SUDDIKSHANA KANNADA NEWS/ DAVANAGERE/ DATE-15-06-2025
ದಾವಣಗೆರೆ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪ ಅಚ್ಚಳಿಯದ ಹೆಸರು. ವಿಧಾನಸಭೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿಯೂ ಸೋಲು ಕಾಣದ ಸರದಾರ ಎಂಬ ಕೀರ್ತಿ ಹೊಂದಿರುವ ಶಿವಶಂಕರಪ್ಪ ಅಂದುಕೊಂಡಿದ್ದನ್ನು ಸಾಧಿಸುವ ಛಲದಂಕಮಲ್ಲರು. ಒಂದು ಗುಟುರು ಹಾಕಿದರೆ ಸಾಕು, ರಾಜ್ಯ ರಾಜಕಾರಣದಲ್ಲಿ ಸುಂಟರಗಾಳಿಯೇ ಎದ್ದುಬಿಡುತ್ತೆ. ಮಾತು ಕಡಿಮೆ ಆಡಿದರೂ ತೂಕದ್ದೇ. ಇದು ಹಲವಾರು ಬಾರಿ ಸಾಬೀತು ಆಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಶಾಸಕರು. ಮುತ್ಸದ್ಧಿ ರಾಜಕಾರಣಿ. ದಾವಣಗೆರೆ ಜನತೆಯ ಪಾಲಿನ ಧಣಿ. ಸೋಲರಿಯದ ಸರದಾರ ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪರು ಇಳಿವಯಸ್ಸಿನಲ್ಲಿಯೂ ಕನ್ನಡಕ ಧರಿಸದೇ ಪತ್ರಿಕೆ ಓದುತ್ತಾರೆ, ಅಂಗಡಿಗೆ ಹೋದರೆ ಬೇಳೆ, ಕಾಳು ಸೇರಿದಂತೆ ಎಲ್ಲವನ್ನೂ ಪರೀಕ್ಷಿಸುತ್ತಾರೆ. ಬದುಕೇ ಒಂದು ಆದರ್ಶ. ಜೀವನವೇ ಎಲ್ಲರಿಗೂ ಮಾದರಿ.
ದಾವಣಗೆರೆ ಇಷ್ಟೊಂದು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗಲು ಕೊಟ್ಟಿರುವ ಕೊಡುಗೆ ಅಪಾರ. ದಾವಣಗೆರೆಯ ದಣಿವರಿಯದ ರಾಜಕಾರಣಿ ಎಂದರೆ ಅದು ಎಸ್. ಎಸ್. ಮಾತ್ರ. ರಾಜಕೀಯ ಅಷ್ಟೇ ಅಲ್ಲದೇ ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು. ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಅಮೃತ ಪುರುಷ ಡಾ. ಶಾಮನೂರು ಶಿವಶಂಕರಪ್ಪ.
ದೈವಭಕ್ತರು:
ಈ ವಯಸ್ಸಿನಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳಿಗೆ ಗೈರಾಗುವುದಿಲ್ಲ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ, ವಿವಿಧ ಮಠಾಧೀಶರ ಆಶೀರ್ವಾದ ಪಡೆದಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೂ ಸಾಟಿ ಇಲ್ಲ. ದೇಗುಲಗಳಿಗೆ ಅನುದಾನ, ಸಮಾಜಸೇವೆ, ದಾನ ಧರ್ಮಕ್ಕೆ ಹೆಸರುವಾಸಿ. ಮಧ್ಯಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ದಾವಣಗೆರೆ ರಾಜಕಾರಣ ಶಾಮನೂರು ಶಿವಶಂಕರಪ್ಪರನ್ನು ಬಿಟ್ಟು ಇಲ್ಲ ಎನ್ನುವಂತಾಗಿದೆ ಈಗ. ದೇವಸ್ಥಾನಗಳಿಗೆ ಇಳಿ ವಯಸ್ಸಿನಲ್ಲಿಯೂ ಹೋಗುವ ಶಿವಶಂಕರಪ್ಪರು ಶ್ರದ್ಧಾ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಕಲ್ಲೇಶ್ವರ ದೇಗುಲ, ದುರ್ಗಾಂಬಿಕಾ ದೇವಸ್ಥಾನ, ಶಾಮನೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಈಗಲೂ ಪೂಜಿಸುವುದು ಶಿವಶಂಕರಪ್ಪರ ದೈವ ಭಕ್ತಿಗೆ ಸಾಕ್ಷಿ ಎಂದರೆ ಉತ್ಪ್ರೇಕ್ಷೆ ಅಲ್ಲ.
