SUDDIKSHANA KANNADA NEWS/ DAVANAGERE/ DATE:27-09-2023
ದಾವಣಗೆರೆ (Davanagere): ಜಿಲ್ಲೆಯಲ್ಲಿ ಕದಂಬ, ಹೊಯ್ಸಳ ಹಾಗೂ ಚಾಲುಕ್ಯರ ಶೈಲಿಯ ಶಿಲ್ಪಕಲೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಜಿಲ್ಲೆಯ ಹೂಡಿಕೆದಾರರು ಹೋಟೆಲ್, ರೆಸಾರ್ಟ್ಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು ಹಾಗೂ ತಮ್ಮ ವೈಯಕ್ತಿಕ ಆದಾಯ ಮತ್ತು ಜಿಲ್ಲೆಯ ಜಿ.ಡಿ.ಪಿ ಪ್ರಮಾಣವನ್ನೂ ಹೆಚ್ಚಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಬಿಜೆಪಿಯಲ್ಲಿದ್ದೇನೆಂದು ಎದೆಬಗೆದು ತೋರಿಸಬೇಕಾ, ಕಾಲ ಬಂದಾಗ ಎಲ್ಲದಕ್ಕೂ ಉತ್ತರ: ಎಂ. ಪಿ. ರೇಣುಕಾಚಾರ್ಯ
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗದೊಂದಿಗೆ ನಗರದ ಎಸ್.ಎಸ್.ಕನ್ವೆಂಷನ್ ಸೆಂಟರ್ನ ಪಾರ್ವತಿ ಪರ್ಲ್ ಮಿನಿ ಹಾಲ್ನಲ್ಲಿ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ ಎಂಬ ಸಂದೇಶದೊಂದಿಗೆ ಜರುಗಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ವೀಡಿಯೋ ಚಿತ್ರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದು ಇಲ್ಲಿ ಇನ್ನೂ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ವಿಫುಲ ಅವಕಾಶಗಳಿವೆ. ಜಿಲ್ಲೆಯು ಮಧ್ಯ ಕರ್ನಾಟಕದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರೈಲ್ವೇ ಮಾರ್ಗವನ್ನೂ ಒಳಗೊಂಡಿದೆ. ಆದ್ದರಿಂದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸಲು ಸಾಕಷ್ಟು ಅವಕಾಶಗಳಿವೆ. 1980 ರಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವದಾದ್ಯಂತ ವಿಶಿಷ್ಟವಾಗಿ ಆಚರಿಸುತ್ತಾ ಬರಲಾಗಿದೆ. ಇದರ ಮುಖ್ಯ ಉದ್ದೇಶ ಸಾಂಸ್ಕøತಿಕ, ವ್ಯಾಪಾರ, ಭಾಷೆ ದೃಷ್ಟಿಯಿಂದ ಜನರನ್ನು ಆಕರ್ಷಣೆಗೆ
ಒಳಗಾಗುವಂತೆ ಮಾಡುವುದಾಗಿದೆ ಎಂದರು.
ಪ್ರವಾಸಿ ತಾಣವೆಂದರೆ ಪ್ರವಾಸಿಗರಿಗೆ ಒಂದು ಹೊಸ ಅನುಭವ, ಆಕರ್ಷಣೆ ಹಾಗೂ ಶುಚಿತ್ವ ಹೊಂದಿದಾಗ ಮಾತ್ರ ಪ್ರವಾಸೋದ್ಯಮ ಕ್ಷೇತ್ರವು ಮುಂದುವರೆಯಲು ಸಾಧ್ಯ. ಇಡೀ ವಿಶ್ವದಲ್ಲೇ ಸ್ವಿಡ್ಜರ್ಲ್ಯಾಂಡ್, ಯುರೋಪಿಯನ್ ದೇಶಗಳಂತೆಯೇ ನಮ್ಮ ದೇಶದ ಗೋವಾ, ಕೇರಳ ರಾಜ್ಯಗಳು ತನ್ನ ಸಂಪೂರ್ಣ ಜಿ.ಡಿ.ಪಿ ಯನ್ನು ಶೇ.90 ರಷ್ಟು ಆದಾಯವನ್ನು ಪ್ರವಾಸೋದ್ಯಮದಿಂದಲೇ ಪಡೆಯುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಧು ಎಲ್.ಪಿ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕ ಜಹೀರ್ ಖಾನ್ ಹಾಗೂ ಹೋಟೆಲ್ ಉದ್ದಿಮೆದಾರರು ಉಪಸ್ಥಿತರಿದ್ದರು.