SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ಶಿಕ್ಷಣದಲ್ಲಿನ ಅಸಮಾನತೆ ಹೋಗಲಾಡಿಸುವುದೇ ನನ್ನ ಜೀವನದ ಗುರಿ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಘೋಷಿಸಿದರು.
ನಗರದ ನಿಟುವಳ್ಳಿಯಲ್ಲಿರುವ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನೋಟ್ ಬುಕ್ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಸ್ ಎಸ್ ಆಸ್ಪತ್ರೆ ವೈದ್ಯ ಸಿಬ್ಬಂದಿಯಿಂದ ಮಕ್ಕಳಿಗೆ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
READ ALSO THIS STORY: ದೇವನಹಳ್ಳಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೂಡಲೇ ವಾಪಸ್ ಪಡೆಯಬೇಕು: ಜಿ. ಬಿ. ವಿನಯ್ ಕುಮಾರ್ ಒತ್ತಾಯ
ಶಿಕ್ಷಣದಲ್ಲಿನ ಅಸಮಾನತೆ ಹೋಗಬೇಕಿದೆ. ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೂ ಶಿಕ್ಷಣ ಗುಣಮಟ್ಟದಲ್ಲಿ ವ್ಯತ್ಯಾಸ ಇರುತ್ತದೆ. ಎಲ್ಲರೂ ಭಾರತಾಂಬೆಯ ಮಕ್ಕಳು. ಅಂಬಾನಿ, ಅದಾನಿಗೂ ಒಂದೇ ಮತ. ಸಾಮಾನ್ಯ ಪ್ರಜೆಗೂ ಒಂದೇ ಮತ. ಇದು ಪ್ರಜಾಪ್ರಭುತ್ವಕ್ಕೆ ಇರುವ ಶಕ್ತಿ. ಈ ಮೂಲಕ ರಾಜಕೀಯದಲ್ಲಿ ಸಮಾನತೆ ಇದೆ. ರಾಜಕಾರಣದಲ್ಲಿರುವ ಸಮಾನತೆಯಂತೆ ಶಿಕ್ಷಣದಲ್ಲಿ ಯಾಕೆ ಇಲ್ಲ. ಅಂಬಾನಿ ಮಕ್ಕಳಿಗೆ ಸಿಗುವ ಶಿಕ್ಷಣ ನಿಮಗೂ ಸಿಗಬೇಕು ಎಂದು ಪ್ರತಿಪಾದಿಸಿದರು.
ಜೀವನ ಶೈಲಿ ಬದಲಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ ಪಡೆಯಬೇಕು, ಒಳ್ಳೆಯ ವ್ಯಕ್ತಿತ್ವ, ಆಕರ್ಷಕ ಗುಣಗಳನ್ನು ನೀವು ಹೊಂದುವ ಜೊತೆಗೆ ಬೇರೆಯವರಿಂದ ಹೇಳಿಸಿಕೊಳ್ಳದೇ ಸ್ವಯಂಪ್ರೇರಿತರವಾಗಿ ನಿರ್ಧರಿಸಿ ಪಠ್ಯ. ಪಠ್ಯೇತರ. ಸಾಹಿತ್ಯ ಸೇರಿದಂತೆ ಇತರೆ ಪುಸ್ತಕಗಳನ್ನು ಓದಿ ಜ್ಞಾನ ಪಡೆದರೆ ಯಶಸ್ಸು ಸಾಧ್ಯವಾಗುತ್ತದೆ. ಇನ್ ಸೈಟ್ಸ್ ಸಂಸ್ಥೆ ದೇಶದ ಮೂಲೆ ಮೂಲೆಗಳಲ್ಲಿ ಇದೆ. ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡೆ. ಆದ್ರೆ, ಆಗಲಿಲ್ಲ. ಕೆಎಎಎಸ್ ಅಧಿಕಾರಿಯಾದೆ. ಪಿಡಿಒ ಆಗಿದ್ದೆ. ಐಎಎಸ್ ಆಗದಿದ್ದರೂ ಸಾವಿರಾರು ಮಕ್ಕಳನ್ನು ಐಎಎಸ್ ಅಧಿಕಾರಿಗಳನ್ನಾಗಿ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಈ ಶಾಲೆಯ ಐವರು ವಿದ್ಯಾರ್ಥಿಗಳು ಮುಂದೆ ಬಂದರೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುತ್ತೇನೆ. ಲಕ್ಷಾಂತರ ರೂಪಾಯಿ ಖರ್ಚಾದರೂ ಪರವಾಗಿಲ್ಲ. ನಾಲ್ಕೈದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಇದ್ದರೂ ಉಚಿತವಾಗಿ ತರಬೇತಿ ನೀಡುತ್ತೇನೆ ಎಂದು ತಿಳಿಸಿದರು.
