ಬೆಂಗಳೂರು: ರಾಜ್ಯದಲ್ಲಿರುವ ಸ್ವತಂತ್ರ ಪ್ರಿಸ್ಕೂಲ್‌ಗಳಿಗೆ ಅನ್ವಯಿಸಲಾಗಿರುವ ಕಠಿಣ ನಿಯಮಗಳು ಮುಂದುವರಿದರೆ ಸುಮಾರು 25,000ಕ್ಕೂ ಅಧಿಕ ಕೇಂದ್ರಗಳು ಮುಚ್ಚುವ ಹಂತ ತಲುಪಲಿದ್ದು, ಅಂದಾಜು 4.5 ಲಕ್ಷ ಮಹಿಳೆಯರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ‘ಕರ್ನಾಟಕ ಕೌನ್ಸಿಲ್ ಆಫ್ ಪ್ರಿಸ್ಕೂಲ್ಸ್’ (KCPS) ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ನಿಯಮಗಳನ್ನು ಸರಳೀಕರಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನೆರೆಹೊರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮಕ್ಕಳ ಪಾಲನಾ ಕೇಂದ್ರಗಳಿಗೆ ಬೃಹತ್ ಶಿಕ್ಷಣ ಸಂಸ್ಥೆಗಳಿಗೆ (ಕೆ-12) ಅನ್ವಯಿಸುವ ನಿಯಮಗಳನ್ನು ಹೇರಲಾಗಿದೆ ಎಂದು KCPS ಆರೋಪಿಸಿದೆ. 2019ರ ಸುತ್ತೋಲೆ ಹಾಗೂ ಆಡಳಿತಾತ್ಮಕ ನಿರ್ದೇಶನಗಳಲ್ಲಿ ಇರುವ ಕಠಿಣ ಷರತ್ತುಗಳು ಸಣ್ಣ ಪ್ರಿಸ್ಕೂಲ್‌ಗಳ ಕಾರ್ಯನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಅನುಷ್ಠಾನಗೊಳಿಸಲು ಅಸಾಧ್ಯವಾದ ನಿಯಮಗಳು: 30 ವರ್ಷಗಳ ನೋಂದಾಯಿತ ಗುತ್ತಿಗೆ, 18×20 ಅಳತೆಯ ತರಗತಿಗಳು, ಕನಿಷ್ಠ 2,000 ಚದರ ಅಡಿ ವಿಸ್ತೀರ್ಣ ಮತ್ತು ಕಡ್ಡಾಯ ಭೂ ಪರಿವರ್ತನೆ ನಿಯಮಗಳು ಸಣ್ಣ ಶಾಲೆಗಳಿಗೆ ಹೊರೆಯಾಗಿವೆ.
ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ: ಸ್ವತಂತ್ರ ಪ್ರಿಸ್ಕೂಲ್‌ಗಳು ಮುಚ್ಚಿದರೆ ಪೈಪೋಟಿ ಕೊನೆಯಾಗಿ, ಶುಲ್ಕವು ಐದು ಪಟ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮಧ್ಯಮ ವರ್ಗದ ಪೋಷಕರಿಗೆ ಬಿಸಿ ತುಪ್ಪವಾಗಲಿದೆ.
ಉದ್ಯೋಗಾವಕಾಶಕ್ಕೆ ಸಂಚಕಾರ: ಶಿಕ್ಷಕರು, ಸಿಬ್ಬಂದಿ ಹಾಗೂ ರಕ್ಷಕರು ಸೇರಿದಂತೆ ಸುಮಾರು 4.5 ಲಕ್ಷ ಮಹಿಳಾ ಉದ್ಯೋಗಿಗಳು ಬೀದಿಪಾಲಾಗಲಿದ್ದು, ಸ್ಥಳೀಯ ಶಿಶುಪಾಲನಾ ಕೇಂದ್ರಗಳನ್ನು ನಂಬಿಕೊಂಡಿರುವ ಉದ್ಯೋಗಸ್ಥ ತಾಯಂದೂರು ತೊಂದರೆಗೆ ಸಿಲುಕಲಿದ್ದಾರೆ.
ನೋಂದಣಿ ಪೋರ್ಟಲ್ ಸಮಸ್ಯೆ: ಪ್ರಿಸ್ಕೂಲ್ ನೋಂದಣಿ ಆನ್‌ಲೈನ್ ಪೋರ್ಟಲ್ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಿಲ್ಲದೆ, ಕೇವಲ ಬ್ಲಾಕ್ ಶಿಕ್ಷಣ ಅಧಿಕಾರಿಯ (BEO) ಕಚೇರಿಗೆ ಮಾತ್ರ ಸೀಮಿತವಾಗಿದೆ.
ಈ ಹಿನ್ನೆಲೆಯಲ್ಲಿ ಕಟ್ಟಡ, ಗುತ್ತಿಗೆ ಹಾಗೂ ಭೂ ಪರಿವರ್ತನೆ ನಿಯಮಗಳಿಗೆ ತಕ್ಷಣವೇ ತಡೆ ನೀಡಬೇಕು. ಕೆ-12 ಸಂಸ್ಥೆಗಳ ನಿಯಮಗಳನ್ನು ಕೈಬಿಟ್ಟು, ಪ್ರಿಸ್ಕೂಲ್‌ಗಳಿಗಾಗಿಯೇ ಪ್ರತ್ಯೇಕ ನಿಯಮಾವಳಿ ರೂಪಿಸಬೇಕು ಮತ್ತು ಪಾರದರ್ಶಕ ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಕೆಸಿಪಿಎಸ್ ಆಗ್ರಹಿಸಿದೆ.





Leave a comment