SUDDIKSHANA KANNADA NEWS/ DAVANAGERE/ DATE_06-07_2025
ದಾವಣಗೆರೆ: ದಾವಣಗೆರೆ (Davanagere) ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಅವರು ತುಮಕೂರಿನ ದ್ವಾರಕಾ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ನಾಗರಾಜ್ ಸ್ನೇಹಜೀವಿಯಾಗಿದ್ದರು. ಒಳ್ಳೆಯ ಅಧಿಕಾರಿಯಾಗಿದ್ದರು. ಎಲ್ಲರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
READ ALSO THIS STORY: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಜಾತಿಗಣತಿ ವರದಿ ಕಸದ ಬುಟ್ಟಿಗೆ: ಜಿ. ಬಿ. ವಿನಯ್ ಕುಮಾರ್ ಆಕ್ರೋಶ

ಕಳೆದ ಜುಲೈ 1ರಂದು ದಾವಣಗೆರೆಯಿಂದ ಹೊಗಿದ್ದ ಪಿಎಸ್ಐ ನಾಗರಾಜ್ ಅವರು ತುಮಕೂರಿನ ದ್ವಾರಕಾ ಲಾಡ್ಜ್ ನಲ್ಲಿ ತಂಗಿದ್ದರು. ಸುಮಾರು ಸಮಯದಿಂದ ಬಾಗಿಲು ತೆರೆಯದೇ ಇದ್ದರಿಂದ ಹಾಗೂ ರೂಂನಿಂದ ಕೆಟ್ಟ ವಾಸನೆ ಬಂದ ಕಾರಣ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜ್ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ತುಮಕೂರು ಪೊಲೀಸರು ಸ್ಛಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ಪಿಎಸ್ಐ ಆಗಿದ್ದ ನಾಗರಾಜ್ ಹಿನ್ನೆಲೆ ಏನು?
ಬಡಾವಣೆ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಆಗಿದ್ದ ನಾಗರಾಜ್ ಅವರು 1993ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಬಳಿಕ ಮುಂಬಡ್ತಿ ಪಡೆದು ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ನಾಗರಾಜ್ ಮದುವೆ ಮಾಡಿಕೊಟ್ಟಿದ್ದರು. ಇನ್ನು ಪುತ್ರ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ದಾವಣಗೆರೆ ತಾಲೂಕಿನ ಜವಳಗಟ್ಟ ಗ್ರಾಮ ನಾಗರಾಜ್ ಅವರ ಸ್ವಂತ ಊರು. ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ಬಳಿ ಇರುವ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ನಾಗರಾಜ್ ಅವರ ಪತ್ನಿ ಲಲಿತಾ ಕೂಡ ಶಿಕ್ಷಕಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಜುಲೈ 1ರಂದು ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದ ನಾಗರಾಜ್ ಅವರ ಪತ್ತೆಗೆ ಹುಡುಕಾಟವೂ ನಡೆದಿತ್ತು. ಆದರೂ ಪತ್ತೆಯಾಗಿರಲಿಲ್ಲ. ಮೊಬೈಲ್ ಗೆ ಕರೆ ಮಾಡಿದರೆ ಆರಂಭದಲ್ಲಿ ಸ್ವೀಕರಿಸಲಿಲ್ಲ. ಆನಂತರ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.