ಮನೆಯಲ್ಲಿ ಬಡತನ ಇದೆ, ತಂದೆ ತಾಯಿ ಕೂಲಿ ಕೆಲಸ ಮಾಡುತ್ತಾರೆ, ಅನುಕೂಲ ಇಲ್ಲ ಎಂದುಕೊಳ್ಳಬೇಡಿ. ಸಮಾಜದಲ್ಲಿ ಒಳ್ಳೆಯ ಮನಸುಗಳಿವೆ. ಸಹಾಯ ಮಾಡಲು ದೊಡ್ಡ ವ್ಯಕ್ತಿಗಳಿದ್ದಾರೆ. ನಿಟುವಳ್ಳಿಯ ಈ ಶಾಲೆಯ ಪ್ರಾಂಶುಪಾಲರು, ಶಿಕ್ಷಕರ ಶ್ರಮದಿಂದ ಈ ಶಾಲೆಯ ಇಷ್ಟೊಂದು ಉತ್ತಮವಾಗಿ ಇದೆ. ಬಣ್ಣ ಬಣ್ಣದ ಬಟ್ಟೆ ಹಾಕಿಕೊಳ್ಳುವುದು ಫ್ಯಾಷನ್. ಆಳವಾದ ಆಸಕ್ತಿ ಹೊಂದುವುದು ಪ್ಯಾಷನ್. ಫ್ಯಾಷನ್ ಜೊತೆಗೆ ಪ್ಯಾಷನ್ ನಿಮ್ಮಲ್ಲಿರಬೇಕು. ಶಿಕ್ಷಕರು ಅತಿವಾದ ಆಸಕ್ತಿಯಿಂದ ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯಶಸ್ಸು ಕಾಣುತ್ತಿದ್ದಾರೆ. ಯಾವುದೇ ಮುಜುಗರ, ಹಿಂಜರಿಕೆ ಇಲ್ಲದೇ ಶಾಲೆಗೆ ಯಾರೇ ಬಂದರೂ ಸಹಾಯ ಕೇಳಿ ಬಂದ ಅನುದಾನವು ದುರುಪಯೋಗವಾಗದೇ ಸದ್ಬಳಕೆಯಾಗುತ್ತಿದೆ.ಇದು ಸಂತಸದ ವಿಚಾರ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.
ಪ್ರತಿ ವರ್ಷ ಶಾಲೆಗೆ 50 ಸಾವಿರ ರೂ.: ಜಿ. ಬಿ. ವಿನಯ್ ಕುಮಾರ್
ಶಾಲೆಗೆ ಒಂದು ಕಂಪ್ಯೂಟರ್ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೊಡಿಸುತ್ತೇನೆ. ಪ್ರತಿ ವರ್ಷ ಈ ಶಾಲೆಗೆ 50 ಸಾವಿರ ರೂಪಾಯಿ ನೀಡುತ್ತೇನೆ. ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ತಲಾ ಹತ್ತು ಸಾವಿರ ರೂಪಾಯಿ ಬಹುಮಾನ ರೂಪದಲ್ಲಿ ನೀಡುತ್ತೇನೆ. ಮುಂದಿನ ಓದಿಗೆ ಅನುಕೂಲವಾಗುತ್ತದೆ. ನಾನು ಸಂಸತ್, ವಿಧಾನಸಭೆಗೆ ಹೋಗಿ ಮತ್ತಷ್ಟು ಸೇವೆ ಮಾಡಬೇಕೆಂಬ ಆಸೆ ಇದೆ. ನೋಡೋಣ ಏನಾಗುತ್ತದೆ ಎಂದು. ಆದ್ರೆ, ಶಾಲೆಗೆ ಘೋಷಿಸಿರುವ ಅನುದಾನ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ 30 ವರ್ಷದವರೆಗೂ ಮುಂದುವರಿಯುತ್ತದೆ ಎಂದು ಭರವಸೆ ನೀಡಿದ ಜಿಬಿವಿ ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಗಳಾಗಿ. ನೀವು ಎಂಜಿನಿಯರಿಂಗ್, ಮೆಡಿಕಲ್ ಓದಿ ಉನ್ನತ ಸ್ಥಾನಕ್ಕೆ ಹೋಗಿ ಎಂದು ಹಾರೈಸಿದರು.
ಪಿಎಂ ಶ್ರೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕ ಟಿ. ಎಸ್. ಗುರುಮೂರ್ತಿ, ಗುರುರಾಜ್, ಡಾ. ಬಿ. ಸ್ವಪ್ನಾ, ಜಿ. ಪಿ. ಸಚಿನ್ ಕುಮಾರ್, ವೈದ್ಯಾಧಿಕಾರಿ ಶಿವರುದ್ರಪ್ಪ, ಉಚ್ಚೆಂಗಪ್ಪ, ವಿನಯ್ ಕುಮಾರ್, ಭೀಮೇಶ್ ಕುಮಾರ್, ಬಿ. ಎಂ. ಸುರೇಶ್, ಟಿ. ಎಸ್. ಸ್ವಾಮಿ, ಎಂ. ಸುರೇಶ್ ಮತ್ತಿತರರು ಹಾಜರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಕೆ. ಟಿ. ಜಯಪ್ಪ ಸ್ವಾಗತಿಸಿದರು. ಜಿ. ಪಿ. ಸಚಿನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.