ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮುಂಬೈನ ಜುಹುವಿನಲ್ಲಿರುವ ‘ಜಲ್ಸಾ’ ನಿವಾಸಕ್ಕೆ ಬಾಂಬ್ ಸ್ಫೋಟಿಸುವುದಾಗಿ ಮತ್ತೊಮ್ಮೆ ಬೆದರಿಕೆ ಇಮೇಲ್ ಬಂದಿರುವುದಾಗಿ ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆದರಿಕೆ ಇಮೇಲ್ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಬಚ್ಚನ್ ಅವರ ಬಂಗಲೆ ಸೇರಿದಂತೆ ಇಮೇಲ್‌ನಲ್ಲಿ ನಮೂದಿಸಲಾಗಿದ್ದ ಬಾಂಬೆ ಹೈಕೋರ್ಟ್ ಹಾಗೂ ಮಹಾಲಕ್ಷ್ಮಿ ರೇಸ್‌ಕೋರ್ಸ್ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಇಮೇಲ್ ಅನ್ನು ಬಾಂಬೆ ಹೈಕೋರ್ಟ್ ಹಾಗೂ ಮಹಾಲಕ್ಷ್ಮಿ ರೇಸ್‌ಕೋರ್ಸ್‌ಗೂ ಕಳುಹಿಸಲಾಗಿದ್ದು, ಖಲಿಸ್ತಾನ್ ಉಲ್ಲೇಖದೊಂದಿಗೆ ನವೆಂಬರ್ 27ರಂದು ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿ ಮೇಲೂ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಅಕ್ಟೋಬರ್ 23ರಂದು ಕೂಡ ಇದೇ ರೀತಿಯ ಬೆದರಿಕೆ ಬಂದಿದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಅಮಿತಾಭ್ ಬಚ್ಚನ್ ಅವರು ಕಳೆದ ಭಾನುವಾರ ತಮ್ಮ ನಿವಾಸದ ಹೊರಗೆ ಅಭಿಮಾನಿಗಳನ್ನು ಭೇಟಿಯಾಗುವ ವೇಳೆ ಬುಲೆಟ್‌ಪ್ರೂಫ್ ಗಾಜಿನ ರಕ್ಷಣೆಯ ಹಿಂದೆ ನಿಂತು ಶುಭ ಹಾರೈಸಿದ್ದರು.
ಎರಡನೇ ಬಾರಿ ಬೆದರಿಕೆ: ಕೇವಲ ಎರಡು ವಾರಗಳ ಅಂತರದಲ್ಲಿ ಬಚ್ಚನ್ ಅವರ ಜಲ್ಸಾ ಮನೆಗೆ ಎರಡನೇ ಬಾರಿ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಆತಂಕ ಮೂಡಿಸಿದೆ.
ಪೊಲೀಸ್ ತನಿಖೆ ಹಾಗೂ ಶೋಧ: ಮುಂಬೈ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ಬಂಗಲೆ ಹಾಗೂ ಇತರೆ ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದು, ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತು ಸಿಕ್ಕಿಲ್ಲ.
ಭದ್ರತೆ ಬಿಗಿ: ಬೆದರಿಕೆ ಹಿನ್ನೆಲೆಯಲ್ಲಿ 84 ವರ್ಷದ ನಟ ಅಮಿತಾಭ್ ಬಚ್ಚನ್ ಅವರ ನಿವಾಸದ ಸುತ್ತ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ವೇಳೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಬೆದರಿಕೆ ಸಂದೇಶದ ಮೂಲ ಮತ್ತು ಕಳುಹಿಸಿದವರ ಪತ್ತೆಗಾಗಿ ಸೈಬರ್ ಕ್ರೈಮ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮುಂಬೈಾದ್ಯಂತ ಹೈಅರ್ಟ್ ಜಾರಿಗೊಳಿಸಲಾಗಿದೆ.





Leave a comment