ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವುದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರ ತಿರುಗೇಟು ನೀಡಿದ್ದಾರೆ. ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ 7 ಅಂಶಗಳ ಪಟ್ಟಿಯನ್ನು ಹಂಚಿಕೊಂಡಿರುವ ರಿಜಿಜು, ರಾಹುಲ್ ಗಾಂಧಿ ಅವರು ಪದೇ ಪದೇ ರಹಸ್ಯ ವಿದೇಶಿ ಪ್ರವಾಸಗಳಿಗೆ ಹೋಗುವುದನ್ನು ಬಿಟ್ಟು ದೇಶದಲ್ಲೇ ಹೆಚ್ಚು ಕಾಲ ಕಳೆಯಬೇಕು ಮತ್ತು ಸಂಸತ್ತನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ಈ ಮಾತಿನ ಚಕಮಕಿ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಚರ್ಚೆಗಳಲ್ಲಿ ಭಾಗವಹಿಸಬೇಕು ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸಬೇಕು ಎಂದು ರಿಜಿಜು ಆಗ್ರಹಿಸಿದ್ದಾರೆ.
ವಿದೇಶಿ ಪ್ರವಾಸಗಳಿಗೆ ಕೃತ್ರಿಮ ಬ್ರೇಕ್: ರಾಹುಲ್ ಗಾಂಧಿ ಭಾರತದಲ್ಲೇ ಹೆಚ್ಚು ಸಮಯ ಕಳೆದು, ಆಗಾಗ್ಗೆ ರಹಸ್ಯವಾಗಿ ವಿದೇಶ ಪ್ರವಾಸ ತೆರಳುವುದನ್ನು ನಿಲ್ಲಿಸಬೇಕು.
ಹಿರಿಯರ ಗೌರವ: ಭಾರತೀಯ ಪರಂಪರೆಯಂತೆ ಹಿರಿಯರನ್ನು ಗೌರವಿಸಿ ಅವರಿಂದ ಮೌಲ್ಯಯುತ ಸಲಹೆಗಳನ್ನು ಪಡೆದುಕೊಳ್ಳಬೇಕು.
ರಾಷ್ಟ್ರ ವಿರೋಧಿಗಳ ಜೊತೆ ದೂರ: ಭಾರತ ವಿರೋಧಿ ವ್ಯಕ್ತಿಗಳನ್ನು ಭೇಟಿ ಮಾಡುವುದನ್ನು ಮತ್ತು ಅವರ ಅಜೆಂಡಾವನ್ನು ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಬೇಕು.
ದ್ವೇಷ ರಾಜಕಾರಣಕ್ಕೆ ತಿಲಾಂಜಲಿ: ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಮೋದಿ ಜಿ ಮೇಲಿನ ಆಳವಾದ ದ್ವೇಷವನ್ನು ಮರೆತು, ಬಿಜೆಪಿಯನ್ನು ರಾಜಕೀಯ ವಿರೋಧಿಯಾಗಿ ಕಾಣಬೇಕೆ ಹೊರತು ಶತ್ರುವಿನಂತೆ ಅಲ್ಲ.ಸಂಸತ್ತಿಗೆ ಗಂಭೀರತೆ: ಸಂಸತ್ತನ್ನು ಗಂಭೀರವಾಗಿ ಪರಿಗಣಿಸಿ, ಇತರ ಸಂಸದರಿಗೂ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು.
ಸಂವಿಧಾನದ ಗೌರವ: ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸಬೇಕು.
ಕುಟುಬಾಡಳಿತಕ್ಕೆ ಅಂತ್ಯ: ಕಾಂಗ್ರೆಸ್ ಪಕ್ಷವು ಒಂದು ಪ್ರಜಾಸತಾತ್ಮಕ ಪಕ್ಷವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಮತ್ತು ವಂಶಾಡಳಿತ ರಾಜಕಾರಣವನ್ನು ಮುರಿಯಬೇಕು.
ಸಂಸತ್ತಿನಲ್ಲಿ ಪದೇ ಪದೇ ಕಲಾಪವನ್ನು ಬಹಿಷ್ಕರಿಸುವ ಮತ್ತು ಅಡ್ಡಿಪಡಿಸುವ ವಿಪಕ್ಷಗಳ ನಾಯಕರ ಹಳೆಯ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ರಿಜಿಜು, ಪ್ರಜಾಪ್ರಭುತ್ವ ಮತ್ತು ಚರ್ಚೆಗಳಲ್ಲಿ ನಂಬಿಕೆ ಇಲ್ಲದವರು ಚರ್ಚೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.





Leave a comment