜರಿಕೆಯನ್ನು ಬಿಟ್ಟು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಹಾಗೂ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.

ವಿಫುಲ ಉದ್ಯೋಗಾವಕಾಶಗಳು:

ವಿಜ್ಞಾನ ಪದವೀಧರರಿಗೆ ಇಸ್ರೋ (ISRO), ಡಿಆರ್‌ಡಿಒ (DRDO), ಸಿಎಸ್‌ಐಆರ್ (CSIR) ನಂತಹ ಪ್ರತಿಷ್ಠಿತ ಸಂಸ್ಥೆಗಳು, ರಕ್ಷಣಾ ಪಡೆಗಳು, ಔಷಧ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಗಳು ಹಾಗೂ ಯುಪಿಎಸ್‌ಸಿ (UPSC), ಕೆಪಿಎಸ್‌ಸಿ (KPSC) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಾರ ಅವಕಾಶಗಳಿವೆ.

“ದಾವಣಗೆರೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ಬೇಡ:

ನಿರಂತರ ಪರಿಶ್ರಮ, ಕುತೂಹಲ ಮತ್ತು ಶಿಸ್ತಿನಿಂದ ವಿಶ್ವಮಟ್ಟದ ಸಂಸ್ಥೆಗಳಲ್ಲಿ ಸಾಧನೆ ಮಾಡಬಹುದು. ಮೂರು ವರ್ಷಗಳ ನಂತರ ಈ ಕ್ಯಾಂಪಸ್‌ನಿಂದ ಹೊರಹೋಗುವಾಗ ನೀವು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಹೊಂದಿರುವ ವಿಭಿನ್ನ ವ್ಯಕ್ತಿಗಳಾಗಿ ಹೊರಹೊಮ್ಮಬೇಕು” ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿ.ಎಂ. ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಕಲ್ ಅಂಡ್ ಬಯೋಲಾಜಿಕಲ್ ಸೈನ್ಸಸ್ ನಿರ್ದೇಶಕ ಡಾ. ಸಂತೋಷ್ ಬಿ. ಎಂ., ಸ್ಕೂಲ್ ಆಫ್ ಮ್ಯಾಥಮೆಟಿಕಲ್ ಅಂಡ್ ಬಯೋಲಾಜಿಕಲ್ ಸೈನ್ಸಸ್ ನಿರ್ದೇಶಕ ಡಾ. ಪ್ರಸನ್ನ ಬಿ.ಎಂ.ಆರ್., ಹಾಗೂ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸಸ್ ನಿರ್ದೇಶಕ ಡಾ. ಗುರುಮೂರ್ತಿ ಎಚ್. ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಬಳಿಕ ನೂತನ ವಿದ್ಯಾರ್ಥಿಗಳಿಗೆ ‘ಮಿಸ್ಟರ್ ಮತ್ತು ಮಿಸ್ ಫ್ರೆಶರ್’ ಆಯ್ಕೆ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ವೀಣಾ ಮತ್ತು ತಂಡ ಪ್ರಾರ್ಥಿಸಿದರು. ಪಲ್ಲವಿ ಎ. ಮತ್ತು ಅದಿತಿ ಎಲ್, ವಿದ್ಯಾ ಡಿ, ತ್ರಿಶಾ ಎನ್ಎ, ನಂದೀಶ್, ಚಿನ್ಮಯಿ ಕಾರ್ಯಕ್ರಮಗಳನ್ನು ನಿರೂಪಿಸಿದರು. ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಅಮೂಲ್ಯ ಸ್ವಾಗತಿಸಿದರು. ತಸ್ಲೀಮ್ ಎಂ.ಎಚ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಿಫಾ ನಾಜಾ ವಂದನಾರ್ಪಣೆ ಸಲ್ಲಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles