SUDDIKSHANA KANNADA NEWS/ DAVANAGERE/ DATE:29-09-2023
ದಾವಣಗೆರೆ (Davanagere): ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಕಳೆದ ಐದು ವರ್ಷಗಳಿಂದಲೂ ಕಾಂಗ್ರೆಸ್ ನಲ್ಲಿದ್ದರೂ, ಮೂರು ವರ್ಷಗಳಿಂದ ಸಕ್ರಿಯನಾಗಿ ಕೆಲಸ ಮಾಡುತ್ತಿದ್ದೇನೆ. 2024ರ ಲೋಕಸಭೆಗೆ ದಾವಣಗೆರೆ ಜಿಲ್ಲೆಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ಸಿಗುವ ಅಚಲವಾದ ವಿಶ್ವಾಸ ಇದೆ ಎಂದು ಇನ್ಸ್ಟೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ದಾವಣಗೆರೆ ಕಾಂಗ್ರೆಸ್ ಲೋಕಸಭಾ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಕನ್ನಡಪರ ಸಂಘಟನೆಗಳ ಜೊತೆ ಹೋರಾಟಕ್ಕಿಳಿದ 5 ವರ್ಷದ ಪೋರ… ಭತ್ತ, ಬೇಳೆ ನಮಗೆ ಇಲ್ಲ, ಕಾವೇರಿ ನಮ್ಮದು, ನೀರು ಬಿಡಬೇಡಿ…!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ ಜಿಲ್ಲೆಯ 8 ಕ್ಷೇತ್ರಗಳ ಗ್ರಾಮೀಣ ಪ್ರದೇಶದಲ್ಲಿ ಓಡಾಡಿದ್ದೇನೆ. ಜನರ ಸಮಸ್ಯೆ ಅರಿಯುವ ಕೆಲಸ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಸಿಕ್ಕರೆ ಲೋಕಸಭೆ ಚುನಾವಣೆಯಲ್ಲಿಒಂದೂವರೆಯಿಂದ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ 8 ರಿಂದ 9 ಲಕ್ಷ ಮತಗಳು ಬರಲಿವೆ. ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಟಿಕೆಟ್ ನೀಡುವ ಕುರಿತಂತೆ ಮಾತನಾಡಿದ್ದೇನೆ. ಶಾಮನೂರು ಶಿವಶಂಕರಪ್ಪರ ಭೇಟಿ ಮಾಡಿ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ. ಸದ್ಯದಲ್ಲಿಯೇ ಭೇಟಿ ಮಾಡಿ ಎಸ್. ಎಸ್. ಅವರ ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಸರ್ವೆಯಲ್ಲಿ ನನ್ನ ಹೆಸರೇ ಟಾಪ್:
ಹೈಕಮಾಂಡ್ ಸೂಚನೆ ಮೇರೆಗೆ ಓಡಾಡುತ್ತಿದ್ದೇನೆ. ನನಗೆ ಟಿಕೆಟ್ ಸಿಗುವ ಗ್ಯಾರಂಟಿ ಇದೆ. . ರಾಜ್ಯ, ರಾಷ್ಟ್ರ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ದಾವಣಗೆರೆಯಲ್ಲಿ ಓಡಾಡುತ್ತಿದ್ದೇನೆ. ಎಲ್ಲರೂ ಲೋಕಸಭೆಗೆ ಸ್ಪರ್ಧಿಸಲು ಹಾಗೂ
ಸಂಸತ್ ನಲ್ಲಿ ಮಾತನಾಡುವ ಎಲ್ಲಾ ಅರ್ಹತೆ ನನಗೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಸುತ್ತಿರುವ ಸುನೀಲ್ ಅವರ ಸರ್ವೆಯಲ್ಲಿ ನನ್ನ ಹೆಸರು ಟಾಪ್ ನಲ್ಲಿ ಬಂದಿದೆ. ಇದು ಮಾತ್ರ ಮುಖ್ಯವಲ್ಲ, ಜಿಲ್ಲೆಯು
ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂಬ ಹೆಬ್ಬಯಕೆ ನನ್ನದು. ವೈಯಕ್ತಿಕವಾಗಿ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದೇನೆ. ಹಳ್ಳಿ ಕಡೆಗೆ ಹೆಚ್ಚಾಗಿ ಹೋಗುತ್ತಿದ್ದೇನೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಹಳ್ಳಿಗಳು ಬರುತ್ತವೆ. ಪ್ರತಿಯೊಂದು ಹಳ್ಳಿಗಳಿಗೂ ಹೋಗದಿದ್ದರೂ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ನಿಷ್ಕ್ರಿಯವಾಗಿಲ್ಲ. ಲೋಕಸಭೆ ವ್ಯಾಪ್ತಿಯಲ್ಲಿ ಎಂಟು ಕ್ಷೇತ್ರಗಳು ಬರಲಿದ್ದು, ಏಳರಲ್ಲಿ ಕಾಂಗ್ರೆಸ್ ಗೆದ್ದಿದೆ. ನಾನು ಹೋದ ಕಡೆಗಳಲ್ಲಿ ಎಲ್ಲರೂ ವಿಶ್ವಾಸ, ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಮತ್ತಷ್ಟು
ಸದೃಢಗೊಳಿಸುವ ಆಲೋಚನೆ ನನ್ನದು ಎಂದರು.
