Home ದಾವಣಗೆರೆ ದಾವಣಗೆರೆ ಬಾಡಾ ಕ್ರಾಸ್ ಕೆಳಸೇತುವೆ ಅಗಲ 30 ಮೀಟರ್‌ಗೆ ವಿಸ್ತರಣೆ: 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಬಾಡಾ ಕ್ರಾಸ್ ಕೆಳಸೇತುವೆ ಅಗಲ 30 ಮೀಟರ್‌ಗೆ ವಿಸ್ತರಣೆ: 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ

Share
ದಾವಣಗೆರೆ
Share

ದಾವಣಗೆರೆ: ನಗರದ ಪ್ರಮುಖ ಪ್ರವೇಶದ್ವಾರವಾದ ಬಾಡಾ ಕ್ರಾಸ್ ಬಳಿ ವಾಹನ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ₹15.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಹನ ಕೆಳಸೇತುವೆ ಕಾಮಗಾರಿಗೆ ಮಂಗಳವಾರ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಭೂಮಿಪೂಜೆ ನೆರವೇರಿಸಿದರು.

ರಾಷ್ಟ್ರೀಯ ಹೆದ್ದಾರಿ–48ರ ಚಿತ್ರದುರ್ಗ–ದಾವಣಗೆರೆ ನಡುವಿನ ಆರು ಪಥಗಳ ಅಭಿವೃದ್ಧಿ ಯೋಜನೆಯಡಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವತಿಯಿಂದ ಬಾಡಾ ಕ್ರಾಸ್ ಸಮೀಪ ಕಿ.ಮೀ. 255+770ರಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ನಗರದ ಪ್ರಮುಖ ಪ್ರವೇಶದ್ವಾರವಾದ ಬಾಡಾ ಕ್ರಾಸ್‌ನಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ, ಅಪಘಾತಗಳ ಸಂಭವ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಹಕಾರದೊಂದಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ. ಬೆಂಗಳೂರು ಮತ್ತು ದಾವಣಗೆರೆಯಲ್ಲಿ ನಡೆದ ಸಭೆಗಳಲ್ಲಿ ಸ್ಥಳೀಯರ ಬೇಡಿಕೆಗಳನ್ನು ಪ್ರಸ್ತಾಪಿಸಿ, ಯೋಜನೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಒತ್ತಾಯಿಸಲಾಗಿತ್ತು ಎಂದು ಹೇಳಿದರು.

ಅಗಲ ಹೆಚ್ಚಳಕ್ಕೆ ಹೆಚ್ಚುವರಿ ₹1.9 ಕೋಟಿ

ಆರಂಭಿಕ ಯೋಜನೆಯಲ್ಲಿ ಕೆಳಸೇತುವೆಯ ಅಗಲ 24 ಮೀಟರ್‌ಗಳಷ್ಟಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ನಡೆಸಿದ ಚರ್ಚೆಯ ಬಳಿಕ ಅದನ್ನು 30 ಮೀಟರ್‌ಗೆ ವಿಸ್ತರಿಸಲು ಒಪ್ಪಿಗೆ ದೊರೆತಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ₹1.9 ಕೋಟಿ ಮಂಜೂರಾಗಿದ್ದು, ಪರಿಷ್ಕೃತ ಕಾಮಗಾರಿಯ ಒಟ್ಟು ವೆಚ್ಚ ಸುಮಾರು ₹15.90 ಕೋಟಿಗೆ ತಲುಪಿದೆ. ಕೆಳಸೇತುವೆಯ ಅಗಲ ಮತ್ತು ಎತ್ತರವನ್ನು ಸಂಚಾರದ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿಸುವುದರ ಜೊತೆಗೆ, ಸಮೀಪದ ವೃತ್ತದಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಆದ್ಯತೆ ನೀಡಲಾಗಿದೆ. ಇದರಿಂದ ಬೆಂಗಳೂರು, ಹುಬ್ಬಳ್ಳಿ ಹಾಗೂ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕೆಳಸೇತುವೆ ಕಾಮಗಾರಿಯನ್ನು ಒಪ್ಪಂದದ ಅವಧಿಯಾದ 11 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕಾಮಗಾರಿಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ನಿರ್ಮಾಣದ ಅವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಸದರು ಸೂಚಿಸಿದರು.