ಜಾತ್ಯಾತೀತ ನಾಯಕ:
ಶಾಮನೂರು ಶಿವಶಂಕರಪ್ಪರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್, ಪಿಜಿಆರ್ ಸಿಂಧ್ಯಾ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ರಾಜಕಾರಣಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಆಜಾತಶತ್ರು ಅಂತಾನೇ ರಾಜಕೀಯದಲ್ಲಿ ಪ್ರಸಿದ್ಧಿ.
ಸರ್ಕಾರ ಯಾವುದೇ ಇರಲಿ, ಸಮುದಾಯದ ಪರ, ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ನಿಲ್ಲುವ ಶಾಮನೂರು ಶಿವಶಂಕರಪ್ಪರು ದಾವಣಗೆರೆ ಮಾತ್ರವಲ್ಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಜಾತ್ಯಾತೀತ ನಾಯಕರೆಂದೇ ಕರೆಯಲ್ಪಡುತ್ತಾರೆ.
ಹ್ಯಾಟ್ರಿಕ್ ಗೆಲುವು:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಮುದಾಯದ ಪ್ರಮುಖ ನಾಯಕ. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಬಂದಾಗ ವೀರಶೈವ ಲಿಂಗಾಯತರು ಒಂದೇ ಎಂದು ಪ್ರತಿಪಾದಿಸಿದವರು. ವೀರಶೈವ ಲಿಂಗಾಯತ ಸಮಾಜ ಒಡೆಯಲು ಬಿಡಲಿಲ್ಲ. ಜೊತೆಗೆ ಜಾತಿಗಣತಿ ವಿಚಾರದಲ್ಲಿಯೂ ಅವರು ತೋರಿದ ಖಡಕ್ ನಿಲುವು ಅನನ್ಯ. ಶಿಕ್ಷಣ ತಜ್ಞ, ಕೈಗಾರಿಕೋಧ್ಯಮಿ, ಆದರ್ಶ ರಾಜಕಾರಣಿ ಹೀಗೆ ಹಲವು ಬಿರುದುಗಳಿಂದ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ ಕರ್ನಾಟಕ ಕಂಡ ನಿಷ್ಕಳಂಕ, ಅದ್ಭುತ ರಾಜಕಾರಣಿ.
ಜನನ:
ಜೂನ್ 16, 1931ರಲ್ಲಿ ಕಲ್ಲಪ್ಪ, ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶಾಮನೂರು ಶಿವಶಂಕರಪ್ಪ ಅವರು ದ್ವಿತೀಯ ಪಿಯುಸಿ ಯನ್ನು ಆ ಕಾಲದಲ್ಲಿ ಮುಗಿಸಿದ್ದರು. ಪಾರ್ವತಮ್ಮ ಅವರನ್ನು ಮದುವೆಯಾದರು, ಈಗಿನ ಸಚಿವ ಎಸ್.
ಎಸ್. ಮಲ್ಲಿಕಾರ್ಜುನ್, ಎಸ್ ಎಸ್ ಬಕ್ಕೇಶ್, ಎಸ್ ಎಸ್ ಗಣೇಶ್ ಸೇರಿದಂತೆ ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳನ್ನು ಕಂಡಿರುವ ಹಿರಿಯ ಜೀವ. ಕಾಟನ್ ಮಿಲ್ ಗಳಿಂದ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಪ್ರಸಿದ್ಧಿಯಾಗಿತ್ತು. ಆದರೆ ಕೆಲವೊಂದು ತಿಕ್ಕಾಟಗಳಿಂದ ಕಾಟನ್ ಮಿಲ್ ಗಳು ಬಂದ್ ಆದವು, ಆಗ ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದ ಅಭ್ಯುದಯಕ್ಕೆ ಬೂಸ್ಟ್ ನೀಡಿದವರೇ ಶಾಮನೂರು ಶಿವಶಂಕರಪ್ಪ.
1975ರಲ್ಲಿ ಬಾಪೂಜಿ ವಿದ್ಯಾಸಂಸ್ಥೆ ನೇತೃತ್ವ ವಹಿಸಿಕೊಂಡು ಶಾಲೆ, ಕಾಲೇಜು, ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜ್ ಗಳನ್ನ ಉನ್ನತ ಸ್ಥಾನಕ್ಕೆ ಏರಿಸಿದ್ದು ಇತಿಹಾಸ. ಡಾ ಶಿವಶಂಕರಪ್ಪ ಅವರು ಕಲೆ, ವಿಜ್ಞಾನ, ವಾಣಿಜ್ಯ, ಕಾನೂನು ನಿರ್ವಹಣೆ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನ ಉನ್ನತಿಕರಿಸಿದ್ದಾರೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳಿಂದ ಹೊರಬರುತ್ತಾರೆ. ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳ ಸ್ಥಾಪನೆಯು ದಾವಣಗೆರೆ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಈ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯುವುದರಿಂದ, ಸಣ್ಣ ವ್ಯಾಪಾರ ಚಟುವಟಿಕೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗಿದೆ.
ಕರ್ನಾಟಕ ರಾಜ್ಯದ ದಾವಣಗೆರೆ ಶಿಕ್ಷಣ ಕೇಂದ್ರದ ಸಂಪೂರ್ಣ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ ಡಾ. ಶಾಮನೂರು ಶಿವಶಂಕರಪ್ಪ. ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ 5 ಕೋಟಿ ರೂ. ಮೀಸಲಿಟ್ಟು ದಾವಣಗೆರೆ ಜಿಲ್ಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗಾಗಿ 1 ಕೋಟಿ ರೂ. ಈ ಠೇವಣಿಗಳ ಬಡ್ಡಿಯನ್ನು ಕರ್ನಾಟಕದಾದ್ಯಂತ ಅವರ ಜಾತಿ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ಪಾವತಿಸಲಾಗುತ್ತದೆ. ಚಾಣಾಕ್ಷ ಉದ್ಯಮಿಯಾಗಿರುವ ಅವರು ಅಭಿವೃದ್ಧಿಗೆ ಬ್ಯಾಂಕ್‌ಗಳ ಅಗತ್ಯವನ್ನು ಮುಂದಿಟ್ಟುಕೊಂಡು ಬಾಪೂಜಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ, ಉದ್ಯೋಗಿಗಳಿಗೆ ಮನೆ ನಿರ್ಮಾಣ, ನಿವೇಶನ ಖರೀದಿ, ಮಕ್ಕಳಿಗೆ ಶಿಕ್ಷಣ ಸಾಲ, ವ್ಯಾಪಾರ ಸಾಲಗಳಿಗೆ ಸಾಲ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ನಗರ ಸಹಕಾರಿ ಬ್ಯಾಂಕ್‌ಗಳ ಸಂಘದ ಗೌರವಾಧ್ಯಕ್ಷರಾಗಿರುವ ಶಾಮನೂರು ಸಹಕಾರಿ ಕ್ಷೇತ್ರದಲ್ಲೂ ಪರಿಣಿತರಾಗಿದ್ದಾರೆ..
ಡಾ.ಶಿವಶಂಕರಪ್ಪ ದಾವಣಗೆರೆಯ ಮಹಾನ್ ಉಪಕಾರಿ. ಸಾಮಾಜಿಕ ಉದ್ದೇಶಗಳಿಗಾಗಿ ಉದಾರವಾಗಿ ದಾನ ನೀಡಿದ್ದಾರೆ, ನೀಡುತ್ತಲೇ ಬರುತ್ತಿದ್ದಾರೆ. ದಾವಣಗೆರೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ, ನೆರೆಯ ರಾಜ್ಯಗಳಲ್ಲಿನ ದೇವಸ್ಥಾನಗಳಲ್ಲಿ ಊಟದ ಹಾಲ್ ಗಳನ್ನು ನಿರ್ಮಿಸಿದ್ದಾರೆ. ಅವರು ಬಡವರಿಗೆ ಉಚಿತವಾಗಿ ನೀಡುವ ಉದ್ದೇಶದಿಂದ ದಾವಣಗೆರೆಯಲ್ಲಿ ಶಿವ ಪಾರ್ವತಿ ಕಲ್ಯಾಣಮಂಟಪ ನಿರ್ಮಿಸಿದ್ದಾರೆ.