ನನ್ನ ಹೆಸರು ಸಚಿವರು, ಅಧ್ಯಕ್ಷರೇ ಹೇಳ್ತಾರೆ:
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೆಂದು ನನ್ನ ಹೆಸರು ಹೇಳಲಿದ್ದಾರೆ. ನಾನು ಹಳ್ಳಿ ಹೋಗುತ್ತಿರುವುದು ಪಕ್ಷ ಸಂಘಟನೆಗೆ.
ಒಡೆದು ಹೋಗಿರುವ ಮನಸುಗಳನ್ನು ಒಂದಾಗಿಸುವ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಯಶ ಕಾಣುತ್ತಿದ್ದೇನೆ.ಎಲ್ಲಾ ಕ್ಷೇತ್ರಗಳಲ್ಲೂ ನಾಯಕರು ಒಂದಾಗುತ್ತಿದ್ದಾರೆ ಎಂದು ಹೇಳಿದರು.
ಜಾತಿ ರಾಜಕಾರಣ ಮಾಡಲ್ಲ:
ಸಮಾಜದ ನಂಬಿಕೆ ಮೊದಲು ಗಳಿಸುವುದು ಮುಖ್ಯ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ವಿಶ್ವಾಸ ಗಳಿಸಿ, ಅವರ ಆಶೀರ್ವಾದದಿಂದಲೇ ಎಲ್ಲಾ ಕಾರ್ಯಕ್ರಮ ಮಾಡುತ್ತೇವೆ. ಸ್ಥಳೀಯ ಮುಖಂಡರ
ಜೊತೆ ಮಾತನಾಡುತ್ತೇನೆ. ವಿವಾದರಹಿತ ವ್ಯಕ್ತಿ ನಾನು. ಹಾಗಾಗಿ ನಿಮಗೆ ಸಂಪೂರ್ಣ ಅರ್ಹತೆ ಇದೆ ಎಂಬುದಾಗಿ ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಚನ್ನಯ್ಯ ಒಡೆಯರ್ ಜೊತೆ ಓಡಾಡಿದವರು ನಮ್ಮ ಜೊತೆ ಇದ್ದಾರೆ. ಟಿಕೆಟ್ ಸಿಕ್ಕರೆ ರಾಜಕೀಯ ಸುನಾಮಿ ಆಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೌಲ್ಯ ಬೆಳೆಸಿಕೊಂಡು ಬಂದವನು ನಾನು:
ರಾಜಕಾರಣದಲ್ಲಿ ಸ್ಪಂದಿಸುವ, ಬೆಳೆಸುವ ಕೆಲಸ ಆಗಬೇಕು. ಮತಬೇಧ, ಜಾತಿ ಬೇಧ ಇಲ್ಲದೇ ಹೋಗಬೇಕು. 20 ವರ್ಷದಿಂದ ಮೌಲ್ಯಗಳನ್ನು ಬೆಳೆಸಿಕೊಂಡು ಬಂದಿದ್ದೇನೆ. ಬೆಂಗಳೂರು ಐಟಿ ಹಬ್. ದಾವಣಗೆರೆಯಲ್ಲೂ ಆಗಬೇಕು. ರಾಜಕಾರಣದಲ್ಲಿ
ಕ್ರಾಂತಿಕಾರಕ ಬದಲಾವಣೆ ಆಗಬೇಕೆಂಬ ಬಯಕೆ ಇದೆ. ಈ ನಿಟ್ಟಿನಲ್ಲಿ ಶ್ರಮಿಸುವ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕೋಮುಗಲಭೆ, ಭಾವನೆಗಳ ಆಧಾರದ ಮೇಲೆ ರಾಜಕಾರಣ ಮಾಡುವವನು ನಾನಲ್ಲ. ನನ್ನದು ಅಭಿವೃದ್ಧಿ, ಸಾಮರಸ್ಯ, ಎಲ್ಲರನ್ನೂ ಒಂದಾಗಿಸುವ ರಾಜಕಾರಣ ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪರ ಜೊತೆಯೂ ಪಕ್ಷ ಸಂಘಟನೆ ಕುರಿತಂತೆ ಮಾತನಾಡಿದ್ದೇನೆ. ದಾವಣಗೆರೆ ಕ್ಷೇತ್ರವು ಅಹಿಂದ ಕ್ಷೇತ್ರ. ಇಲ್ಲಿ ಶೇಕಡಾ 70 ರಷ್ಟು ಅಹಿಂದ ಮತಗಳಿವೆ. ಚನ್ನಯ್ಯ ಒಡೆಯರ್ ಕಾಲದಲ್ಲಿಯೂ
ಎಲ್ಲಾ ವರ್ಗದವರೂ ಬೆಂಬಲಿಸಿದ್ದರು. ಈ ಬಾರಿ ನನಗೆ ಬೆಂಬಲ ಸಿಗುತ್ತದೆ ಎಂಬ ಬಲವಾದ ವಿಶ್ವಾಸ ಇದೆ ಎಂದರು.
ಬಿಜೆಪಿಗೆ ಹೋಗಲ್ಲ, ಕಾಂಗ್ರೆಸ್ ಬಿಡಲ್ಲ:
ಒಂದು ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ. ಬಿಜೆಪಿಗೆ ಸೇರ್ಪಡೆ ಆಗಲ್ಲ. ಸಾಯುವ ತನಕ ಆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ. ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಎಂದು ತಿಳಿಸಿದರು.
Comments 4