ನವದೆಹಲಿ / ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಇ20 ಈಗ 420 ಆಗಿ ಬದಲಾಗಿದೆ, ಇದು ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕಳವು ಮಾಡುತ್ತಿರುವಂತೆ” ಎಂದು ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಲಾದ 14 ಪೆಟ್ರೋಲ್ ಮಾದರಿಗಳನ್ನು NABL-ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 14ರ ಪೈಕಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಇರುವುದು ಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಯಾವ ಜಿಲ್ಲೆಗಳಲ್ಲಿ ಸಂಗ್ರಹ?: ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಜಿಲ್ಲೆಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು.
ತೈಲ ಕಂಪನಿಗಳ ವಿರುದ್ಧ ಆರೋಪ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಪೆಟ್ರೋಲ್ ಮಾದರಿಗಳಲ್ಲಿ ಕ್ರಮವಾಗಿ ಶೇ.31.2 ಮತ್ತು ಶೇ.30.5 ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಬಿಪಿಸಿಎಲ್ (BPCL), ನಯಾರಾ ಎನರ್ಜಿ ಮತ್ತು ಶೆಲ್ ಕಂಪನಿಗಳ ಮಾದರಿಗಳೂ ಇದರಲ್ಲಿ ಸೇರಿವೆ.
ತೈಲ ಕಂಪನಿಗಳ ಸ್ಪಷ್ಟನೆ: ರಾಜ್ಯ ಸರ್ಕಾರ ಹಾಗೂ ರಾಹುಲ್ ಗಾಂಧಿ ಅವರ ಈ ಆರೋಪವನ್ನು ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಜಂಟಿ ಹೇಳಿಕೆ ಮೂಲಕ ತಳ್ಳಿಹಾಕಿದ್ದು, ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ವಿಧಾನದಲ್ಲಿ ಸರಿಯಾದ ತಾಂತ್ರಿಕ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಎಂದು ತಿರುಗೇಟು ನೀಡಿವೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ವಾಹನಗಳ ಎಂಜಿನ್ ಸಾಮರ್ಥ್ಯ ಮತ್ತು ವಾಹನಗಳ ಬಾಳಿಕೆ ಕುರಿತು ಸಾರ್ವಜನಿಕರಲ್ಲಿ ಈಗಾಗಲೇ ಕಳವಳ ವ್ಯಕ್ತವಾಗುತ್ತಿದ್ದು, ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ.





Leave a comment