ಸಂಜೀವಿನಿ ಕೊಟ್ಟ ಎಸ್.ಎಸ್.:
ವಿಶ್ವವನ್ನೇ ವ್ಯಾಪಿಸಿದ್ದ ಕೊರೊನಾ ಸಂಕಷ್ಟದ ವೇಳೆಯಲ್ಲಿ ಕೋವಿಡ್ ಲಸಿಕೆಗೆ ಭಾರೀ ಬೇಡಿಕೆ ಇತ್ತು. ಸರ್ಕಾರ ನೀಡದಿದ್ದಾಗ ಸ್ವಂತ ಖರ್ಚಿನಲ್ಲಿಯೇ ಲಸಿಕೆ ಕೊಡಿಸಿದವರು. ಡಾ. ಶಿವಶಂಕರಪ್ಪ ಅವರು ಬಡವರಿಗಾಗಿ ಬರೋಬ್ಬರಿ 6ಕೋಟಿ ರೂಪಾಯಿ ಸ್ವಂತ ಹಣ ಪಾವತಿಸಿ 60,000 ಡೋಸ್ ಕೋವಿಡ್ -19 ಲಸಿಕೆಗಳನ್ನು ಖರೀದಿಸಿ ಉಚಿತವಾಗಿ ಜನರಿಗೆ ಹಂಚಿದ್ದು, ಜನಪರ ಕಾಳಜಿಗೆ ಸಾಕ್ಷಿ.
ಶಿವಶಂಕರಪ್ಪ ಶಿಕ್ಷಣ ತಜ್ಞರಷ್ಟೇ ಅಲ್ಲ, ದೊಡ್ಡ ಉದ್ಯಮಿಯೂ ಹೌದು. ದಾವಣಗೆರೆ ಜಿಲ್ಲೆ ಭದ್ರಾ ಕಾಲುವೆಯಿಂದ ನೀರಾವರಿಗೆ ಒಳಪಡುತ್ತದೆ ಮತ್ತು ಅಕ್ಕಿ ಮತ್ತು ಕಬ್ಬನ್ನು ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ರೈತರು ತಮ್ಮ ಕಬ್ಬನ್ನು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆಯ ಅವಶ್ಯಕತೆ ಇತ್ತು, ದಾವಣಗೆರೆ ಸಮೀಪದ ಕುಕ್ಕುವಾಡದಲ್ಲಿ ದಾವಣಗೆರೆ ಶುಗರ್ ಮಿಲ್ಫ್ ಎಂಬ ಸಕ್ಕರೆ ಕಾರ್ಖಾನೆಯಿದ್ದು ಸರಿಯಾಗಿ ನಿರ್ವಹಣೆಯಾಗುತ್ತಿರಲಿಲ್ಲ, ಅವರು ಕಾರ್ಖಾನೆಯ ಜವಾಬ್ದಾರಿ ವಹಿಸಿಕೊಂಡು ಅದನ್ನು ಆಧುನೀಕರಿಸಿದರು ಮತ್ತು ಈಗ ಅದನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಜೊತೆಗೆ ದುಗ್ಗಾವತಿಯಲ್ಲಿ ಮತ್ತೊಂದು ಸಕ್ಕರೆ ಕಾರ್ಖಾನೆಯನ್ನು ಸಹ ಪ್ರಾರಂಭಿಸಿದರು. ಇದು ಹಿಂದಿನವರಿಗೆ ತಮ್ಮ ಕಬ್ಬಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಉದ್ಯೋಗ ಸಾಮರ್ಥ್ಯವನ್ನು ಸೃಷ್ಟಿಸಿದೆ.
