Home ದಾವಣಗೆರೆ ಕರ್ನಾಟಕದ E20 ಇಂಧನ ವಿವಾದದ ಬೆನ್ನಲ್ಲೇ ಕೇರಳದಲ್ಲೂ ತೀವ್ರಗೊಂಡ ತರಾತುರಿಯ ಪೆಟ್ರೋಲ್ ಗುಣಮಟ್ಟ ತಪಾಸಣೆ!
ದಾವಣಗೆರೆನವದೆಹಲಿಬೆಂಗಳೂರು

ಕರ್ನಾಟಕದ E20 ಇಂಧನ ವಿವಾದದ ಬೆನ್ನಲ್ಲೇ ಕೇರಳದಲ್ಲೂ ತೀವ್ರಗೊಂಡ ತರಾತುರಿಯ ಪೆಟ್ರೋಲ್ ಗುಣಮಟ್ಟ ತಪಾಸಣೆ!

Share
ಕೇರಳ
Share

ತಿರುವನಂತಪುರಂ: ಕರ್ನಾಟಕ ಸರ್ಕಾರವು ಪೆಟ್ರೋಲ್‌ನಲ್ಲಿ ನಿಗದಿತ ಶೇ. 20ರ ಬದಲಿಗೆ ಶೇ. 31.2ರವರೆಗೆ ಅತಿ ಹೆಚ್ಚಿನ ಪ್ರಮಾಣದ ಎಥೆನಾಲ್ ಬೆರೆಸಲಾಗಿದೆ ಎಂದು ಆರೋಪಿಸಿ ಹೊಸ ವಿವಾದಕ್ಕೆ ಮುನ್ನುಡಿ ಬರೆದ ಬೆನ್ನಲ್ಲೇ, ನೆರೆಯ ಕೇರಳ ರಾಜ್ಯ ಸರ್ಕಾರವೂ ಎಚ್ಚೆತ್ತುಕೊಂಡಿದೆ. ವಾಹನಗಳ ಎಂಜಿನ್ ಹಾನಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ, ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮೇಲೆ ಹಠಾತ್ ತಪಾಸಣೆ ಮತ್ತು ಮಾದರಿ ಸಂಗ್ರಹಣೆಯನ್ನು ಆರಂಭಿಸಿದೆ.

ತಿರುವನಂತಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ನಾಗರಿಕ ಸರಬರಾಜು ಇಲಾಖೆಯು ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಗಳಿಗೆ ಕಳುಹಿಸಿದೆ. ಮುಂದಿನ 10 ದಿನಗಳಲ್ಲಿ ಪರೀಕ್ಷಾ ವರದಿ ಹೊರಬರಲಿದ್ದು, ಒಂದು ವೇಳೆ ಮಾನದಂಡ ಮೀರಿ ಎಥೆನಾಲ್ ಬೆರೆಸಿರುವುದು ಸಾಬೀತಾದರೆ ಬಂಕ್‌ಗಳನ್ನು ಸೀಜ್ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಅನೂಪ್ ಜೇಕಬ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಸ್ಫೋಟಕ ವರದಿ: ಕರ್ನಾಟಕದಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ಎಥೆನಾಲ್ ಅಂಶವು ಶೇ. 31.2ರವರೆಗೆ ತಲುಪಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಶದ್ ಆರೋಪಿಸಿರುವುದೇ ಈ ಅಖ್ಮಾದ ಬೆಳವಣಿಗೆಗೆ ಪ್ರಮುಖ ಕಾರಣ.

ಕೇರಳ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ವೈಫಲ್ಯದ ಕುರಿತು ಗ್ರಾಹಕರಿಂದ ಸತತ ದೂರುಗಳು ಕೇಳಿಬರುತ್ತಿರುವ ಕಾರಣ ಸತ್ಯಾಸತ್ಯತೆಯನ್ನು ತಿಳಿಯಲು ಪೆಟ್ರೋಲ್ ಬಂಕ್‌ಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳ ಸ್ಪಷ್ಟನೆ: ರಾಜ್ಯಗಳ ಆರೋಪಗಳನ್ನು ತಳ್ಳಿಹಾಕಿರುವ ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು (OMCs) ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ದೇಶಾದ್ಯಂತ ಪರೀಕ್ಷಿಸಿದ 893 ಮಾದರಿಗಳಲ್ಲಿ ಎಥೆನಾಲ್ ಅಂಶವು ನಿಗದಿತ ಶೇ. 19 ರಿಂದ 21ರ ವ್ಯಾಪ್ತಿಯಲ್ಲೇ ಇದೆ ಎಂದು ಸ್ಪಷ್ಟಪಡಿಸಿವೆ.

ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ E20 ಇಂಧನ ಮಿಶ್ರಣ ವಿವಾದವು ಗ್ರಾಹಕರು ಹಾಗೂ ವಾಹನ ಸವಾರರರಲ್ಲಿ ಆತಂಕ ಮೂಡಿಸಿದ್ದು, ಕೇರಳದ ಪ್ರಯೋಗಾಲಯ ವರದಿಯ ಮೇರೆಗೆ ಮುಂದಿನ ಕಾನೂನು ಹೋರಾಟಗಳು ನಿರ್ಧಾರವಾಗಲಿವೆ.
Share

Leave a comment

Leave a Reply

Your email address will not be published. Required fields are marked *