ತಿರುವನಂತಪುರಂ: ವಿಭಿನ್ನ ಧರ್ಮದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿರುವ ಅಪರೂಪದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ನಪ್ರಿಯಾ ರಹಮಾನ್ ಎಂಬ ಮುಸ್ಲಿಂ ಯುವತಿ ಹಾಗೂ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಿಥುನ್ ಎಂಬ ಯುವಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯಾಗಿದ್ದಾರೆ.
ನಪ್ರಿಯಾ ರಹಮಾನ್ ಅವರ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮಿಥುನ್ ಅವರ ಪರಿಚಯವಾಗಿತ್ತು. ಆರಂಭದಲ್ಲಿ ಸಾಮಾನ್ಯ ಸ್ನೇಹವಾಗಿ ಶುರುವಾದ ಇವರಿಬ್ಬರ ಪರಿಚಯ, ದಿನಕಳೆದಂತೆ ಗಾಢ ಪ್ರೀತಿಗೆ ತಿರುಗಿದೆ.
ಕುಟುಂಬದ ಒಪ್ಪಿಗೆಯೊಂದಿಗೆ ಮದುವೆ: ತಮ್ಮ ಪ್ರೀತಿಯನ್ನು ಮುಂದುವರಿಸಿ ಮದುವೆಯಾಗಲು ನಿರ್ಧರಿಸಿದ ನಪ್ರಿಯಾ ಮತ್ತು ಮಿಥುನ್, ತಮ್ಮ-ತಮ್ಮ ಕುಟುಂಬದವರೊಂದಿಗೆ ಮುಕ್ತವಾಗಿ ಚರ್ಚಿಸಿ ಹಿರಿಯರ ಮನವೊಲಿಸುವಲ್ಲಿ ಯಶಸ್ವಿಯಾದರು.
ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿವಾಹ: ಧರ್ಮ ಮತ್ತು ಜಾತಿಯ ಎಲ್ಲಾ ಭೇದಭಾವಗಳನ್ನು ಬದಿಗಿಟ್ಟು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಸಪ್ತಪದಿ ತುಳಿದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ವಿಭಿನ್ನ ಧಾರ್ಮಿಕ ಹಿನ್ನೆಲೆಯವರಾಗಿದ್ದರೂ ಪರಸ್ಪರ ಅರ್ಥಮಾಡಿಕೊಂಡು, ಹಿರಿಯರ ಆಶೀರ್ವಾದದೊಂದಿಗೆ ಹೊಸ ಬದುಕು ಕಟ್ಟಿಕೊಂಡಿರುವ ಈ ಜೋಡಿಯ ಪ್ರೇಮಕಥೆ ಮತ್ತು ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ರೀತಿಗೆ ಜಾತಿ-ಧರ್ಮದ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿರುವ ನಪ್ರಿಯಾ ಮತ್ತು ಮಿಥುನ್ ಅವರ ದಾಂಪತ್ಯಕ್ಕೆ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ.





Leave a comment