ರಾಜಕೀಯ ಹಿನ್ನೆಲೆ:
ಶಾಮನೂರು ಶಿವಶಂಕರಪ್ಪನವರು 1972ರಲ್ಲಿ ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 2008, 2013, 2018, 2023ರಲ್ಲಿ ಒಟ್ಟು ನಾಲ್ಕು ಬಾರಿ ಎಂಎಲ್ ಎ ಚುನಾವಣೆಯಲ್ಲಿ ಜಯಗಳಿಸಿದ್ದು, 1998-1999ರ ಒಂದು ವರ್ಷದ ಅವಧಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದರು,
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿ ಜನಮನ್ನಣೆ ಪಡೆದವರು, ಮೂರು ದಶಕಗಳಿಂದ ಕೆಪಿಸಿಸಿ ಖಚಾಂಜಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯೂ ಎಸ್. ಎಸ್. ಅವರದ್ದು.
ನಿಷ್ಠುರವಾದಿ ರಾಜಕಾರಣಿ:
ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿದ್ದ ಶಾಮನೂರು ಶಿವಶಂಕರಪ್ಪರು ಸಿಎಂ ಸಿದ್ದರಾಮಯ್ಯ ವಿರುದ್ದವೇ ತೊಡೆ ತಟ್ಟಿ ನಿಂತಿದ್ದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು, ಪಟ್ಟು ಬಿಡದ ಶಾಮನೂರು ಪ್ರತ್ಯೇಕ ಧರ್ಮ ಆಗಲು ಅವಕಾಶ ಕೊಡಲಿಲ್ಲ, ಡಾ. ಶಾಮನೂರ ಶಿವಶಂಕರಪ್ಪ ಸತತ 3ನೇ ಬಾರಿಗೆ ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಈ ಇಳಿ ವಯಸ್ಸಿನಲ್ಲೂ ಸಮಾಜದ ಕೆಲಸದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದ್ದು ಇವರೇ.
ಸುವರ್ಣ ಕರ್ನಾಟಕದ ಆತ್ಯುತ್ತಮ ಕೈಗಾರಿಕೋದ್ಯಮಿ, ಸಿರಿಗೆರೆ ಮಠದಿಂದ ಧರ್ಮ ಚೂಡಾಮಣಿ, ಚಿತ್ರದುರ್ಗ ಮಠದಿಂದ ಶಿಕ್ಷಣ ಸುಧಾರಕ, ಅದಿನಾಥ ಪ್ರತಿಷ್ಠಾನದಿಂದ ಶತಮಾನದ ಶ್ರೇಷ್ಟರು, ಇತರ ಪ್ರತಿಫಲಗಳು ಶಿರೋಮಣಿವಿಕಾಸ, ಇಂದಿರಾ ಪ್ರಿಯದರ್ಶಿನಿ, ಸಮಾಜಶ್ರೀ, ಭಾರತ ಗೌರವ, ನಿತ್ಯಸೇವಾಯಜ್ಞಧಾರಿ, ಅಂತರಾಷ್ಟ್ರೀಯ ವ್ಯಾಪಾರ ಕುಶಾಗ್ರಮತಿ ಇತ್ಯಾದಿ, 2008 ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಅಮೋಘ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ಶಾಮನೂರು ಶಿವಶಂಕರಪ್ಪನವರ ಸೇವೆಗೆ ಸಂದ ಗೌರವವಾಗಿದೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರು 95ನೇ ವರ್ಷದ ಸಂಭ್ರಮದಲ್ಲಿದ್ದು, ದೇವರು ಆಯಸ್ಸು, ಆರೋಗ್ಯ, ರಾಜಕಾರಣದಲ್ಲಿ ಮತ್ತಷ್ಟು ಉನ್ನತ ಹುದ್ದೆಗೆ ಏರುವಂತ ಶಕ್ತಿ ನೀಡಲಿ ಎಂಬುದು ಎಲ್ಲರ ಪ್ರಾರ್ಥನೆ.