ಜಗಳೂರು ಕ್ಷೇತ್ರದ ಕಲ್ಲೇದೇವರಪುರ, ಹಳೇಬಾತಿ ಸೇರಿದಂತೆ ವಿವಿಧೆಡೆ ಸರ್ವೀಸ್ ರಸ್ತೆಗಳಲ್ಲಿ ಮಳೆನೀರು ನಿಂತು ಸಾರ್ವಜನಿಕರು ಹಾಗೂ ರೈತರು ತೊಂದರೆ ಅನುಭವಿಸುತ್ತಿರುವ ಕುರಿತು ಸಂಸದರು ಅಧಿಕಾರಿಗಳ ಗಮನ ಸೆಳೆದರು. ಅವೈಜ್ಞಾನಿಕ ರಸ್ತೆ ನಿರ್ಮಾಣ, ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆ ಮತ್ತು ಕೆಳಸೇತುವೆಗಳಲ್ಲಿ ನೀರು ಸಂಗ್ರಹವಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.

ಅದೇ ರೀತಿ, ಆವರಗೆರೆ ಭಾಗದಲ್ಲಿ ಅಪೂರ್ಣಗೊಂಡಿರುವ ಸರ್ವೀಸ್ ರಸ್ತೆ ಕಾಮಗಾರಿ ಕುರಿತು ಸ್ಥಳೀಯರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಂಸದರು, ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿಗಳನ್ನು ಪರಿಶೀಲಿಸಿ, ಅಗತ್ಯ ಅನುದಾನ ದೊರಕಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುಂದುವಾಡ ಕೆರೆ ಸಮೀಪದ ಕೆಳಸೇತುವೆ ಸಂಪರ್ಕ ರಸ್ತೆಯ ವಿನ್ಯಾಸದ ಕುರಿತು ರೈತರು ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಸ್ಪಂದಿಸಿ, ಸ್ಥಳೀಯರಿಗೆ ಅನುಕೂಲವಾಗುವಂತೆ ರಸ್ತೆ ಸಂಪರ್ಕ ಮತ್ತು ಜೋಡಣೆಯಲ್ಲಿ ಅಗತ್ಯ ಬದಲಾವಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಒತ್ತಾಯಿಸಿದ್ದರು. ಅದರಂತೆ ಕಾಮಗಾರಿ ಮುಂದುವರಿದಿದೆ ಎಂದು ಸಂಸದರು ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ–48ರ ಆರು ಪಥಗಳ ಅಭಿವೃದ್ಧಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿರುವ ಭಾಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸರ್ವೀಸ್ ರಸ್ತೆಗಳನ್ನು ಅಗತ್ಯವಿರುವೆಡೆ ವಿಸ್ತರಿಸುವುದರ ಜೊತೆಗೆ, ರಸ್ತೆ ದೀಪಗಳು, ಸ್ಪಷ್ಟ ಸೂಚನಾ ಫಲಕಗಳು ಹಾಗೂ ಮಳೆನೀರು ಹರಿಯುವ ಚರಂಡಿಗಳ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮರಳು, ಜಲ್ಲಿ ಸೇರಿದಂತೆ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ದ್ವಿಚಕ್ರ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅಪಘಾತ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯೋಜನೆಯ ತಾಂತ್ರಿಕ ವಿವರಗಳನ್ನು ನೀಡಿದರು. ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ರಸ್ತೆ ಸಂಪರ್ಕ, ಸರ್ವೀಸ್ ರಸ್ತೆ ಮತ್ತು ಮಳೆನೀರು ನಿಲುಗಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಸದೆಯ ಗಮನಕ್ಕೆ ತಂದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles