Home ಕ್ರೈಂ ನ್ಯೂಸ್ ಪ್ರಿಯಕರನ ಕೊಲೆ ಮಾಡಲು ಗೆಳೆಯರೊಂದಿಗೆ ಸಂಚು ಹೂಡಿದ 19 ವರ್ಷದ ಯುವತಿ ಸೇರಿ 5 ಮಂದಿ ಅರೆಸ್ಟ್; ಯುವಕ ಬದುಕಿ ಉಳಿದಿದ್ದೇ ರೋಚಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯಕರನ ಕೊಲೆ ಮಾಡಲು ಗೆಳೆಯರೊಂದಿಗೆ ಸಂಚು ಹೂಡಿದ 19 ವರ್ಷದ ಯುವತಿ ಸೇರಿ 5 ಮಂದಿ ಅರೆಸ್ಟ್; ಯುವಕ ಬದುಕಿ ಉಳಿದಿದ್ದೇ ರೋಚಕ!

Share
ಪ್ರಿಯಕರ
Share

ಮಲಪ್ಪುರಂ: ಪ್ರಿಯಕರನನ್ನು ಕತ್ತರಿಸಿ ಹಾಕಲು ಅಥವಾ ಕೊಲೆ ಮಾಡಲು ಸ್ವಂತ ಗೆಳತಿಯೇ ಸುಪಾರಿ ನೀಡಿರುವ ಬೆಚ್ಚಿಬೀಳಿಸುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ನಡೆದಿದೆ. ಪ್ರಿಯಕರನನ್ನು ಅಪಹರಿಸಿ, ಕಾರಿನಲ್ಲಿ ಬರ್ಬರವಾಗಿ ಹಲ್ಲೆ ನಡೆಸಿ, ದರೋಡೆ ಮಾಡಿ ನದಿ ತೀರದಲ್ಲಿ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವತಿ ಸೇರಿದಂತೆ ಕ್ರಿಮಿನಲ್ ಹಿನ್ನೆಲೆಯ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ನಿವಾಸಿ ಸಫಾನಾ (19) ತನ್ನ ಪ್ರಿಯಕರನನ್ನು ಹತ್ಯೆ ಮಾಡಲು ಸಂಚು ಹೂಡಿದ ಮುಖ್ಯ ಆರೋಪಿಯಾಗಿದ್ದಾಳೆ. ಈ ಕೃತ್ಯಕ್ಕಾಗಿ ಅವಳು ತನ್ನ ಸ್ನೇಹಿತೆಯರಾದ ನಾಡಿಯಾ (20), ರಬೀಬಾ (25) ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ಇರ್ಷಾದ್ (28) ಮತ್ತು ಅಜರುದ್ದೀನ್ (25) ಎಂಬುವವರ ಸಹಾಯ ಪಡೆದಿದ್ದಳು. ಪಟ್ಟಾಂಬಿಯಲ್ಲಿದ್ದ ಯುವಕನನ್ನು ರಾತ್ರಿ ವೇಳೆ ತಿರೂರ್‌ಗೆ ಬರುವಂತೆ ವಂಚಿಸಿ ಕರೆಸಿಕೊಳ್ಳಲಾಗಿದ್ದು, ಯೋಜಿತ ಸಂಚಿನಂತೆ ಆತನನ್ನು ಬಲವಂತವಾಗಿ ಕಾರಿಗೆ ಎಳೆದು ಹಾಕಿ ಹಲ್ಲೆ ನಡೆಸಲಾಗಿದೆ. ಮೊಬೈಲ್ ಫೋನ್ ಕಸಿದುಕೊಂಡು, ಕೊಲೆ ಮಾಡಲು ಯತ್ನಿಸಿ, ಗಾಯಗೊಂಡ ಯುವಕನನ್ನು ತಿರೂರ್‌ನ ಥಾಝೆಪಾಲಂ ನದಿ ತೀರದ ರಸ್ತೆ ಬದಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರಾಣಾಪಾಯದಿಂದ ಪಾರು: ಗಾಯಗೊಂಡ ಯುವಕ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದು, ತಿರೂರ್ ಇನ್ಸ್‌ಪೆಕ್ಟರ್ ಜಲೀಲ್ ಕರುತೇದತ್ ನೇತೃತ್ವದ ಪೊಲೀಸರ ತಂಡವು ಬುಧವಾರ ಮುಂಜಾನೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕ್ರಿಮಿನಲ್ ಹಿನ್ನೆಲೆ: ಈ ಕೃತ್ಯದಲ್ಲಿ ಭಾಗಿಯಾದ ಇರ್ಷಾದ್ ಹಾಗೂ ಅಜರುದ್ದೀನ್ ವಿರುದ್ಧ ಈಗಾಗಲೇ ಡ್ರಗ್ಸ್ ಕಳ್ಳಸಾಗಣೆ, ಕೊಲೆ ಯತ್ನ ಹಾಗೂ ದೌರ್ಜನ್ಯದ ಹಲವು ಗಂಭೀರ ಪ್ರಕರಣಗಳಿದ್ದು, ಕಾವಾ (KAAPA) ಕಾಯ್ದೆಯಡಿಯೂ ಕ್ರಮ ಜರುಗಿಸಲಾಗಿದೆ.

ನ್ಯಾಯಾಂಗ ಬಂಧನ: ಬಂಧಿತ ಐವರನ್ನು ತಿರೂರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತನಿಖೆ: ಪ್ರಿಯಕರನನ್ನು ಹತ್ಯೆ ಮಾಡಲು ಯುವತಿ ಇಷ್ಟು ದೊಡ್ಡ ಸಂಚು ರೂಪಿಸಲು ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *