ಬೆಂಗಳೂರು/ ದಾವಣಗೆರೆ: ಭದ್ರಾ ಜಲಾಶಯದಿಂದ ದಾವಣಗೆರೆ ಜಿಲ್ಲೆಯ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಬಿಡದೆ ಆಗುತ್ತಿರುವ ಅನಾನುಕೂಲ ಮತ್ತು ಭದ್ರಾ ನಾಲೆಯ ಮೂಲಕ ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುತ್ತಿರುವ ನೀರನ್ನು ಕೂಡಲೇ ತಡೆಹಿಡಿಯಬೇಕೆಂದು ಒತ್ತಾಯಿಸಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ರೈತರ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಲ್ಲಿ ನೀರಿದ್ದರೂ ನಾಲೆಯ ಕೊನೆ ಭಾಗದ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ತಾಲೂಕುಗಳ ರೈತರಿಗೆ ನೀರು ತಲುಪುತ್ತಿಲ್ಲ. ಬಿತ್ತನೆ ಮಾಡಿರುವ ಭತ್ತದ ಗದ್ದೆಗಳು ಬಿರುಕು ಬಿಟ್ಟಿವೆ, ಅಡಿಕೆ ತೋಟಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ, ಮೆಕ್ಕೆಜೋಳ, ರಾಗಿ ಬೆಳೆಗಳು ಒಣಗುವ ಹಂತದಲ್ಲಿವೆ.
ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳು ವಿಫಲವಾಗಿವೆ. ಬೆಳೆ ಉಳಿಸಿಕೊಳ್ಳಲು ರೈತರು ಖಾಸಗಿಯವರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಡೀಸೆಲ್ ಮೂಲಕ ನೀರು ಹರಿಸುತ್ತಿದ್ದಾರೆ. ಸಾಲದ ಹೊರೆ, ಬೆಳೆ ನಷ್ಟದ ಭೀತಿಯಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂಕಷ್ಟದ ನಡುವೆಯೇ ಭದ್ರಾ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿರುವುದು ದಾವಣಗೆರೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. “ಮೊದಲು ನಮ್ಮ ಬೆಳೆಗಳಿಗೆ ನೀರು ಕೊಡಿ, ಬೇಸಿಗೆ ಬೆಳೆಗೆ ಕಡ್ಡಾಯವಾಗಿ 120 ದಿನ ನೀರು ಹರಿಸಿ ನಂತರ ಹೆಚ್ಚುವರಿ ನೀರನ್ನು ಬೇರೆಡೆಗೆ ಬಿಡಿ” ಎಂಬುದು ರೈತರ ಆಗ್ರಹವಾಗಿದೆ.
ರೈತರ ಈ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ರೈತರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದಾವಣಗೆರೆ ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡಿದರು. ರೈತರ ಕಷ್ಟಗಳನ್ನು ಆಲಿಸಿದ ಸಚಿವರು, “ದಾವಣಗೆರೆ ಜಿಲ್ಲೆ ರೈತ ಪ್ರಧಾನ ಜಿಲ್ಲೆ. ಭದ್ರಾ ನೀರು ನಿಂತರೆ ಇಡೀ ಜಿಲ್ಲೆಯ ಆರ್ಥಿಕತೆಯೇ ಕುಸಿಯುತ್ತದೆ. ಆದ್ದರಿಂದ ಪ್ರಸ್ತುತ ಚಿತ್ರದುರ್ಗಕ್ಕೆ ಹರಿಸುತ್ತಿರುವ ನೀರನ್ನು ತಡೆಹಿಡಿಯಬೇಕು” ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು.
ರೈತರ ಮನವಿ ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚಿಸಿ, ದಾವಣಗೆರೆ ರೈತರಿಗೆ ನ್ಯಾಯಯುತವಾಗಿ ನೀರು ಹಂಚಿಕೆ ಮಾಡುವ ಭರವಸೆ ನೀಡಿದ್ದಾರೆ. ಸಚಿವ ಮಲ್ಲಿಕಾರ್ಜುನ್ ಅವರು ರೈತರ ಪರವಾಗಿ ಗಟ್ಟಿ ಧ್ವನಿಯಲ್ಲಿ ವಾದ ಮಂಡಿಸಿ, ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಮುದೇಗೌಡ್ರ ಗಿರೀಶ್, ಚಂದ್ರಶೇಖರ್ ಪೂಜಾರ್, ವಾಗೀಶ್ ಸ್ವಾಮಿ,ಬುದ್ದಿ ಹುಸೇನ್ ಪೀರ್, ಬಾಳಪ್ಪರ ಅಶೋಕ ಸೇರಿದಂತೆ ಜಿಲ್ಲೆಯ ರೈತ ಮುಖಂಡರುಗಳು ಉಪಸ್ಥಿತರಿದ್ದರು.





Leave a comment