SUDDIKSHANA KANNADA NEWS/ DAVANAGERE/ DATE-16-06-2025
ದಾವಣಗೆರೆ: ಸಿಎಂ ಸಿದ್ದರಾಮಯ್ಯರು ದಾವಣಗೆರೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಆಗಮಿಸಲು ನಗರಕ್ಕೆ ಆಗಮಿಸಿದ್ದರು. ಸರ್ಕ್ಯೂಟ್ ಹೌಸ್ ಬಳಿ ಮನವಿ ಸಲ್ಲಿಸಲು ಬಂದಿದ್ದರು. ರೈತರಿಂದ ಮನವಿ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ರೈತ ಸಂಘದ ಮುಖಂಡರು ಮುಖ್ಯಮಂತ್ರಿ ಕಾರು ಮುಂದೆ ಹೋಗಲು ಅಡ್ಡಿಪಡಿಸಿದ ಘಟನೆ ನಡೆದಿದೆ.
ಜಿಲ್ಲೆಯ ಅಭಿವೃದ್ದಿಗೆ 1359 ಕೋಟಿ ರೂಪಾಯಿ ನೀಡಿರುವ ರಾಜ್ಯ ಸರ್ಕಾರವು ಕೆರೆ ಹೂಳೆತ್ತಲು ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಒತ್ತಾಯಿಸಲು ರೈತ ಮುಖಂಡ ಬಲ್ಲೂರು ರವಿಕುಮಾರ್ ನೇತೃತ್ವದಲ್ಲಿ ಆಗಮಿಸಿದ್ದರು. ಸಿದ್ದರಾಮಯ್ಯರು ರಸ್ತೆಮಾರ್ಗವಾಗಿ ಕಾರಿನಲ್ಲಿ ಬಂದ ಕಾರಣ ಸ್ವಲ್ಪ ತಡವಾಗಿತ್ತು. ಹಾಗಾಗಿ, ಶಾಮನೂರು ಶಿವಶಂಕರಪ್ಪರ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಹೊರಡಲು ಅಣಿಯಾದರು.

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಡ್ರೈವರ್ ಸೀಟ್ ನಲ್ಲಿ ಕುಳಿತು ವಾಹನ ಚಲಾಯಿಸುತ್ತಿದ್ದರು. ಈ ವೇಳೆ ಮನವಿ ಸ್ವೀಕರಿಸಲಿಲ್ಲ ಎಂದು ರೊಚ್ಚಿಗೆದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆಯಿತು.
ಬಲ್ಲೂರು ರವಿಕುಮಾರ್ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಸಿಎಂ ಕಾರಿನ ಮುಂದೆ ಅಡ್ಡಲಾಗಿ ಮಲಗಿದರು. ಆಗ ಪೊಲೀಸರು ಸ್ಥಳದಿಂದ ತೆರವುಗೊಳಿಸಲು ಪರದಾಡಬೇಕಾಯಿತು. ರೈತರು ಮನವಿ ಸಲ್ಲಿಸಲು ಬಂದರೆ ಪೊಲೀಸರು ಅವಕಾಶ ನೀಡಲಿಲ್ಲವೆಂದರೆ ಹೇಗೆ? ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ಕಾರು ಚಲಾಯಿಸುತ್ತಿದ್ದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ರೈತರು ಸಿಎಂ ಮನವಿ ಸ್ವೀಕರಿಸಲೇಬೇಕೆಂದು ಪಟ್ಟುಹಿಡಿದರು. ಪೊಲೀಸರು ಎಷ್ಟೇ ಸಮಾಧಾನಪಡಿಸಲು ಮುಂದಾದರೂ ರೈತ ಮುಖಂಡರು ಕೇಳಲಿಲ್ಲ. ನಾಡಿನ ದೊರೆ ಬಂದಾಗ ನಮ್ಮ ಮನವಿ ಸ್ವೀಕರಿಸದಿದ್ದರೆ ಹೇಗೆ? ಅಷ್ಟೊಂದು ರೈತರ ಬಗ್ಗೆ ತಾತ್ಸಾರನಾ? ಸಿಎಂ ಸಿದ್ದರಾಮಯ್ಯರು ಒಳ್ಳೆಯ ವ್ಯಕ್ತಿ. ಆದ್ರೆ, ಭದ್ರತಾ ಪಡೆ ಸಿಬ್ಬಂದಿ ದುರ್ವರ್ತನೆ ತೋರಿದರು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಪೊಲೀಸರು ಪ್ರತಿಭಟನಾಕಾರರ ಸಮಾಧಾನಪಡಿಸಿ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.
ಭದ್ರತಾ ಸಿಬ್ಬಂದಿ ಸಸ್ಪೆಂಡ್ ಮಾಡಬೇಕು. ಪೊಲೀಸರು ಸರಿಯಾದ ಮಾಹಿತಿ ನೀಡಲಿಲ್ಲ. ನಮ್ಮನ್ನೇ ದಬ್ಬುತ್ತಾರೆ. ರೈತರು ಬೆಳೆದು ಕಷ್ಟಪಡುತ್ತಾರೆ. ಮುಖ್ಯಮಂತ್ರಿಯವರು ಮನೆಯಿಂದ ಸಂಬಳ ತಂದುಕೊಡುತ್ತಾರಾ? ಸೆಕ್ಯುರಿಟಿ ಸಿಬ್ಬಂದಿ ಮನಬಂದಂತೆ ತಳ್ಳುತ್ತಾರೆ. ಎಸ್ಪಿ ಬಂದು ಕರೆದರೂ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು. ಇದನ್ನು ರೈತ ಸಂಘ ಖಂಡಿಸುತ್ತದೆ ಎಂದು ಬಲ್ಲೂರು ರವಿಕುಮಾರ್ ಹೇಳಿದರಲ್ಲದೇ, ನಾವು ಶಕ್ತಿ ಪ್ರದರ್ಶಿಸುತ್ತೇವೆ. ವಿಧಾನಸೌಧ, ಪಾರ್ಲಿಮೆಂಟ್ ನಲ್ಲಿ ಜೆರಾಕ್ಸ್ ಮಾಡ್ತಾರಾ, ರೈತರು ಬೆಳೆದರೆ ಅಲ್ವಾ ಸಿಗೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.