ಕಡಲೂರು: ‘ದೀಪಾವಳಿ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿಯೇ ತಮಿಳುನಾಡಿನ ಕಡಲೂರು ಜಿಲ್ಲೆಯ ಪೌಲ್ಟ್ರಿ ರೈತರಿಗೆ ದೊಡ್ಡ ಆಘಾತ ಎದುರಾಗಿದೆ. ಅಜ್ಞಾತ ಕಾಯಿಲೆಯೊಂದು ಕೋಳಿ ಫಾರ್ಮ್ಗಳಲ್ಲಿ ಹರಡಿದ್ದರಿಂದ ಕೇವಲ ಆರು ದಿನಗಳಲ್ಲಿ ಬರೋಬ್ಬರಿ 50,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಕೋಳಿ ಸಾಕಾಣಿಕೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಡಲೂರು ಜಿಲ್ಲೆಯ ಮೋಹನ್ ಎಂಬ ರೈತರು ತಮ್ಮ ಫಾರ್ಮ್ನಲ್ಲಿ 7,000 ಕೋಳಿಗಳನ್ನು ಕಳೆದುಕೊಂಡಿದ್ದು, ಲಕ್ಷಾಂತರ ರೂ. ಬಂಡವಾಳ ಕರಗಿಹೋಗಿ ಕಂಗಾಲಾಗಿದ್ದಾರೆ. ಕೋಳಿಗಳ ಕಾಲುಗಳು ಹಿಂದಕ್ಕೆ ಚಾಚಿಕೊಂಡಿರುವ ಮತ್ತು ರೆಕ್ಕೆಗಳು ಸಂಪೂರ್ಣವಾಗಿ ಹರಡಿಕೊಂಡಿರುವ ವಿಚಿತ್ರ ಲಕ್ಷಣಗಳಿಂದ ಈ ಸಾವುಗಳು ಸಂಭವಿಸುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಹಬ್ಬದ ಸೀಸನ್ನಲ್ಲಿ ಉತ್ತಮ ವ್ಯಾಪಾರ ನಿರೀಕ್ಷಿಸಿದ್ದ ರೈತರಿಗೆ ಈ ಸಾವುಗಳು ಭಾರೀ ನಷ್ಟವನ್ನುಂಟು ಮಾಡಿವೆ.
ಭಾರೀ ಆರ್ಥಿಕ ನಷ್ಟ: ಒಂದು ಮರಿ ಕೋಳಿಗೆ 47-48 ರೂ., 50 ಕೆ.ಜಿ. ಫೌಲ್ಟ್ರಿ ಫೀಡ್ಗೆ 2,500 ರಿಂದ 2,600 ರೂ. ಹಾಗೂ ವಿದ್ಯುತ್ ಬಿಲ್ ಸೇರಿ ರೈತರು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು.
ಅಧಿಕಾರಿಗಳ ಅಂದಾಜು ಹಾಗೂ ತಪಾಸಣೆ: ರೈತರು 50,000 ಕೋಳಿಗಳು ಸಾವನ್ನಪ್ಪಿವೆ ಎಂದರೆ, ಜಿಲ್ಲಾಡಳಿತದ ಪ್ರಕಾರ ಸುಮಾರು 26,000 ಕೋಳಿಗಳು ಸಾವನ್ನಪ್ಪಿವೆ. ಹಕ್ಕಿಜ್ವರ ಇಲ್ಲ ಎಂದು ಪ್ರಾಥಮಿಕ ವರದಿಯಿಂದ ಸ್ಪಷ್ಟವಾಗಿದ್ದು, ಹೆಚ್ಚಿನ ತರೀಕ್ಷೆಗಾಗಿ ಮಾದರಿಗಳನ್ನು ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರೈತರ ಪರದಾಟ: ಸರ್ಕಾರಿ ಅಧಿಕಾರಿಗಳು ಮತ್ತು ಪಶುವೈದ್ಯರನ್ನು ಸಂಪರ್ಕಿಸಿದರೂ ಸೂಕ್ತ ಪರಿಹಾರ ಸಿಕ್ಕಿಲ್ಲ, ವರದಿ ಬರುವವರೆಗೆ ಕಾಯುವಂತೆ ಹೇಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ರೋಗ ಹರಡುವುದನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.





Leave a comment