ದಾವಣಗೆರೆ: ಕಾಂಗ್ರೆಸ್ ನಾಯಕರ ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಮೂರ್ಖತನದ ಪರಮಾವಧಿ. ಬಾಯಲ್ಲಿ ಶಾಂತಿ ಮಂತ್ರ ಜಪಿಸುತ್ತಾ ಹಿಂಸೆಯ ಮಾತುಗಳನ್ನಾಡುವ ಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯಲು ನಾಲಾಯಕ್. ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಸಂಶೋಧನೆ ಮತ್ತು ತರಬೇತಿ ವಿಭಾಗದ ಸಂಚಾಲಕ ಹಾಗೂ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಬಿ. ಎನ್. ವಿನಾಯಕ್ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕರ ಈ ಪ್ರಚೋದನಕಾರಿ ಮತ್ತು ಹಿಂಸಾತ್ಮಕ ಹೇಳಿಕೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಬದ್ಧವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಮಾತನಾಡಬೇಕು. ಆದರೆ ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆಯಲ್ಲಿರುವವರು ಈ ರೀತಿ ಬೀದಿ ರೌಡಿಗಳಂತೆ ಮಾತನಾಡುವುದು ಬಿಜೆಪಿಯ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹೇಳಿಕೆ ತಿರುಚಲಾಗಿದೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಬಾಲಿಶವಾಗಿದೆ. ಕಳೆದ ವಾರವಷ್ಟೇ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ನಾಯಕರ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ
ಮಾತನಾಡಿದ್ದರು. ಈಗ ಛಲವಾದಿ ನಾರಾಯಣಸ್ವಾಮಿ ಸರದಿ. ಬಿಜೆಪಿ ನಾಯಕರದ್ದು ಬೆದರಿಕೆ ಹಾಕುವ ಸಂಸ್ಕೃತಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದೇ ಈ ರೀತಿಯಾಗಿ ಬೆದರಿಕೆ ಹಾಕುವಂತ ಹೇಳಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಎಫ್ಆಆರ್ ದಾಖಲಿಸಿ ಕೂಡಲೇ ಬಂಧಿಸಬೇಕು. ಕಾಂಗ್ರೆಸ್ ನಾಯಕರು ಹಾಗೂ
ರಾಜ್ಯ ಜನತೆ ಕ್ಷಮೆಯಾಚಿಸದಿದ್ದರೆ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬಿ. ಎನ್. ವಿನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.





Leave a comment