ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ಅರ್ಹ ಮಹಿಳಾ ಯಜಮಾನಿಯರಿಗೆ ನೀಡಲಾಗುವ 2,000 ರೂ. ನೆರವನ್ನು ಆರ್ಥಿಕ ಮುಗ್ಗಟ್ಟು ಹಾಗೂ ಬಜೆಟ್ ಅನುದಾನದ ಕೊರತೆಯಿಂದಾಗಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ತಡೆಹಿಡಿಯಲಾಗಿದೆ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ. ಸುಮಾರು ಒಂದು ಕೋಟಿ ಮಹಿಳೆಯರಿಗೆ ತಲುಪಬೇಕಿದ್ದ ಒಟ್ಟು 4,000 ಕೋಟಿ ರೂ.ಗಳ ಮೊತ್ತ ಬಾಕಿ ಉಳಿದಿದೆ.
ರಿಟ್ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರ, ಸದರಿ ತಿಂಗಳುಗಳ ಅನುದಾನ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದ್ದರೂ, ಆರ್ಥಿಕ ಮಿತಿಗಳಿಂದಾಗಿ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ. ಯೋಜನೆಯಡಿ ಆರ್ಥಿಕ ನೆರವು ನೀಡುವುದು ಬಜೆಟ್ ಹಂಚಿಕೆಗೆ ಒಳಪಟ್ಟಿರುತ್ತದೆಯೇ ಹೊರತು, ಅದನ್ನು ಕಾನೂನುಬದ್ಧ ಹಕ್ಕಾಗಿ ಕೋರುವಂತಿಲ್ಲ ಎಂದು ಸರ್ಕಾರ ವಾದಿಸಿದೆ.
ಬಜೆಟ್ ಮಿತಿ ಕಾರಣ: 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಬಿಡುಗಡೆಯಾಗದಿರಲು ರಾಜ್ಯದ ಗಂಭೀರ ಆರ್ಥಿಕ ಮುಗ್ಗಟ್ಟು ಹಾಗೂ ಬಜೆಟ್ ಮಿತಿಯೇ ಮುಖ್ಯ ಕಾರಣ ಎಂದು ಸರ್ಕಾರ ಕೋರ್ಟ್ ಗೆ ತಿಳಿಸಿದೆ.
ಮೃತ ಫಲಾನುಭವಿಗಳ ವಿಚಾರ: ಸಿಎಜಿ (CAG) ಲೆಕ್ಕಪರಿಶೋಧನೆಯ ವರದಿಯಂತೆ, ಮೃತಪಟ್ಟ 1.08 ಲಕ್ಷ ಫಲಾನುಭವಿಗಳ ಖಾತೆಗಳಿಗೆ ತಪ್ಪಾಗಿ ವರ್ಗಾವಣೆಗೊಂಡಿದ್ದ 115 ಕೋಟಿ ರೂ.ಗಳಲ್ಲಿ ಈಗಾಗಲೇ 15.24 ಕೋಟಿ ರೂ.ಗಳನ್ನು ಮರುಪಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ದೂರು ವಜಾಗೊಳಿಸಲು ಮನವಿ: ಅರ್ಜಿದಾರರು ಕೇವಲ ‘ಕಾಯ್ದುಕೊಂಡ ನಿರೀಕ್ಷೆಯ’ ಆಧಾರದ ಮೇಲೆ ಹಣ ಪಾವತಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸರ್ಕಾರ, ಹೈಕೋರ್ಟ್‌ನಲ್ಲಿ ಈ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದೆ.
ಸರ್ಕಾರವು ಆಧಾರರಾಣ ಆಧರಿಸಿದ ಪಾವತಿ ವ್ಯವಸ್ಥೆ (ABPS) ಮೂಲಕ ಪಾರದರ್ಶಕವಾಗಿ ಹಣ ವರ್ಗಾವಣೆ ಮಾಡುತ್ತಿದ್ದು, ತೆರಿಗೆ ಪಾವತಿದಾರರು ಮತ್ತು ಅನರ್ಹರನ್ನು ವ್ಯವಸ್ಥೆಯಿಂದ ಹೊರಗಿಡಲು ಪರಿಶೀಲನಾ ಪ್ರಕ್ರಿಯೆ ಮುಂದುವರಿದಿದೆ ಎಂದು ತಿಳಿಸಿದೆ.





Leave a comment